Advertisement

ವಾಟ್ಸಪ್‌ನಲ್ಲಿ ಪಾಕಿಸ್ತಾನ ಪರ ಬರಹ: ನಾಲತವಾಡದ ವ್ಯಕ್ತಿ ಜೈಲಿಗೆ

07:30 PM May 15, 2023 | Team Udayavani |

ಮುದ್ದೇಬಿಹಾಳ: ಪಾಕಿಸ್ತಾನ ಪರ ಬರಹ ಬರೆದು ಅದನ್ನು ವಾಟ್ಸಪ್‌ನಲ್ಲಿ ಪೋಸ್ಟ್ ಮಾಡಿರುವ ಆರೋಪದ ಮೇರೆಗೆ ನಾಲತವಾಡ ಪಟ್ಟಣದ ಕಾನಬಾವಿ ಓಣಿಯ ನಿವಾಸಿ ವೀರೇಶ ಪರಯ್ಯ ಕರ್ಪೂರಮಠ (31) ಎಂಬಾತನನ್ನು ಇಲ್ಲಿನ ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ನಂತರ ವಿಜಯಪುರದ ದರ್ಗಾ ಜೈಲಿಗೆ ಕಳಿಸಿದ ಘಟನೆ ಸೋಮವಾರ ಸಂಜೆ ಬೆಳಕಿಗೆ ಬಂದಿದೆ.

Advertisement

ವೀರೇಶ, ಶಾಸಕರಾಗಿ ಆಯ್ಕೆಯಾಗಿರುವ ಕಾಂಗ್ರೆಸ್‌ನ ಅಪ್ಪಾಜಿ ನಾಡಗೌಡರ ಹೆಸರಿನ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎನ್ನುವ ಬರಹವನ್ನು ಪೋಸ್ಟ್ ಮಾಡಿ ಶೇರ್ ಮಾಡಿದ್ದ. ಇದು ಅಲ್ಲಿನ ಅನ್ಯ ಕೋಮಿನವರಿಗೆ ಗೊತ್ತಾಗಿ ಅವನನ್ನು ನಾಲತವಾಡದಲ್ಲಿರುವ ಪೊಲೀಸ್ ಔಟ್‌ಪೋಸ್ಟ್ ಗೆ ಕರೆತಂದು ಪೊಲೀಸರ ವಶಕ್ಕೆ ಒಪ್ಪಿಸಿ ಕ್ರಮಕ್ಕೆ ಆಗ್ರಹಿಸಿದ್ದರು.

ವಿಚಾರಣೆ ನಡೆಸಿದ ಮೇಲೆ ವೀರೇಶ ತಪ್ಪು ಮಾಡಿದ್ದು ಸಾಬೀತಾಗಿತ್ತು. ಅಲ್ಲಿಂದ ಅವನನ್ನು ಮುದ್ದೇಬಿಹಾಳ ಪೊಲೀಸ್ ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಲಾಗಿತ್ತು. ವೀರೇಶನು ಬರಹ ರೂಪದಲ್ಲಿ ಪಾಕಿಸ್ತಾನ ಪರ ಘೋಷಣೆ ಹಾಕಿರುವುದು ದೃಢಪಟ್ಟಿರುವ ಹಿನ್ನೆಲೆ ನಾಲತವಾಡ ಭಾಗದ ಬೀಟ್ ಪೊಲೀಸ್ ಪಿ.ಎಸ್.ಪಾಟೀಲ ಅವರು ಸರ್ಕಾರದ ತರ್ಪೆ ಸಲ್ಲಿಸಿದ ದೂರಿನನ್ವಯ ಐಪಿಸಿ ಕಲಂ 153 (ಗಲಭೆ ಉಂಟು ಮಾಡುವ ಉದ್ದೇಶದಿಂದ ಕೇವಲ ಪ್ರಚೋದನೆ ನೀಡುವುದು), 153 (ಎ) (ಗುಂಪುಗಳ ನಡುವೆ ದ್ವೇಷ ಉತ್ತೇಜಿಸಿ ಸೌಹಾರ್ದತೆ ಕದಡಲು ಯತ್ನಿಸುವುದು) ಮತ್ತು 153 (ಬಿ) (ರಾಷ್ಟ್ರೀಯ ಏಕೀಕರಣಕ್ಕೆ ಪೂರ್ವಾಗ್ರಹಪೀಡಿತ ಆರೋಪ, ಸಮರ್ಥನೆ) ಅಡಿ ಪಿಎಸೈ ಆರೀಫ ಮುಷಾಪುರಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಕೊಂಡಿದ್ದಾರೆ. ಇದು ಜಾಮೀನು ರಹಿತ ಅಪರಾಧವಾಗಿದ್ದು ಇದಕ್ಕೆ 3 ಅಥವಾ 5 ವರ್ಷಗಳ ಕಾರಾಗೃಹ ಶಿಕ್ಷೆ ಅಥವಾ ದಂಡ, ಕೆಲ ಸಂದರ್ಭಗಳಲ್ಲಿ ಶಿಕ್ಷೆ ಮತ್ತು ದಂಡ ಎರಡನ್ನೂ ವಿಧಿಸಲು ಅವಕಾಶಗಳಿವೆ.

ಇದು 2ನೇ ಘಟನೆ:
ನಾಲತವಾಡದಲ್ಲಿ ಇಂಥದ್ದೇ ಘಟನೆ ಕೆಲ ವರ್ಷಗಳ ಹಿಂದೆ ಪುಲ್ವಾಮಾ ದಾಳಿಯ ಸಂದರ್ಭ ನಡೆದಿತ್ತು. ಆಗಲೂ ಆರೋಪಿ ವಿರುದ್ಧ ಅಲ್ಲಿನ ಜನರು ಆಕ್ರೋಶಗೊಂಡು ನಾಲತವಾಡ ಹೊರ ಪೊಲೀಸ್ ಠಾಣೆ ಎದುರು ಗದ್ದಲ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ನಡೆದದ್ದು ಎರಡನೇ ಘಟನೆಯಾಗಿದೆ.

ಹೊಂದಾಣಿಕೆಗೆ ಯತ್ನ ವಿಫಲ:
ಘಟನೆಯ ಗಂಭೀರತೆ ಅರಿತಿದ್ದರೂ ಕೂಡ ನಾಲತವಾಡದ ಒಂದಿಬ್ಬರು ಯುವ ಮುಖಂಡರು ಪರಸ್ಪರ ಮಾತುಕತೆ ಮೂಲಕ ಪ್ರಕರಣದಲ್ಲಿ ಹೊಂದಾಣಿಕೆ ಮಾಡಿಸಿ ಇದು ಪೊಲೀಸ್ ಠಾಣೆ ಮೆಟ್ಟಿಲು ಏರಿ ಮುಂದುವರೆಯದಂತೆ ನೋಡಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ ಘಟನೆಯ ಗಂಭೀರತೆ ಅರಿತಿದ್ದ ಪೊಲೀಸರು ಹೊಂದಾಣಿಕೆಯ ಪ್ರಯತ್ನಗಳಿಗೆ ಸೊಪ್ಪು ಹಾಕದೆ ದಿಟ್ಟತನ ಮೆರೆದಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಶೆಗೆ ಕಾರಣವಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next