Advertisement

15 ದಿನಕ್ಕೊಮ್ಮೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಖುದ್ದು ಪರಿಶೀಲನೆ : ನಳಿನ್‌

12:59 AM Jan 07, 2022 | Team Udayavani |

ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66ರ ಬಿ.ಸಿ.ರೋಡ್‌-ಅಡ್ಡಹೊಳೆ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ಅದರ ಪ್ರಗತಿಯನ್ನು 15 ದಿನಕ್ಕೊಮ್ಮೆ ಖುದ್ದು ಪರಿಶೀಲಿಸುವೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ತಿಳಿಸಿದರು.

Advertisement

ಅವರು ಗುರುವಾರ ನಗರದ ದ.ಕ. ಜಿ.ಪಂ. ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಸ್ತೆ ಯೋಜನೆಯ ಪ್ರಗತಿಯ ಬಗ್ಗೆ ಸ್ಥಳೀಯ ಶಾಸಕರು ಮತ್ತು ಜಿಲ್ಲಾಧಿಕಾರಿ ಜತೆಗೂಡಿ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿ, ಸಮಸ್ಯೆಗಳೇನಾದರೂ ಇದ್ದರೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಶೇ. 5 – 10 ಪ್ರಗತಿ
ಪ್ರಸ್ತುತ ಬಿ.ಸಿ.ರೋಡ್‌-ಅಡ್ಡಹೊಳೆ ಭಾಗದ ಕಾಮಗಾರಿ ಶೇ. 5ರಿಂದ 10ರಷ್ಟು ಪ್ರಗತಿಯಾಗಿದೆ. ಕಲ್ಲಡ್ಕ ಮೇಲ್ಸೇತುವೆಯ ತಳಪಾಯ ಸಿದ್ಧಗೊಳಿಸುವ ಕೆಲಸ ನಡೆದಿದೆ. ಬಹುತೇಕ ಭೂಸ್ವಾಧೀನ ಕೆಲಸವೂ ಪೂರ್ಣಗೊಂಡಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ ಅನಿರುದ್ಧ್ ತಿಳಿಸಿದರು.

ಪೆರಿಯಶಾಂತಿ – ಗುಂಡ್ಯ ಭಾಗದಲ್ಲಿ ಆನೆ ಕಾರಿಡಾರ್‌ ಯೋಜನೆ ಬರುವುದರಿಂದ ಅಲ್ಲಿ ಅರಣ್ಯ ಇಲಾಖೆ ಮತ್ತು ಮೆಸ್ಕಾಂನವರ ಕೆಲವು ಸಮಸ್ಯೆಗಳಿದ್ದವು. ಈಗ ಭೂ ಸ್ವಾಧೀನಕ್ಕೆ ಸಂಬಂಧಿಸಿ ಅರಣ್ಯ ಇಲಾಖೆಯಿಂದ ಯಾವುದೇ ಸಮಸ್ಯೆ ಇಲ್ಲ. ಮೆಸ್ಕಾಂನವರ ಸಮಸ್ಯೆ ಮಾತ್ರ ಇದೆ. ಅದನ್ನು ಕೂಡಲೇ ಪರಿಹರಿಸ ಬೇಕು ಎಂದು ನಳಿನ್‌ ಸೂಚಿಸಿದರು.

ಬಿಕರ್ನಕಟ್ಟೆ-ಸಾಣೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಸಂಬಂಧಿಸಿ ಶೇ. 65ರಷ್ಟು ಭೂ ಸ್ವಾಧೀನ ಪ್ರಕ್ರಿಯೆ ಮುಗಿದಿದೆ. ಕಾಮಗಾರಿಯನ್ನು ಶೀಘ್ರ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದರು ತಿಳಿಸಿದರು.

Advertisement

ಗಡ್ಕರಿ ಭೇಟಿ ಮುಂದಕ್ಕೆ
ಕೇಂದ್ರ ಭೂ ಸಾರಿಗೆ ಖಾತೆ ಸಚಿವ ನಿತಿನ್‌ ಗಡ್ಕರಿ ಅವರು ಜ. 10ರಂದು ದ.ಕ. ಜಿಲ್ಲೆಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಕೊರೊನಾ ನಿರ್ಬಂಧದಿಂದಾಗಿ ಮುಂದೂಡಲಾಗಿದೆ. ಆದರೆ ರಾಷ್ಟ್ರೀಯ ಹೆದ್ದಾರಿ ಸಂಬಂಧಿತ ಕಾಮಗಾರಿಗಳು ಮುಂದುವರಿ ಯಲಿವೆ ಎಂದು ನಳಿನ್‌ ತಿಳಿಸಿದರು.

