Advertisement

ಹೆಣ್ಣಿನೊಡಲಿನ ನೇಯ್ಗೆಗಳು 

12:30 AM Jan 20, 2019 | |

ಪ್ರೀತಿಯ ಉಮಾ,
ನಿನ್ನ ಕವಿತೆಗಳನ್ನೆಲ್ಲ ಓದಿದೆ. ಓದುವಾಗ ನನಗೆ ಅಚ್ಚರಿಯೆನಿಸಲಿಲ್ಲ. ಯಾಕೆಂದರೆ, ನಿನ್ನನ್ನು ದಶಕಗಳಿಂದ ಅರಿತ ನನ್ನಲ್ಲಿ ನಿನ್ನ ಮನಸ್ಸಿನ ಫೋಟೋ ದಾಖಲಾಗಿತ್ತು. ಈ ಕವಿತೆಗಳೆಲ್ಲ ಆ ಫೋಟೋಗೆ ಅನುಸಾರವಾಗಿಯೇ ಇವೆ. ಅಷ್ಟೇ ಅಲ್ಲ, ತಮ್ಮ ಶಬ್ದಗಳನ್ನು ತಾವೇ ಹುಡುಕಿಕೊಂಡಂತೆ ಇವೆ. ನಾವು ನಮ್ಮಷ್ಟಕ್ಕೇ ಮಾತುಕತೆಯಾಡುವಾಗ, ಚರ್ಚೆ ಮಾಡುತ್ತಿರುವಾಗಲೆಲ್ಲ ನಿನ್ನ ಸಂವೇದನೆಯ ಸ್ವರೂಪ ಸ್ಪಷ್ಟವಾಗಿ ಕಂಡದ್ದರಿಂದಲೋ ಏನೋ ಈ ಕವಿತೆಗಳು ಎಲ್ಲಿಯೂ ಕವಿತೆಯಾಗಬೇಕೆಂದು ಹುಟ್ಟಿದವಲ್ಲ, ಅಲ್ಲಲ್ಲೇ
ಹೂವಿನಂತೆ ಅರಳಿಕೊಂಡಂಥವು ಅಂತನಿಸಿತು. ಒಳಮಾತಿನ, ಹೊರಮಾತಿನ, ಬದುಕಿನ ವಿವಿಧ ತಲ್ಲಣ ತಳಮಳದ, ಸಹಸ್ಪಂದನದ, ವಿಸ್ಮಯದ,  ತಾಳುವಿಕೆಯೆಂಬ ತಪದ, ವಿಷಾದವಿದ್ದೂ ಅದರಲ್ಲಿ ಅದ್ದಿಹೋಗದ ಈ ಕವನಗಳು ನಿಜಕ್ಕೂ ನನಗೆ ಒಂದು ರೀತಿಯಲ್ಲಿ ನಿನ್ನುಸಿರ ನಾನಾ ಬಗೆಯ ಉಸಿರಾಟಗಳಾಗಿಯೇ ಕೇಳಿಸಿದವು. ನನ್ನ ವತಿಯಿಂದ ಹೇಳಬೇಕೆಂದರೆ, ಕಾವ್ಯವೆಂದರೆ ಹೀಗೆಯೇ, ಅಂತರಾಳದಲ್ಲಿ ಏಳುವ ವಿವಿಧ ಅಲೆಗಳಿಗನುಸಾರ ಏರಿಳಿವ ಉಸಿರಾಟ, ಆ ಏರಿಳಿತಕ್ಕೆ ಸರಿಯಾಗಿ ಎಲ್ಲೆ
ಲ್ಲಿಂದಲೋ ಸೆಳಕೊಂಡು ಬಂದು ಜೊತೆಗೂಡಿ ನೆರವಾಗುವ ಶಬ್ದಸಖ್ಯ. ನಮ್ಮನ್ನು ಬಚಾವು ಮಾಡುವವೂ ಅವೇ. ಇಂದುಗಳಿಂದ ಬಿಡುಗಡೆ ಮಾಡಿ ನಾಳಿನ ಸೂರ್ಯೋದಯಕ್ಕೆ ನಮ್ಮನ್ನು ಯಥಾಪ್ರಕಾರ ಅಣಿಮಾಡುವವೂ ಅವುಗಳೇ.

Advertisement

ನಿನ್ನ ಪದ್ಯಗಳಲ್ಲಿ ಮುಖ್ಯವಾಗಿ ನನಗೆ ಕಾಣಿಸಿದ ಕೆಲವು: ಮಂದಿಯಲ್ಲಿ ನೀನು ನಿನ್ನನ್ನು ಕಂಡುಕೊಳ್ಳುವ, ಅವರ ಬದುಕಿನ ಬೇಗೆಯ ಒಳಹೊಕ್ಕು ಚಿಂತಿಸುವ ಕಳವಳಿಸುವ ಬಗೆ. 

