ಚಿತ್ರದುರ್ಗ: ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದು ಮುಖ್ಯಮಂತ್ರಿಗಳ ಪರಮಾಧಿಕಾರ. ಇದರಲ್ಲಿ ರಾಜ್ಯಾಧ್ಯಕ್ಷರ ಹಸ್ತಕ್ಷೇಪ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಸೋಮವಾರ ಚಿತ್ರದುರ್ಗ ಮುರುಘಾ ಮಠಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರ ಜತೆ ಮಾತನಾಡಿದರು.
ಸಚಿವ ಸಂಪುಟ ವಿಸ್ತರಣೆಯಲ್ಲಿ ನನ್ನ ಹಸ್ತಕ್ಷೇಪವಿಲ್ಲ, ಬದಲಾಗಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಶಾಸಕರಿಗೆ ಸಚಿವರಾಗುವ ಆಸೆ ಸಹಜವಾಗಿ ಇರುತ್ತದೆ. ಎಲ್ಲ ಜಿಲ್ಲೆಗಳಿಗೂ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಪೌರತ್ವ ತಿದ್ದುಪಡಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷ ಈಗಾಗಲೇ ಬೌದ್ಧಿಕ ಹಾಗೂ ಸಂಘಟನಾತ್ಮಕವಾಗಿ ದಿವಾಳಿಯಾಗಿದೆ. ಹಿಂದೆ ಬ್ರಿಟಿಷರು ನಮ್ಮನ್ನ ಡಿವೈಡ್ ಅಂಡ್ ರೂಲ್ ಮಾಡುತ್ತಿದ್ದರು. ಈಗ ಅವರು ಹೋದ ಮೇಲೆ ಕಾಂಗ್ರೆಸ್ ನಮ್ಮನ್ನು ಹೊಡೆದು ಆಳುವ ಕೆಲಸ ಮಾಡುತ್ತಿದೆ ಎಂದರು.
ಪೌರತ್ವ ತಿದ್ದುಪಡಿಯಿಂದ ಮುಸ್ಲಿಂ ಸಮುದಾಯಕ್ಕೆ ತೊಂದರೆ ಇಲ್ಲ. ಅಲ್ಪಸಂಖ್ಯಾತರು ಗಟ್ಟಿ ಆಗುತ್ತಾರೆ ಬಿಜೆಪಿ ಮೇಲೆ ಮುಸ್ಲಿಮರಿಗೆ ನಂಬಿಕೆ ಬಂದಿದೆ. ಈಗ ಕಾಂಗ್ರೆಸ್ ಪಕ್ಷಕ್ಕೆ ಅಲ್ಪಸಂಖ್ಯಾತರಾಗುವ ಭಯ ಬಂದಿದೆ ಎಂದರು.
ಮುರುಘಾ ಮಠದಲ್ಲಿ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರಿಂದ ಆಶೀರ್ವಾದ ಪಡೆದ ನಂತರ ಮಾದಾರ ಚನ್ನಯ್ಯ ಗುರುಪೀಠ, ಭೋವಿ ಗುರುಪೀಠಗಳಿಗೆ ಭೇಟಿ ನೀಡಿದರು.
ಇದೇ ವೇಳೆ ಕುಂಚಿಟಿಗ ಮಠದ ಡಾ.ಶ್ರೀ ಶಾಂತವೀರ ಸ್ವಾಮೀಜಿ ನೇತೃತ್ವದಲ್ಲಿ ಸಮುದಾಯದ ಮುಖಂಡರು ಕೇಂದ್ರದ ಒಬಿಸಿ ಪಟ್ಟಿಗೆ ಕುಂಚಿಟಿಗರನ್ನು ಸೇರಿಸಲು ಒತ್ತಾಯಿಸಿ ಮನವಿ ಸಲ್ಲಿಸಿದರು.