Advertisement

‘ನಲಿಕಲಿ’ಗೆ ಸುಗಮಕಾರರ ಸಮೂಹ ತಟ್ಟೆ

01:41 AM Sep 04, 2020 | Hari Prasad |

ವಿದ್ಯಾಗಮದಡಿಯಲ್ಲಿ ಮುಖಾಮುಖಿ, ಬೇಸಿಕ್‌ ಸೆಟ್‌ ಮತ್ತು ಇಂಟರ್ನೆಟ್‌ ಇರುವ ಫೋನ್‌ಗಳ ಆಧಾರದ ಮೇಲೆ ಮೂರು ವಿಧದ ತರಗತಿಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಒಂದರಿಂದ ಹತ್ತನೇ ತರಗತಿ ಮಕ್ಕಳಿಗೆ ಈ ವಿಧಾನದ ಬೋಧನೆ ಅಳವಡಿ ಸಿದ್ದರೂ ನಲಿಕಲಿ ಮಕ್ಕಳಿಗೆ ಈ ಮೂರೂ ವಿಧಗಳು ಆಪ್ಯಾಯಮಾನವಾಗಿಲ್ಲ.

Advertisement

ಕೋವಿಡ್‌-19 ಕಾರಣಕ್ಕೆ ಅನೇಕ ವಲಯಗಳೊಂದಿಗೆ ಶೈಕ್ಷಣಿಕ ವಲಯದ ಚಟುವಟಿಕೆಗಳಲ್ಲಿಯೂ ಹಿನ್ನಡೆಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸಾರ್ವಜನಿಕ ಚರ್ಚೆ ನಡೆದು ಎರಡು ತಿಂಗಳುಗಳು ಕಳೆದ ಮೇಲೆ ಸಾರ್ವಜನಿಕ ಶಿಕ್ಷಣ ಇಲಾಖೆಯೇ ಮಕ್ಕಳಿಗೆ ‘ವಿದ್ಯಾಗಮ’ ನಿರಂತರ ಕಲಿಕಾ ಕಾರ್ಯಕ್ರಮದ ಭಾಗವಾಗಿ ತರಗತಿ ಪ್ರಾರಂಭಿಸಿತು.

ಶಿಕ್ಷಕ- ಪೋಷಕ- ಸಮುದಾಯ ಮುತುವರ್ಜಿ ವಹಿಸಿದರೆ ಪ್ರಸ್ತುತ ಕಾರ್ಯಕ್ರಮ ಯಶಸ್ಸು ಪಡೆಯುವಲ್ಲಿ ಅನುಮಾನವಿಲ್ಲ. ವಿದ್ಯಾಗಮದಡಿಯಲ್ಲಿ ಮುಖಾಮುಖಿ, ಬೇಸಿಕ್‌ ಸೆಟ್‌ ಮತ್ತು ಇಂಟರ್ನೆಟ್‌ ಇರುವ ಫೋನ್‌ಗಳ ಆಧಾರದ ಮೇಲೆ ಮೂರು ವಿಧದ ತರಗತಿಗಳನ್ನು ನಿರ್ವಹಣೆ ಮಾಡಲಾಗುತ್ತಿದೆ.

ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ಈ ವಿಧಾನದ ಬೋಧನೆ ಅಳವಡಿಸಿದ್ದರೂ ನಲಿಕಲಿ ಮಕ್ಕಳಿಗೆ ಈ ಮೂರೂ ವಿಧಗಳು ಅಷ್ಟೊಂದು ಆಪ್ಯಾಯಮಾನವಾಗಿ ಕಾಣುತ್ತಿಲ್ಲ. ಯಾವುದೇ ನರ್ಸರಿ ಹಂತವನ್ನು ಪೂರೈಸದೇ ನೇರವಾಗಿ ಸರಕಾರಿ ಶಾಲೆಗೆ ದಾಖಲಾಗುವ ಮಗು ಆರಂಭದಲ್ಲಿ ಅವಲಂಬನೆಯಾಗುವುದು ಶಿಕ್ಷಕನನ್ನೇ.
ಎಲ್ಲ ತರಗತಿಗಳಿಗೆ ವಿದ್ಯಾಗಮವೇನೋ ಸರಿ. ಆದರೆ ಎಳವೆಯಲ್ಲಿನ ನಲಿಕಲಿ ಮಕ್ಕಳಿಗೆ ಅದು ಕಠಿನವಾದುದು. ಏಕೆಂದರೆ ಈ ಪ್ರಕಾರದ ಬೋಧನ ಪದ್ಧತಿಯಲ್ಲಿ ಮಗುವಿನ ಕಲಿಕೆಗೆ ಬೇರೊಬ್ಬರ ಸಹಾಯದ ಅಗತ್ಯತೆ ಹೆಚ್ಚಿರುತ್ತದೆ.

ಪ್ರಸ್ತುತ ಸಂದರ್ಭದಲ್ಲಿ ನಲಿಕಲಿ ರೀತಿಯ ಚಟುವಟಿಕೆ ಆಧಾರಿತ ಬೋಧನ ವಿಧಾನ ಸರಳ ಕಲಿಕೆಗೆ ಕಷ್ಟಸಾಧ್ಯವಾಗಿದೆ. ಹಾಗೆಂದು ಶೈಕ್ಷಣಿಕ ಚಟುವಟಿಕೆಗಳನ್ನು ಪೂರ್ಣ ಸ್ಥಗಿತಗೊಳಿಸುವುದೂ ಸಾಧುವಲ್ಲ.
ಕೆಲವು ಮಾರ್ಪಾಡುಗಳ ಮೂಲಕ ನಲಿಕಲಿ ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಎಲ್ಲರೂ ಯೋಚಿಸಬೇಕಾಗಿದೆ.

Advertisement

ನಲಿಕಲಿ ಬೋಧನ ಪದ್ಧತಿ: ನಲಿಕಲಿ ಬೋಧನ ಪದ್ಧತಿಯಲ್ಲಿ ಪೂರ್ವಸಿದ್ಧತ ಹಂತ, ಕಲಿಕಾ ಪೂರಕ ಹಂತ, ಕಲಿಕಾಂಶ ಹಂತ, ಅಭ್ಯಾಸ ಹಂತ, ಬಳಕೆ ಹಂತ ಮತ್ತು ಮೌಲ್ಯಮಾಪನ ಹಂತ ಎನ್ನುವ ಕಲಿಕಾ ಗೋಪುರದ ಆರು ಹಂತಗಳಿವೆ.

ಶಿಕ್ಷಕರ ಭಾಗಶಃ ಸಹಾಯ, ಶಿಕ್ಷಕರ ಸಂಪೂರ್ಣ ಸಹಾಯ, ಗೆಳೆಯನ ಸಂಪೂರ್ಣ ಸಹಾಯ, ಗೆಳೆಯನ ಭಾಗಶಃ ಸಹಾಯ ಮತ್ತು ಸ್ವಕಲಿಕೆ ಎಂಬ ಐದು ತಟ್ಟೆಗಳೊಂದಿಗೆ ಒಂದು ಸಾಮೂಹಿಕ ತಟ್ಟೆಯಿರುತ್ತದೆ. ಇವು ಮಗುವಿನ ಬಹು ಹಂತದ ಕಲಿಕೆಗೆ ಪೂರಕವಾಗಿರುತ್ತವೆ. ಮಗು ಮೇಲಿನ ಆರು ಹಂತಗಳನ್ನು ತಟ್ಟೆಯ ಚಲನೆಯೊಂದಿಗೆ ತನ್ನ ಮೈಲುಗಲ್ಲನ್ನು ಪೂರೈಸುತ್ತದೆ. ಕಲಿಕಾ ಏಣಿ, ಮೆಟ್ಟಿಲು, ಲೋಗೊ, ಪ್ರಗತಿ ನೋಟ, ಕಾರ್ಡ್‌, ವಾಚಕ, ಅಭ್ಯಾಸ ಪುಸ್ತಕ, ವಾಲ್‌ಸ್ಲೇಟ್‌/ಮಕ್ಕಳ ಕಪ್ಪು ಹಲಗೆ, ಕಲಿಕಾ ಚಪ್ಪರ, ಗುಂಪು ತಟ್ಟೆ, ಹವಾಮಾನ ನಕ್ಷೆ ಇವು ಈ ಪದ್ಧತಿಯಲ್ಲಿರುವ ಪರಿಕಲ್ಪನೆಗಳು.

ಇವುಗಳ ಬಳಕೆಯ ಪ್ರಮಾಣ ಅಧಿಕಗೊಂಡಷ್ಟು ಮಗುವಿನ ಕಲಿಕೆ ಹೆಚ್ಚು ದೃಢೀಕರಣಗೊಳ್ಳುವುದು ಮತ್ತು ಕಲಿಕಾ ಮಟ್ಟ ಮೇಲ್ಮುಖವಾಗಿ ಚಲನೆಗೊಳ್ಳುವುದು. ನಲಿಕಲಿ ಬೋಧನ ವಿಧಾನದಲ್ಲಿ ಶಿಕ್ಷಕನ ಉಪನ್ಯಾಸ ಅಥವಾ ಬೋಧನೆಗೆ ಹೆಚ್ಚು ಅವಕಾಶವಿರುವುದಿಲ್ಲ. ಆದರೆ ಅವನ ಗಮನಿಸುವಿಕೆ ಮತ್ತು ಅನುಕೂಲಿಸುವಿಕೆ ಬಹುಮುಖ್ಯ ಪಾತ್ರವಹಿಸುತ್ತವೆ. ಶಿಕ್ಷಕರ ಜ್ಞಾನ ವರ್ಧಿಸುವುದಕ್ಕೋಸ್ಕರ ಬೆಳ್ಳಿಚುಕ್ಕಿ-1,2,3 ಮತ್ತು ಸಂಭ್ರಮ ಎನ್ನುವ ತರಬೇತಿ ಸಾಹಿತ್ಯಗಳಿವೆ.

ಸವಾಲುಗಳು: ಮಗು ಶಾಲೆಗೆ ಪ್ರವೇಶಿಸಿದ ಮೊದಲ ಆರು ತಿಂಗಳು ಶಾಲೆಗೆ ಹೊಂದಿಕೊಳ್ಳುವ ಪರ್ವಕಾಲ. ಪ್ರಸ್ತುತದ ಪರಿಸ್ಥಿತಿಯಲ್ಲಿ ಮಗು ಕೋಣೆಗೆ ಪ್ರವೇಶಿಸುವುದೇ ಕಷ್ಟಸಾಧ್ಯವಾಗಿದೆ. ಇಂಥ ಪರಿಸ್ಥಿತಿಯಲ್ಲಿ ನಲಿಕಲಿ ತರಗತಿಯ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಕಲಿಸುವುದು ಶಿಕ್ಷಕನಿಗೂ ಬಹುದೊಡ್ಡ ಸವಾಲು. ಹೇಗೋ ಮಕ್ಕಳ ಮನೆಗೆ ತೆರಳಿ ಬೋಧಿಸಲು ಸಂಪರ್ಕ ಸಾಧಿಸಿದರೂ ಬೋಧನಾ ವಿಧಾನದಲ್ಲಿಯ ಕೆಲವು ಅಡೆತಡೆಗಳು ಮಗುವಿನ ಕಲಿಕೆಯನ್ನು ಸಂಪೂರ್ಣ ಕಸಿದುಬಿಡುತ್ತವೆ.

ವಿದ್ಯಾರ್ಥಿಗಳ ಕಲಿಕಾ ಮಟ್ಟದ ಗುಂಪುಗಳ ರಚನೆಯ ಅಸಾಧ್ಯತೆ, ಕಾರ್ಡ್‌ ಮತ್ತು ಕಲಿಕಾ ಸಾಮಗ್ರಿಗಳ ಕೊರತೆ, ಪಪೆಟ್‌ಗಳ ಸಿದ್ಧತೆ ಮತ್ತು ನಿರ್ವಹಣೆಯ ಸಮಸ್ಯೆ. ಇವೆಲ್ಲವುಗಳ ಜತೆಗೆ ತಮಗೆ ಬೇಕಾದ ಕಲಿಕಾ ತಟ್ಟೆಗಳು ಮತ್ತು ಅದರಲ್ಲಿರಬೇಕಾದ ಸಹಾಯಕರ ಅನುಪಸ್ಥಿತಿ ನಲಿಕಲಿ ಕಲಿಕೆಗಿರುವ ಬಹುದೊಡ್ಡ ಹಿನ್ನಡೆಯಾಗಿದೆ.

ಮಗುವಿನ ಸಹಾಯಕ್ಕೆ ಬರಬೇಕಾದ ಗುಂಪುಗಳು: ತರಗತಿಯೊಳಗಿನ ಜ್ಞಾನವನ್ನು ಶಾಲೆಯ ಹೊರಗಿನ ಜೀವನದೊಂದಿಗೆ ಸಂಬಂಧೀಕರಿಸಬೇಕೆಂಬ ಎನ್‌ಸಿಎಫ್-2005 ರ ಆಶಯವು ಕೋವಿಡ್ 19 ಕಾರಣದಿಂದಾಗಿ ‘ಹೊರಗಿನ ಜೀವನ’ವೇ ಸಹಜ ರೂಪದಲ್ಲಿ ತರಗತಿಯ ಜ್ಞಾನವಾಗಿ ಮಗುವಿಗೆ ದೊರೆಯುವ ಆವಶ್ಯಕತೆಯಿದೆ. ಆದರೆ ಕಲಿಕಾ ಕೋಣೆಯಲ್ಲಿದ್ದ ಉಳಿದೆಲ್ಲ ತಟ್ಟೆಗಳು ಮಗುವಿನ ಕಲಿಕೆಗೆ ಸಹಾಯಕ್ಕೆ ಬರಲಾರವು. ಇಂಥ ಪರಿಸ್ಥಿತಿಯಲ್ಲಿ ಸಂದರ್ಭಕ್ಕನು ಗುಣವಾಗಿ ಮನೆಯೆಂಬುದೇ ಸಾಮೂಹಿಕ ತಟ್ಟೆಯಾಗಬೇಕಾಗುತ್ತದೆ.

ಹಿರಿಯ ವಿದ್ಯಾರ್ಥಿಗಳು, ನೆರೆಹೊರೆ, ಸ್ವಯಂ ಸೇವಕರು ಇತ್ಯಾದಿ ಇತರ ತಟ್ಟೆಗಳಾಗಿ ಭಾಗಶಃ ಅಥವಾ ಸಂಪೂರ್ಣ ಕೆಲಸ ನಿರ್ವಹಿಸಿದಲ್ಲಿ ನಲಿಕಲಿಯನ್ನು ತಕ್ಕಮಟ್ಟಿಗೆಯಾದರೂ ಮನೆಯಿಂದ ನಿರ್ವಹಿಸಲಿಕ್ಕೆ ಸಾಧ್ಯವಿದೆ. ಇಲ್ಲಿ ಸಮುದಾಯದ ಅನಕ್ಷರತೆ ಮತ್ತು ನಲಿಕಲಿ ಜ್ಞಾನದ ಅಗತ್ಯತೆ ಕೊರತೆಯಾಗಿ ಕಾಡಬಹುದು. ಆದರೆ ಈ ಪ್ರಕ್ರಿಯೆಯಲ್ಲಿ ಶಿಕ್ಷಕನಾದವನು ಮೇಲಿನ ಕಾಲ್ಪನಿಕ ತಟ್ಟೆಗಳ ಚಟುವಟಿಕೆಗಳನ್ನು ಗಮನಿಸುವ ಮೂಲಕ ಅಗತ್ಯ ಮಾರ್ಗದರ್ಶನವನ್ನು ಮಾಡಬೇಕಾಗುತ್ತದೆ.

ಪೂರ್ವಸಿದ್ಧತೆ ಚಟುವಟಿಕೆಯಿಂದ ಮಗು ಸ್ವಕಲಿಕೆಗೆ ಒಳಗೊಳ್ಳುವವರೆಗೂ ಮೇಲಿನವರು ಮಗುವಿನ ಕಲಿಕೆಯಲ್ಲಿ ಸಹಾಯಕರಾಗಬೇಕು. ಅಗತ್ಯತೆಯಿರುವ ಸಂದರ್ಭಗಳಲ್ಲಿ ಸಮೂಹ ಮಾಧ್ಯಮಗಳನ್ನು ಬೋಧನೋಪಕರಣಗಳನ್ನಾಗಿ ಬಳಸಿಕೊಂಡಲ್ಲಿ ಕಲಿಕೆ ಪ್ರಕ್ರಿಯೆ ಸುಲಭ ಮತ್ತು ವೇಗಗೊಳ್ಳುತ್ತದೆ. ಮನೆ, ನೆರೆಹೊರೆ, ಸಮುದಾಯದ ಯಾರಿಗೂ ಇದರ ತರಬೇತಿ ಇರುವುದಿಲ್ಲ. ಹೀಗಾಗಿ ಅವರಿಗೆ ಈ ತರಗತಿಯ ನಿರ್ವಹಣೆಯಲ್ಲಿ ಅನೇಕ ಸವಾಲುಗಳು ಎದುರಾಗುತ್ತವೆ. ಮೇಲಿನ ಸವಾಲುಗಳನ್ನು ನಿರ್ವಹಿಸಲು ಮಗುವಿನ ಮನೆಯವರಿಗೆ ಸೂಕ್ತ ಮಾರ್ಗದರ್ಶನದ ಆವಶ್ಯಕತೆಯಿದೆ.

ಹಾಗೆ ನೋಡಿದರೆ ವಾಸ್ತವದಲ್ಲಿ ನಲಿಕಲಿಯ ಪರಿಕಲ್ಪನೆಯ ಅರ್ಥೈಸುವಿಕೆ ಮತ್ತು ಅದರ ಪ್ರಚಾರವನ್ನು ಸಮುದಾಯಕ್ಕೂ ನೀಡಬೇಕಾದ ಅನಿವಾರ್ಯವಿದೆ. ಸಮುದಾಯದಲ್ಲಿ ನಲಿಕಲಿ ಬಲವರ್ಧಿಸುವ ಕಾರ್ಯವನ್ನು ಇಂದಿನ ಶಿಕ್ಷಣ ವ್ಯವಸ್ಥೆಯು ತಪ್ಪದೇ ಮಾಡಬೇಕಾಗುತ್ತದೆ.  ಏಕೆಂದರೆ ಶಿಕ್ಷಕ- ಪೋಷಕ- ಸಮುದಾಯ- ವ್ಯವಸ್ಥೆ ಎಲ್ಲರ ಸಕ್ರಿಯ ಭಾಗವಹಿಸುವಿಕೆ ಇಂದಿನ ಅಗತ್ಯ ಮತ್ತು ಅನಿವಾರ್ಯ.

ಜ್ಞಾನ ಪ್ರವೇಶಿಸುವಿಕೆಯ ಹಂತದಲ್ಲಿರುವ ನಲಿಕಲಿ ಮಕ್ಕಳಿಗೆ ಪ್ರತಿಯೊಬ್ಬರೂ ಸಂದರ್ಭಕ್ಕನುಗುಣ ವಾಗಿ ತಮ್ಮ ಸಹಾಯ ಹಾಗೂ ಪ್ರೇರಣೆಯ ಮೂಲಕ ಜ್ಞಾನವನ್ನು ಕಟ್ಟಿಕೊಡಬೇಕು. ಅಂದಾಗ ಮಾತ್ರ ಭವಿಷ್ಯದ ಭಾರತ ಈ ಮಕ್ಕಳಿಂದ ಉಜ್ವಲಗೊಳ್ಳುತ್ತದೆ. ಇಂಥ ಪ್ರಗತಿಪರ ಚಿಂತನೆ ಗಳೇ ಎಲ್ಲರ ಜ್ಞಾನದ ಸರಕಾಗಿರಲಿ.

– ಡಾ| ಬಿ. ಎಂ. ಬೇವಿನಮರದ

Advertisement

Udayavani is now on Telegram. Click here to join our channel and stay updated with the latest news.

Next