ಬಂಟ್ವಾಳ: ಬಂಟ್ವಾಳ ಬಿಜೆಪಿ ವತಿಯಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರಾದ್ಯಂತ 13 ದಿನಗಳ ಕಾಲ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆಯಲಿರುವ ಗ್ರಾಮ ವಿಕಾಸ ಯಾತ್ರೆ-ಗ್ರಾಮದೆಡೆಗೆ ಶಾಸಕರ ನಡಿಗೆ ಪಾದಯಾತ್ರೆಗೆ ಶನಿವಾರ ದ.ಕ. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಪೊಳಲಿ ಶ್ರೀ ರಾಜರಾಜೇಶ್ವರಿ ಸನ್ನಿಧಿಯಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿ ಆತಂಕವಾದ, ಪರಿವಾರವಾದ, ಭ್ರಷ್ಟಾಚಾರ ದೇಶಕ್ಕೆ ಕಾಂಗ್ರೆಸ್ ಕೊಡುಗೆಗಳಾಗಿವೆ. ಅರ್ಕಾವತಿ ಹಗರಣ ಬಯಲಿಗೆ ಬಂದರೆ ಮುಖ್ಯಮಂತ್ರಿ ಕನಸು ಕಾಣುವ ಸಿದ್ರಾಮಣ್ಣ ಜೈಲಿಗೆ ಹೋಗಲಿದ್ದಾರೆ ಎಂದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್ ನೀಡುವುದಾಗಿ ಕಾಂಗ್ರೆಸ್ ಹೇಳುತ್ತಿದ್ದು, ಡಿಕೆಶಿ ಇಂಧನ ಸಚಿವರಾಗಿದ್ದಾಗ ರೈತರ ಪಂಪ್‌ಸೆಟ್‌ಗಳಿಗೆ 10 ಸಾವಿರ ರೂ. ಶುಲ್ಕ ವಿಧಿ ಸಿರುವ ಜತೆಗೆ ವಿದ್ಯುತ್ ಕೇಳಿದ ಬೆಳ್ಳಾರೆಯ ವ್ಯಕ್ತಿಯನ್ನು ಜೈಲಿಗೆ ಅಟ್ಟಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ.
ಒಂದೇ ಒಂದು ಭ್ರಷ್ಟಾಚಾರದ ಆರೋಪ ಇಲ್ಲದ ಆಡಳಿತ ನೀಡಿದ ಕೀರ್ತಿ ಪ್ರಧಾನಿ ಮೋದಿ ಆಡಳಿತಕ್ಕೆ ಸಲ್ಲುತ್ತದೆ. ಮೋದಿ 2ನೇ ಬಾರಿ ಅಧಿಕಾರ ಸ್ವೀಕರಿಸಿದ ಬಳಿಕ ದ.ಕ. ಜಿಲ್ಲೆಯಲ್ಲಿ ಹೆದ್ದಾರಿಗಳ ಅಭಿವೃದ್ಧಿ ವೇಗವನ್ನು ಪಡೆದುಕೊಂಡಿದ್ದು, 2019ರ ಬಳಿಕ ಜಿಲ್ಲೆಗೆ ಕೇಂದ್ರದಿಂದ 23 ಸಾವಿರ ಕೋ.ರೂ. ಹರಿದು ಬಂದಿದೆ. ಈಗ ಮತ್ತೆ 16 ಸಾವಿರ ಕೋ.ರೂ. ಘೋಷಣೆಯಾಗಿದೆ ಎಂದರು.
Related Articles
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ನಡೆಯುವ 13 ದಿನಗಳ ಪಾದಯಾತ್ರೆಗೆ ಕಾರ್ಯಕರ್ತರು ಸಹಕಾರ ನೀಡುವಂತೆ ಮನವಿ ಮಾಡಿದರು.
ಪೊಳಲಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಪಾದಯಾತ್ರೆ ಆರಂಭಗೊಂಡಿತು. ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಪೊಳಲಿ ಕ್ಷೇತ್ರದ ಅರ್ಚಕರಾದ ಪಿ. ರಾಮ ಭಟ್, ಪಿ. ನಾರಾಯಣ ಭಟ್, ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ನಗರ ನೀರು ಸರಬರಾಜು- ಒಳಚರಂಡಿ ನಿಗಮದ ನಿರ್ದೇಶಕಿ ಸುಲೋಚನಾ ಜಿ.ಕೆ. ಭಟ್, ಜಿ.ಪಂ. ಮಾಜಿ ಸದಸ್ಯ ತುಂಗಪ್ಪ ಬಂಗೇರ, ಪಾದಯಾತ್ರೆಯ ಸಹಸಂಚಾಲಕರಾದ ಮಾಧವ ಮಾವೆ, ಸುದರ್ಶನ್ ಬಜ ಉಪಸ್ಥಿತರಿದ್ದರು.
ಮೊದಲ ದಿನದ ಪಾದಯಾತ್ರೆಯು ಪೊಳಲಿ ಕ್ಷೇತ್ರದಿಂದ ತೆಂಕಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ವರೆಗೆ ನಡೆದು ಬಳಿಕ ಸಾರ್ವಜನಿಕ ಸಭೆ ನೆರವೇರಿತು. ಪಾದಯಾತ್ರೆಯ ಸಂಚಾಲಕ ಬಿ.ದೇವದಾಸ್ ಶೆಟ್ಟಿ ಸ್ವಾಗತಿಸಿದರು. ಬಂಟ್ವಾಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಕಾರ್ಯಕ್ರಮ ನಿರ್ವಹಿಸಿದರು.