ಮಂಗಳೂರು: ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಘೋಷಣೆ ಮಾಡಿದ್ದು, ನಾನು ಸ್ವಾಗತಿಸುತ್ತೇನೆ. ಆದರೆ ಇದಕ್ಕೆ ಹಣದ ಮೂಲ, ಹಣದ ಕ್ರೋಢೀಕರಣ, ಎಷ್ಟು ವರ್ಷ ಇರುತ್ತದೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಫಲಿತಾಂಶದ 24 ಗಂಟೆ ಅಂತ ಹೇಳಿ ಜನಾಕ್ರೋಶದ ಬಳಿಕ ತಡವಾಗಿ ಗ್ಯಾರೆಂಟಿ ಘೋಷಣೆ ಮಾಡಿದ್ದಾರೆ. ನಿರುದ್ಯೋಗ ಭತ್ಯೆಗೆ ಮಾನದಂಡ ಹಾಕಿದ್ದಾರೆ, ಮೊದಲು ಮಾನದಂಡದ ಬಗ್ಗೆ ಹೇಳಿರಲಿಲ್ಲ. ಖಾಸಗಿ ಬಸ್ಸುಗಳಲ್ಲಿ ಸಂಚರಿಸುವವರಿಗೆ ಏನು? ಕರಾವಳಿ ಜಿಲ್ಲೆಗಳಲ್ಲಿ ಖಾಸಗಿ ಬಸ್ ಇದೆ. ಹಿಂದಿನ ಪಿಂಚಣಿ ಯೋಜನೆಗಳ ಗತಿ ಏನೆಂದು ಹೇಳಲಿ. ರಾಜ್ಯದ ಬೊಕ್ಕಸದ ಹಣದ ಗತಿ ಏನು? ಯಾರಿಗೂ ಹೊರೆ ಆಗದೇ ಹೇಗೆ ನಿಯಂತ್ರಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಇದು ಚುನಾವಣೆ ಗಿಮಿಕ್ ಆಗಬಾರದು, ತಾ.ಪಂ, ಜಿ.ಪಂ ಚುನಾವಣೆ ಮುಂದಿಟ್ಟು ಯೋಜನೆ ಮಾಡಿದ್ದಾರಾ ಎನ್ನುವ ಅನುಮಾನವಿದೆ. ಹೀಗಾಗಿ ಜನರಿಗೆ ಹೊರೆಯಾಗದಂತೆ ಈ ಯೋಜನೆ ಜಾರಿಯಾಗಲಿ ಎಂದರು.