ಉಗುರಿಗೆ ಕೆಂಪು, ಗುಲಾಬಿ, ಮೆಹಂದಿ ಬಣ್ಣವನ್ನು ಹಾಕಿಕೊಳ್ಳುವ ಕಾಲ ಮರೆಯಾಗಿದೆ. ನಿಷೇಧಿತ ಬಣ್ಣಗಳೆಂದೇ ಗುರುತಿಸಿಕೊಳ್ಳುತ್ತಿದ್ದ ಕಪ್ಪು, ