Advertisement

ಶೀಘ್ರವೇ ಸಿದ್ದುಗೆ ಜೈಲು ಖಚಿತ: ನಳಿನ್ ಕುಮಾರ್ ಕಟೀಲ್‌

08:24 PM Oct 31, 2022 | Team Udayavani |

ಬಾಗಲಕೋಟೆ: ರಾಜ್ಯದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆದಿದ್ದೇ ಸಿದ್ದರಾಮಯ್ಯ ಸಿಎಂ ಆಗಿದ್ದಾಗ. ಹೀಗಾಗಿ ಅತಿ ಹೆಚ್ಚು ಭ್ರಷ್ಟಾಚಾರಿ ಮುಖ್ಯಮಂತ್ರಿ ಅಂದರೆ ಅವರೇ. ಅವರ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಎಲ್ಲಾ ದಾಖಲೆಗಳನ್ನು ಲೋಕಾಯುಕ್ತಕ್ಕೆ ಕೊಡಲಾಗಿದೆ. ಈಗಲೇ ಅವರನ್ನು ಜೈಲಿಗೆ ಕಳುಹಿಸುವುದಿಲ್ಲ. ಈಗಲೇ ಜೈಲಿಗೆ ಕಳುಹಿಸಿದರೆ ಚುನಾವಣೆ ವೇಳೆಗೆ ಜಾಮೀನು ಸಿಗುತ್ತದೆ. ಹೀಗಾಗಿ ಕಾದು ನೋಡಿ. ಅವರನ್ನು ಶೀಘ್ರವೇ ಜೈಲಿಗೆ ಕಳುಹಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ನಮ್ಮ ಸರ್ಕಾರ, ಸರ್ವ ಸಮಾಜಗಳ ಬಗ್ಗೆ ಗೌರವ ಕೊಡುತ್ತಿದೆ ಎಂಬ ಭಾವನೆ ಜನರಲ್ಲಿದೆ. ಅಲ್ಲದೇ ಬಿಜೆಪಿ ಸರ್ಕಾರದ ಯೋಜನೆಗಳು ಜನರನ್ನು ತಲುಪುತ್ತಿವೆ. ಅದು ಬಿಜೆಪಿ ಸಂಕಲ್ಪ ಯಾತ್ರೆ ವೇಳೆ ಬಹಿರಂಗ ಕೂಡ ಆಗಿದೆ. ಇನ್ನು ಯಡಿಯೂರಪ್ಪ ಅವರ ಬಗ್ಗೆ ಅಪಾರ ಗೌರವವಿದೆ. ಅವರ ನೇತೃತ್ವ ಬೇಕು. ಅವರ ಮಾರ್ಗದರ್ಶನದಲ್ಲಿ ಬೊಮ್ಮಾಯಿ ಸರ್ಕಾರ ಇರಬೇಕು ಎಂಬ ಭಾವನೆ ಇದೆ ಎಂದರು.

ಒಂದು ಕೋಟಿ ಚೆಕ್‌: ಬಿಜೆಪಿ ಸರ್ಕಾರದ ಜನಪರ ಯೋಜನೆಗಳು, ವರ್ಚಸ್ಸು ಕುಂದಿಸಲು ಕಾಂಗ್ರೆಸ್‌ನವರು ನಿತ್ಯವೂ ಶೇ.40ರ ಸರ್ಕಾರ ಎಂದು ಟೀಕೆ ಮಾಡುತ್ತಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರದ ಫೈಲ್‌ಗ‌ಳು ನಮ್ಮ ಬಳಿ ಇವೆ. ಅವು ಲೋಕಾಯುಕ್ತಕ್ಕೆ ಹೋಗಿವೆ. ಅವರು ಅಧಿಕಾರದಲ್ಲಿದ್ದಾಗ 1 ಕೋಟಿ ಮೊತ್ತದ ಚೆಕ್‌ ಪಡೆದಿರುವುದು ಹೊರ ಬಂದಿದೆ. ಚೆಕ್‌ ಪಡೆದಿದ್ದಕ್ಕೆ ಆಧಾರ ಇವೆ. ಇನ್ನೂ ಮೂರು ಪ್ರಕರಣಗಳು ಹೊರ ಬರಲಿವೆ. ನಾನೊಬ್ಬ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಹೇಳುತ್ತಿದ್ದೇನೆ.