ಕೂಳೂರಿನಲ್ಲಿ ಹೊಸ ಸೇತುವೆ ಕಾಮಗಾರಿ ನಿರೀಕ್ಷಿತ ವೇಗ ಪಡೆದಿಲ್ಲ, ಅದನ್ನು ಚುರುಕುಗೊಳಿಸಬೇಕು. ಕೆಪಿಟಿಯಲ್ಲಿ ಫ್ಲೆ$ç ಓವರ್‌ ನಿರ್ಮಿಸುವ ಪ್ರಸ್ತಾವಕ್ಕೆ ಆದಷ್ಟು ಬೇಗ ತಾಂತ್ರಿಕ ಮತ್ತು ಹಣಕಾಸು ಬಿಡುಗಡೆ ಆಗುವಂತೆ ನೋಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಎಂಆರ್‌ಎಫ್ ಘಟಕ ಸ್ಥಳಾಂತರ
ಜಿಲ್ಲೆಯಲ್ಲಿ ತ್ಯಾಜ್ಯ ಪ್ರತ್ಯೇಕಿಸುವ ಎಂಆರ್‌ಎಫ್ (ಮೆಟೀರಿಯಲ್‌ ರಿಕವರಿ ಫೆಸಿಲಿಟಿ) ಘಟಕ ನಿರ್ಮಾಣಕ್ಕಾಗಿ 2.5 ಕೋಟಿ ರೂ. ಮಂಜೂರಾಗಿದೆ. ಇದಕ್ಕಾಗಿ ಮೊದಲು ಗಂಜಿಮಠದಲ್ಲಿ ಜಾಗ ಗುರುತಿಸಲಾಗಿತ್ತು. ಆದರೆ ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ತೆಂಕಎಡಪದವಿನಲ್ಲಿ ಸ್ಥಾಪಿಸಲಾಗುತ್ತಿದೆ. ಕೆಲಸವೂ ಆರಂಭವಾಗಿದೆ ಎಂದು ಜಿ.ಪಂ. ಸಿಇಒ ಡಾ| ಕುಮಾರ್‌ ತಿಳಿಸಿದರು. ಅಲ್ಲದೆ ಗೋಳ್ತಮಜಲು, ಉಪ್ಪಿನಂಗಡಿ, ಉಜಿರೆಗಳಲ್ಲಿ ಮಲ ತ್ಯಾಜ್ಯ ನಿರ್ವಹಣ ಘಟಕಗಳನ್ನು ನಿರ್ಮಿಸಲಾಗುತ್ತಿದೆ, ಇದನ್ನು 2.82 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಚುನಾವಣೆಗೆ ಮೊದಲು ಕೆಲಸ ಮುಗಿಸಿ
ಮುಂದೂಡಲಾಗಿರುವ ಜಿ.ಪಂ., ತಾ.ಪಂ. ಚುನಾವಣೆಗಳನ್ನು ಆದಷ್ಟು ಶೀಘ್ರ ನಡೆಸುವಂತೆ ನ್ಯಾಯಾಲಯದಿಂದ ಆದೇಶ ಬರುವ ಸಾಧ್ಯತೆಗಳಿವೆ; ಹಾಗಾಗಿ ಅತೀ ಅಗತ್ಯವಾಗಿ ಆಗಬೇಕಾದ ಕಾಮಗಾರಿಗಳಿಗೆ ಬೇಗ ಕ್ರಿಯಾಯೋಜನೆ ರೂಪಿಸಿ ಅನುಮೋದನೆ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ರಾಜೇಂದ್ರ ತಿಳಿಸಿದರು.

ಮೋದಿ ಚಿತ್ರ ಹಾಕಿ: ನಳಿನ್‌
ಕೇಂದ್ರ ಸರಕಾರದ ಯೋಜನೆಗಳ ಉದ್ಘಾಟನೆ ಅಥವಾ ಶಿಲಾನ್ಯಾಸದ ಸಂದರ್ಭ ಸಂಬಂಧಪಟ್ಟ ಜಾಗದಲ್ಲಿ ಪ್ರಧಾನಿ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಶಾಸಕರ ಭಾವಚಿತ್ರವನ್ನು ಪ್ರದರ್ಶಿಸಬೇಕು ಎಂದು ನಳಿನ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
– ಮೇಯರ್‌ ಪ್ರೇಮಾನಂದ ಶೆಟ್ಟಿ, ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next