ನಟ್ಟ ನಡು ಹಗಲು ಹೊತ್ತು ಮಾರುವ ಸೊಪ್ಪಿನವಳು ಎದೆಯ ನೋವೆಲ್ಲ… ಗಂಟಲಿಗೆ ಬಂದಂತೆ ಕೂಗೇ ಕೂಗುವಳು ಸೊಪ್ಪಮ್ಮೊ ಸೊಪ್ಪು ಈ ಕೂಗಿನ ಭರ ನಿನ್ನೊಳಗೆ ಏಳಿಸುವ ತರಂಗಗಳು ಇದಕ್ಕೆ ಮಾದರಿ. ಇಂಥ ಹಲವು ಪದ್ಯಗಳು ಇಲ್ಲಿವೆ ಮತ್ತು ಇಲ್ಲಿರುವ ಕವಿಯನ್ನು ನಮಗೆ ತೋರಿಸಿಬಿಡುತ್ತವೆ. 

ಜೊತೆಗೆ- 
ನೀನು ಫೋಟೋದಲ್ಲಿ ಕಂಡದ್ದಕ್ಕಿಂತ ಬೇರೆಯೇ’ಸತ್ಯ ಹೇಳಿದ್ದು ಅವಳೊಬ್ಬಳೇ … ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬವೇ ನಾನಲ್ಲ ಇನ್ನು ಫೋಟೋದಲ್ಲಿರುವ ನಾನು ನಾನಾಗಲು ಹೇಗೆ ಸಾಧ್ಯ? ಎನುವ, ಇನ್ನೊಬ್ಬರಲ್ಲಿ ನಿನ್ನನ್ನು ಕಂಡುಕೊಳ್ಳುತ್ತಲೇ “ನಾನು ಯಾರು’ ಎಂದು ನಿನ್ನಲ್ಲೇ ನೀನು ಎಲ್ಲಿ ಎಲ್ಲೆಂದು ತಡಕಿಕೊಳ್ಳುವ ಪರಿ. ಈ ಎರಡು ಉದ್ದಕ್ಕೂ ಒಂದಕ್ಕೊಂದು ಜೋಡಿಯಾಗಿಯೇ ಇವೆ. 
  
ಎರಡನೆಯದು, ಬಾಹ್ಯದಲ್ಲಿ ಒಂದೇ ಭಾವಜೀವ ಎಂದು ಕಾಣುವ ದಾಂಪತ್ಯ ಒಳಗಿಂದ ಬಗೆಬಗೆಯಲ್ಲಿ ಮುಖಾಮುಖೀಯಾಗುತ್ತ, ಅಲ್ಲಲ್ಲೇ ಏಳುವ ಉರಿಗಾಳಿಯನ್ನು ಸಹಿಸಿ ಶಮನಿಸುತ್ತ ಪ್ರೀತಿಯ ಅಂತದ್ವೀಪ ಆರದಂತೆ ಕಾಪಾಡಿಕೊಂಡು ಬರುವ ದೃಢನಡೆಯ ಚಿತ್ರಣ. ಇದಕ್ಕೆ ಹಲವಾರು ಉದಾಹರಣೆಗಳು ಈ ಸಂಕಲನದಲ್ಲಿ ಇವೆ. ಮೊದಲ ಪದ್ಯದಲ್ಲೇ ಇದು ರೂಪಕಾತ್ಮಕವಾಗಿ ಆಳದ ಸಣ್ಣನೆಯ ಗುನುಗಿನಂತೆ. ಆದರೆ ಸಶಕ್ತವಾಗಿ ಹೇಗೆ ಕಾಣಿಸುತ್ತಿದೆ ನೋಡು! 

