Advertisement

ಮೂಡಬಿದಿರೆ ಪ್ರತಿಭೆ ಗಾಯಕ ನಕಾಶ್‌ ಅಝೀಝ್: ಕರಾವಳಿ ತಾರೆಗೆ ನಾಳೆ ಉದಯವಾಣಿಯ  ಗೌರವ

09:16 AM Jul 27, 2022 | Team Udayavani |

ಮಣಿಪಾಲ: ಕನ್ನಡ, ಹಿಂದಿ, ತೆಲುಗು, ತಮಿಳು, ಬೆಂಗಾಲಿ, ಗುಜರಾತಿ ಸಹಿತ ವಿವಿಧ ಭಾರತೀಯ ಭಾಷೆಯ ಚಲನಚಿತ್ರಗಳಲ್ಲಿ ಗಾಯಕರಾಗಿ, ಸಂಗೀತ ಸಂಯೋಜಕರಾಗಿ ಖ್ಯಾತಿ ಗಳಿಸಿದ ಯುವಜನರ ನೆಚ್ಚಿನ ಗಾಯಕ ನಕಾಶ್‌ ಅಝೀಝ್ ಅವರು ಗುರುವಾರ ಉದಯ ವಾಣಿಯ ಕಚೇರಿಗೆ ಭೇಟಿ ನೀಡುವರು.

Advertisement

ಕರಾವಳಿ ಕರ್ನಾಟಕ ಪ್ರತಿಭೆಯಾಗಿರುವ ನಕಾಶ್‌ ಅವರು ಮೂಡುಬಿದರೆ ಮೂಲದವರು. ಸದ್ಯ ಮುಂಬಯಿನಲ್ಲಿ ನೆಲೆಸಿದ್ದಾರೆ. ಜು. 28ರಂದು ತೆರೆ ಕಾಣಲಿರುವ ನಟ ಸುದೀಪ್‌ ಅಭಿನಯ ವಿಕ್ರಾಂತ್‌ ರೋಣ ಸಿನೆಮಾದ ರಾ..ರಾ..ರಕ್ಕಮ್ಮ ಗೀತೆಗೆ ಇವರು ದನಿ ತುಂಬಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ಗೀತೆಯೂ ಹೌದು.

ನಕಾಶ್‌ ಅವರು ಹಿಂದಿ ಮತ್ತು ತೆಲುಗು ಚಲನಚಿತ್ರಗಳಲ್ಲಿ ನೂರಾರು ಗೀತೆಗಳನ್ನು ಹಾಡಿದ್ದಾರೆ. ತಮಿಳು ಭಾಷೆಯ ಚಿತ್ರಗಳ ಹಾಡಿಗೂ ದನಿ ನೀಡಿದ್ದು, ಕನ್ನಡದ ತಮಸ್ಸು, ಬ್ರಹ್ಮ, ಉಪ್ಪಿ-2, ಯುವರತ್ನ, ಬಿಯಸ್ಟ್‌, ವಿಕ್ರಾಂತ್‌ ರೋಣ-ಹೀಗೆ ಹಲವು ಚಲನಚಿತ್ರಗಳಲ್ಲಿ ಗೀತೆಯನ್ನು ಹಾಡಿ, ತೆರೆಮರೆಯಲ್ಲೆ ಇದ್ದು ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಬೆಂಗಾಲಿ, ಗುಜರಾತಿ ಚಿತ್ರಗಳಲ್ಲಿಯೂ ಹಾಡಿರುವ ಜತೆಗೆ ಪಾಕಿಸ್ಥಾನದ ಸಿನೆಮಾವೊಂದರಲ್ಲಿ ಗೀತೆ ಯನ್ನು ಹಾಡಿದ ಖ್ಯಾತಿಯೂ ಇವರಿಗಿದೆ. 2011ರಿಂದ ಈವರೆಗೆ ವಿವಿಧ ಸಿನೆಮಾ ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಸಂಗೀತ ಸಂಯೋಜಕ ಹಾಗೂ ಗಾಯಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅನೂಪ್‌ ಭಂಡಾರಿ ನಿರ್ದೇಶಿಸಿ ಸುದೀಪ್‌ ಅಭಿನಯಿಸಿರುವ ಬಹುನಿರೀಕ್ಷಿತ ವಿಕ್ರಾಂತ ರಾಣಾ ಚಿತ್ರ ಬಿಡುಗಡೆಗೊಳ್ಳುತ್ತಿರುವ ಸಂದರ್ಭದಲ್ಲೇ ನಕಾಶ್‌ ಉದಯವಾಣಿಯಲ್ಲಿ ತಮ್ಮ ಸಂಭ್ರಮವನ್ನು ಹಂಚಿಕೊಳ್ಳುವರು.

ನಕಾಶ್‌ ಅವರು ಹಾಡಿರುವ ಅನೇಕ ಚಿತ್ರ ಗೀತೆಗಳು ಯುವ ಜನತೆಯ ಬಾಯಲ್ಲಿ ಸದಾ ಗುಣುಗುತ್ತಿರುತ್ತವೆ. ಆದರೆ ನಕಾಶ್‌ ಕರ್ನಾಟಕ ದವರು, ಅದರಲ್ಲೂ ಕರಾವಳಿ ಮೂಲದವರು ಎಂಬುದು ಬಹುತೇಕರಿಗೆ ತಿಳಿದಿಲ್ಲ. ನಕಾಶ್‌ ಅವರು ತಮ್ಮ ಕಂಠಸಿರಿಯ ಮೂಲಕ ಯುವ ಮನಸ್ಸುಗಳನ್ನು ಸೆಳೆದಿದ್ದಾರೆ. ಭಾರತೀಯ ಸಿನೆಮಾ ರಂಗದಲ್ಲಿ ತನ್ನದೇ ಸಾಧನೆ ಮಾಡಿ, ಛಾಪು ಮೂಡಿಸಿರುವ ನಕಾಶ್‌ ಅವರು ಜು. 28ರಂದು ಉದಯವಾಣಿ ಕಚೇರಿಗೆ ಆಗಮಿಸಿ ಅಭಿನಂದನೆ ಸ್ವೀಕರಿಸುತ್ತಿರುವುದು ವಿಶೇಷ.

ಕರ್ನಾಟಕದ ಕಂದ
ಕರಾವಳಿಯ ತಾರೆ
ನಕಾಶ್‌ ಅಝೀಝ್ ದೂರದ ಮುಂಬಯಿ ಯಲ್ಲಿ ಕರಾವಳಿಯ ಬಾವುಟ ಹಾರಿಸುತ್ತಿರುವ ಪ್ರತಿಭೆ. ಏಕಕಾಲದಲ್ಲಿ ಕರುನಾಡಿನ ಕಂದನಾಗಿ, ಕರಾವಳಿಯ ಪ್ರತಿಭೆಯಾಗಿರುವ ನಕಾಶ್‌ ಅವರನ್ನು ಉದಯವಾಣಿಯು “ಈ ಮಣ್ಣಿನ ಮಗ’ ಎಂದು ಪರಿಚಯಿಸುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next