Advertisement

ಸ್ವಾಮಿ ವಿವೇಕಾನಂದರ ಕನಸು ನನಸು ಮಾಡುತ್ತಿರುವ ಮೋದಿ: ನಳಿನ್‍ಕುಮಾರ್ ಕಟೀಲ್

08:38 PM Oct 10, 2021 | Team Udayavani |

ಬೆಂಗಳೂರು: ಸ್ವಾಮಿ ವಿವೇಕಾನಂದರ ಜಗದ್ವಂದ್ಯ ಭಾರತದ ಕನಸು ನನಸು ಮಾಡಲು ನರೇಂದ್ರ ಮೋದಿ ಅವರು ಶಿಲಾನ್ಯಾಸ ಮಾಡಿದರು. ಅವರ ಪರಿಶ್ರಮದ ಫಲವಾಗಿ ಜಗತ್ತಿನ ಅತಿ ಎತ್ತರಕ್ಕೆ ಭಾರತ ಏರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು.

Advertisement

ಬಿಟಿಎಂ ಲೇಔಟ್‍ನಲ್ಲಿ ಯುವ ಮೋರ್ಚಾ ಸಂಘಟಿಸಿದ ಅತಿ ದೊಡ್ಡ ನವಭಾರತ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಅತ್ಯುತ್ತಮ ಮೇಳ ಸಂಘಟಿಸಿದ ಯುವ ಮೋರ್ಚಾವನ್ನು ಅವರು ಅಭಿನಂದಿಸಿದರು.

ವಿವೇಕಾನಂದರು ಜಗದ್ವಂದ್ಯ ಭಾರತದ ಕನಸನ್ನು ಕಂಡರು. ಅದನ್ನು ಸಾಕಾರಗೊಳಿಸಲು ಯೋಜನೆಗಳನ್ನು ಮಾಡಿದರು. ಸ್ವದೇಶಿ ಚಿಂತನೆಗಳಿಂದ ದೇಶ ಮುನ್ನಡೆಯಬೇಕು. ಗುಲಾಮಗಿರಿಯಿಂದ ಮುಕ್ತವಾಗಬೇಕು ಎಂಬ ಆಶಯ ಅವರದಾಗಿತ್ತು. ಸ್ವಾತಂತ್ರ್ಯಾನಂತರದ 75 ವರ್ಷಗಳಲ್ಲಿ 65 ವರ್ಷ ಕಾಂಗ್ರೆಸ್ ದೇಶದ ಆಡಳಿತ ನಡೆಸಿತು. ಕಾಂಗ್ರೆಸ್ ಬಡತನ, ಹಸಿವು, ರೋಗ ಮತ್ತು ನಿರುದ್ಯೋಗವನ್ನು ದೇಶದ ಜನರಿಗೆ ಕೊಡುಗೆಯಾಗಿ ನೀಡಿತ್ತು ಎಂದು ವಿವರಿಸಿದರು. ವಂಶಾಡಳಿತದ ರಾಜಕಾರಣ ಕಾಂಗ್ರೆಸ್ ಕೊಡುಗೆ ಎಂದು ತಿಳಿಸಿದರು.

ಭವಿಷ್ಯತ್ ಕಾಲಕ್ಕೆ ಬೆಳಕು ನೀಡಿದ ನಾಯಕ ನರೇಂದ್ರ ಮೋದಿ ಎಂದು ತಿಳಿಸಿದ ಅವರು, ದೇಶದಲ್ಲಿ 2014ರವರೆಗೆ ಯುವಕರು ಸ್ವಾಮಿ ವಿವೇಕಾನಂದರನ್ನು ಪೂಜಿಸಿ ಆರಾಧಿಸಿದರು. ಯುವಕರು ಅಮಿತಾಬ್ ಬಚ್ಚನ್, ಶಾರುಖ್ ಖಾನನ್ನು ಪ್ರೀತಿಸಿದ್ದು ಕಂಡಿದ್ದೇವೆ. ಆದರೆ, 2014ರ ಬಳಿಕ ಈ ದೇಶದ ಯುವಕರು ನರೇಂದ್ರ ಮೋದಿಯವರನ್ನು ಆರಾಧಿಸಿದ್ದಾರೆ. ಅವರನ್ನೇ ಪ್ರೀತಿಸಿದ್ದಾರೆ. ನರೇಂದ್ರ ಮೋದಿ ಈ ದೇಶದ ಐಕಾನ್ ಆಗಿ ಹೊರಹೊಮ್ಮಿದ್ದಾರೆ ಎಂದು ತಿಳಿಸಿದರು.