ಕಳೆ ತೆಗೆಯಲು ಶುರುಮಾಡುತ್ತೇವೆ ಸಂದುಗೊಂದಿನದನ್ನು ಬಲವಾಗಿ ಕೆಲವನ್ನು ಮೆದುವಾಗಿ ನಿಧನಿಧಾನ ಒಂದೊಂದೇ ಒಂದೊಂದೇ ಕಿತ್ತೂಗೆದಂತೆ ನಾವಿಬ್ಬರೂ ಹತ್ತಿರ  ಹತ್ತಿರವಾಗುತ್ತಾ ನಮ್ಮಿಬ್ಬರ ಕೈಬೆರಳು ತಂತಾನೇ ಬೆಸೆದುಕೊಳ್ಳುತ್ತವೆ
ಅಂಗೈಯ ಬಿಸುಪು ಮತ್ತೆ ಎದೆಯನ್ನು ಬೆಚ್ಚಗಾಗಿಸುತ್ತದೆ  (ಹಿತ್ತಲು) ಮತ್ತು – ಮುಂದುವರಿದಿದೆ ನಡಿಗೆ ಹೊರಳಿ ನೋಡುತ್ತೇವೆ ಕಂಡ ಕನಸುಗಳನ್ನು ನೆನೆನೆನೆದು ನಗುತ್ತೇವೆ (ಪಯಣ) ನೆನೆಯುವುದೇ ದೊಡ್ಡದು, ಅದರಲ್ಲಿಯೂ ನಗುವುದು ಇನ್ನೂ ದೊಡ್ಡದು. ನಡಿಗೆ ಮುಂದುವರಿದಂತೆ ಮುಖದ ಗಂಟುಗಳು ಹೆಗ್ಗಂಟುಗಳಾಗಿ ಬಿಡುವ ದುರಂತವನ್ನು ದಾಟಿಕೊಂಡ ಸುಖವಲ್ಲವೆ ಇದು? ಕಾರಣ, ಇಲ್ಲಿ ನಮ್ಮ ನೆನಪುಗಳೇಕೆ ತಾಳೆಯಾಗುತ್ತಿಲ್ಲ (ನೆನಪು) ಎಂಬ ವಿಷಾದದೊಂದಿಗೇ ಜೊತೆ ಜೊತೆಗೆ ನಡೆಯುವಾಗ ದೀಪ ಯಾರ ಕೈಯಲ್ಲಿದ್ದರೇನು? ಜೊತೆಗೆ ನಡೆಯುವುದಷ್ಟೇ ಮುಖ್ಯ (ನಡೆ )  ಎಂಬ ವಿವೇಕ ಶಿಖೆಯಿದೆ. 

Advertisement

ನನಗೆ ತುಂಬ ಇಷ್ಟವಾದ ಇನ್ನೊಂದು ಪದ್ಯ ಇರಲಿ ಎಲ್ಲ ಹೀಗೆ ಹೀಗೆ. ಇದು ಚಿಕ್ಕಪದ್ಯ ಇರಬಹುದು, ಆದರೆ ಇಲ್ಲಿ ಪುಟ್ಟದೊಂದು ದರ್ಶನವನ್ನೇ ತೋರಿಸಿ ಬಿಟ್ಟೆಯಲ್ಲೆ! ನಮಗೇ ಅರಿವಿಲ್ಲದೆ ವಿವಿಧ ಜಾತಿ ಬಣ್ಣಗಳಲ್ಲಿ ಹುಟ್ಟಿಬರುವ ಮನುಕುಲದ ನಾವು ನಾಕು ದಿನದ ಆಟ ಮುಗಿಸಿ ತೆರಳುವವರು. ನಮ್ಮ ಉಪದ್ವ್ಯಾಪಗಳೆಲ್ಲ ಹೀಗೆ ಒಂದು ರೀತಿಯಲ್ಲಿ ಮಕ್ಕಳಾಟದಂತೆಯೇ ಬಾಲಿಶವಾಗಿದೆ. ಎಲ್ಲ ಇಷ್ಟಕ್ಕೇ ಇದ್ದಿದ್ದರೆ? ಹೀಗೆಯೇ ನಡೆಯುತ್ತಿದ್ದರೆ?… ಬಹಳ ಚೆಲುವಾಗಿ ಮತ್ತು ಗಾಢಹಂಬಲದಲ್ಲಿ ಸುಲಲಿತವಾಗಿ ಹೊಮ್ಮಿದೆ ಈ ಕವನ! 

ಅಮ್ಮ, ರೀಫಿಲ್, ಪುಟ್ಟಕ್ಕನ ಓಲೆ, ಕಳೆದು ಹೋದವಳು ಇತ್ಯಾದಿ ಕವನಗಳು ನನಗೆ ಇಷ್ಟವಾದವು. ಜೊತೆಗೆ, “ಆ ನಂತರ’ ಎಂಬ ಕವನ, ವಡೆ ಪಾಯಸ ಬರುತ್ತಿದೆಇನ್ನೂ ಸಾರನ್ನವೇ ಮುಗಿದಿಲ್ಲ…