ನಮ್ಮವರು ಯಾರೇ ಭ್ರಷ್ಟಾಚಾರ ಮಾಡಿದ್ದರೂ ದಾಖಲೆ ಇದ್ದರೆ ಲೋಕಾಯುಕ್ತಕ್ಕೆ ಕೊಡಿ. ಯಾರೇ ಇರಲಿ. ಅವರನ್ನು ಬಂಧಿಸಲಿ. ಸುಮ್ಮನೆ ಜನರ ದಾರಿ ತಪ್ಪಿಸಲು ಶೇ.40ರ ಸರ್ಕಾರ ಎಂದು ಹೇಳುವುದು ಬಿಡಿ. ಸಿದ್ದರಾಮಯ್ಯ ಅವರನ್ನು ಇಷ್ಟು ಬೇಗ ಜೈಲಿಗೆ ಕಳುಹಿಸಿದರೆ, ಚುನಾವಣೆ ವೇಳೆ ಬೇಲ್‌ ಪಡೆದು ಹೊರ ಬರುತ್ತಾರೆ. ಅವರನ್ನು ಜೈಲಿಗೆ ಕಳಹಿಸುವುದು ಮಾತ್ರ ಗ್ಯಾರಂಟಿ ಎಂದರು.

ರಾಜಕೀಯ ಖಳನಾಯಕ:
ಸಿದ್ದರಾಮಯ್ಯ ತಮ್ಮ ರಾಜಕೀಯ ಗುರು ದೇವೇಗೌಡರನ್ನೇ ತುಳಿದು ಜೆಡಿಎಸ್‌ನಿಂದ ಹೊರ ಬಂದರು. ಇಂದಿರಾ ಗಾಂಧಿಯನ್ನು ಕೆಟ್ಟ ಶಬ್ದಗಳಿಂದ ಬೈದವರು. ಅದೇ ಸೋನಿಯಾ ಗಾಂಧಿ ಕಾಲು ಹಿಡಿದು, ಭಿಕ್ಷೆ ಬೇಡಿ ಮುಖ್ಯಮಂತ್ರಿಯಾದರು. 2ನೇ ಬಾರಿ ಮುಖ್ಯಮಂತ್ರಿಯಾಗಲು ಹೋದರು. ಜನ ಅವರನ್ನು ಒಪ್ಪಲಿಲ್ಲ. ಯಡಿಯೂರಪ್ಪ ಸಿಎಂ ಆಗಬಾರದೆಂದು ತಮ್ಮ ವೈರಿ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದರು. ಒಂದೇ ವರ್ಷದಲ್ಲಿ ಕುಮಾರಸ್ವಾಮಿಗೆ ದ್ರೋಹ ಮಾಡಿದರು. ಸಿದ್ದರಾಮಯ್ಯ ಒಬ್ಬ ರಾಜಕೀಯ ಖಳನಾಯಕ ಎಂದರು.

Advertisement

ಎಲ್ಲರಿಗೂ ದ್ರೋಹ ಮಾಡಿದರೆ ಸಿದ್ದರಾಮಯ್ಯ ಅವರ ಪರಿಸ್ಥಿತಿ ಮುಂದೆ ಏನಾಗುತ್ತದೆ ನೋಡಿ. ಈಗ ಕ್ಷೇತ್ರ ಹುಡುಕುವ ಪರಿಸ್ಥಿತಿ ಬಂದಿದೆ. ಕ್ಷೇತ್ರವಿಲ್ಲ, ಜನ ಬೆಂಬಲವೂ ಇಲ್ಲ. ದ್ರೋಹ ಮಾಡಿದ್ದಕ್ಕೆ ದೇವರೂ ಕೈಬಿಟ್ಟಿದ್ದಾನೆ. ಕಾಂಗ್ರೆಸ್‌ನಲ್ಲಿ ಹಲವು ಗೊಂದಲಗಳಿವೆ. ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ. ಕಾಂಗ್ರೆಸ್‌ನಲ್ಲಿ ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯ ಎಂಬ ಎರಡು ಗುಂಪುಗಳಿವೆ. 3ನೇ ಗುಂಪು ಪ್ರಭಾವಶಾಲಿಯಾಗಿದೆ. ಸಿದ್ದರಾಮಯ್ಯ, ಖರ್ಗೆ, ಪರಮೇಶ್ವರ ಅವರನ್ನು ಸೋಲಿಸಿದ್ದರು. ಅವರಿಬ್ಬರನ್ನು ಸೋಲಿಸಿ ಮುಖ್ಯಮಂತ್ರಿ ಆಗಬೇಕೆಂದರೆ ಜನ ಆಶೀರ್ವಾದ ಮಾಡಲಿಲ್ಲ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next