ಯಾವ ದೇಶಗಳು ಭಾರತವನ್ನು ಭಿಕ್ಷುಕರ ರಾಷ್ಟ್ರ, ರೋಗಗ್ರಸ್ತ ದೇಶ, ನಿರುದ್ಯೋಗಿಗಳ ದೇಶ ಎಂದು ಹೀನಾಯವಾಗಿ ಕಂಡು ಕರೆಯುತ್ತಿದ್ದವೋ ಅಂಥ ದೇಶಗಳು ಕೋವಿಡ್ ಬಂದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಡೆ ನೋಡಿ ಲಸಿಕೆ ಕಳುಹಿಸಿ ಕೊಡಲು ವಿನಂತಿಸಿದವು. ಆ ದೇಶಗಳಿಗೆ ಲಸಿಕೆ ಕಳುಹಿಸಿದ ಪ್ರಧಾನಿ ನರೇಂದ್ರ ಮೋದಿ ಎಂದು ಮೆಚ್ಚುಗೆ ಸೂಚಿಸಿದರು.

Advertisement

ನರೇಂದ್ರ ಮೋದಿಯವರು ಕೇವಲ ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಿಲ್ಲ. ಜಗದ್ವಂದ್ಯ ಭಾರತಕ್ಕೂ ಶಿಲಾನ್ಯಾಸ ಮಾಡಿದ್ದಾರೆ. ಅತಿ ಹೆಚ್ಚು ಪ್ರೀತಿಯ ನಾಯಕ ನರೇಂದ್ರ ಮೋದಿ ಮತ್ತು ಅತ್ಯಂತ ಪ್ರೀತಿಯ ದೇಶ ಭಾರತ ಎಂದು ಅಮೇರಿಕದ ಅಧ್ಯಕ್ಷರೂ ತಿಳಿಸುವಂತಾಗಿದೆ ಎಂದು ವಿವರಿಸಿದರು.

ಆರ್‍ಆರ್ ನಗರದಲ್ಲಿ ಕಮಲ ಅರಳಿದೆ. ಅಂಥ ಜಾಗದಲ್ಲಿ ಕಮಲ ಅರಳಿದ ಮೇಲೆ ಇನ್ನು ಬಿಟಿಎಂ ಲೇಔಟ್ ಬಾಕಿ ಆದೀತೇ ಎಂದು ಪ್ರಶ್ನಿಸಿದ ಅವರು, ಮುಂದಿನ ದಿನಗಳಲ್ಲಿ ಸಿದ್ದರಾಮಣ್ಣ, ರಾಮಲಿಂಗಾರೆಡ್ಡಿಗೆ ಚುನಾವಣೆಗೆ ನಿಲ್ಲಲು ಜಾಗ ಇಲ್ಲದ ಸ್ಥಿತಿ ಉಂಟಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರೀಯ ಬಿಜೆಪಿ ಯುವಮೋರ್ಚಾ ಅಧ್ಯಕ್ಷರು ಮತ್ತು ಸಂಸದರೂ ಆದ ತೇಜಸ್ವಿ ಸೂರ್ಯ, ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರಾದ ಡಾ॥ ಸಂದೀಪ್ ಕುಮಾರ್  ಕೆ. ಸಿ, ಸಚಿವರಾದ ಮುನಿರತ್ನ, ಜಿಲ್ಲಾ ಪ್ರಭಾರಿಗಳಾದ ಗೋಪಿನಾಥ್ ರೆಡ್ಡಿ, ರಾಜ್ಯ ಬಿಜೆಪಿ ಯುವ ಮೋರ್ಚಾ ಕೋಶಾಧ್ಯಕ್ಷರು ಹಾಗೂ ನವಭಾರತ ಮೇಳದ ರಾಜ್ಯ ಸಂಚಾಲಕರಾದ ಅನಿಲ್ ಶೆಟ್ಟಿ, ಮಂಡಲದ ಅಧ್ಯಕ್ಷರಾದ ರಾಜೇಂದ್ರ, ರಾಜ್ಯ ಬಿಜೆಪಿ ಯುವ ಮೋರ್ಚಾ  ಪ್ರಧಾನ ಕಾರ್ಯದರ್ಶಿಗಳಾದ ಅಜಿತ್ ಹೆಗ್ಡೆ, ಬೆಂಗಳೂರು ದಕ್ಷಿಣ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳಾದ ಅಶ್ವತ್ಥನಾರಾಯಣ್ ಮತ್ತು ಸುದರ್ಶನ್, ಖಜಾಂಚಿ ಶ್ರೀಧರ್ ರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next