-ಯಾರ ಧ್ವನಿ? ಒಳಗಿಂದ ಉಮ್ಮಳಿಸಿದ  ಬಿಕ್ಕು ಯಾರದೋ ಅಬ್ಬರದ ನಗುವಿನಲ್ಲಿ ಅಡಗಿ ಹೋಗುತ್ತಿದೆ   ಇದರಲ್ಲಿನ ವಾಸ್ತವ ಮತ್ತು ತಪ್ತತೆಯಲ್ಲಿ ಅದ್ದಿದ ದನಿ ಓದುವಾಗ ಸ್ವಗತದ ಪಿಸುಬಿಸಿಯಲ್ಲಿ ಕತೆಯೊಂದು ಕವನದಲ್ಲಿ ಸಂಗೋಪಿಸಿದಂತೆಯೂ ಆಗಿ ಮನದಲ್ಲಿ ಇಳಿದು ಬಿಡುತ್ತದೆ. ನಿನ್ನ ಕೆಲವು ಕವನಗಳಲ್ಲಿ ಹೀಗೆ ಕತೆಯಾಗ ಹೊರಟು ಕವನವಾಗಿ ಬೆಳೆದ ಪದ್ಯಗಳಿವೆ. ಗಮನಿಸಿದೆಯ?  ಅಮ್ಮ, ಅತಿಥಿ, ಕಳೆದು ಹೋದವಳು, ಕಡೇ ನಾಲ್ಕು ಸಾಲು- ಮುಂತಾದವು ಇದಕ್ಕೊಂದು ಉದಾಹರಣೆ. ಇದನ್ನು ಯಾಕೆ ಹೇಳಿದೆ ಎಂದರೆ, ನಿನ್ನಲ್ಲಿ ಕತೆಗಾತಿಯ ಎಲ್ಲ ಗುಣಗಳೂ ಇವೆ ಎಂದು ಹೇಳಲು. ಕವನದಲ್ಲೇ ಎಲ್ಲವನ್ನೂ ಹೇಳಲು ಸಾಧ್ಯವಾಗದಾಗ ಕತೆಯಲ್ಲಿ ಸಾಧ್ಯವೇ ನೋಡು. 

ವಿಶೇಷ ಎಂದರೆ, ಇಡೀ ಸಂಕಲನವನ್ನು ಕತೃì ಯಾರೆಂದು ತಿಳಿಯದೇ ಓದಿದರೂ ಹೆಣ್ಣಿನೊಡಲಿನ ನೇಯ್ಗೆಗಳು ಇವೆಲ್ಲ, ಇದರ ಹಿಂದಿರುವುದು ಹೆಣ್ಣಿನ ಸಂವೇದನೆಯೇ, ಬರೆದಿರುವುದು ಒಬ್ಬ ಕವಯಿತ್ರಿಯೇ ಎಂದು ಕರಾರುವಾಕ್‌ ಪತ್ತೆ ಹೇಳುವ ಛಾಪು ಇಲ್ಲಿನ ಬಹುತೇಕ ಕವನಗಳಲ್ಲಿದೆ. ಮತ್ತು ಸವಾಲಿನಂತೆ ಎದುರು ನಿಂತಿರುವ ಅಂಟಿಸಿಕೊಳ್ಳದ್ದು ಆಪ್ತವಾದೀತು ಹೇಗೆ?  ಪ್ರಶ್ನೆ , ಪ್ರಶ್ನೆಯಲ್ಲಿಯೇ ಉತ್ತರವಿದ್ದೂ ಪ್ರಶ್ನೆಯಾಗಿಯೇ ಉಳಿವ ನಿತ್ಯಪ್ರಶ್ನೆ, ಈ ಕವನ ಸಂಕಲನದ ಸಾರಸಾಲಿನಂತೆ ಇದೆ.

ಕಡೇ ನಾಲ್ಕು ಸಾಲು (ಕವನ ಸಂಕಲನ)
ಲೇ.: ಉಮಾ ಮುಕುಂದ
ಪ್ರ.: ಬಹುರೂಪಿ, 1, ನಾಕುತಂತಿ, 
ಬಸಪ್ಪ ಬಡಾವಣೆ, ಆರ್‌ಎಂವಿ 
ಎರಡನೆಯ ಘಟ್ಟ, ಸಂಜಯನಗರ, ಬೆಂಗಳೂರು-560094
ಮೊಬೈಲ್‌: 7019182729
ಮೊದಲ ಮುದ್ರಣ: 2018 ಬೆಲೆ: ರೂ. 80

ವೈದೇಹಿ

Advertisement

Udayavani is now on Telegram. Click here to join our channel and stay updated with the latest news.

Next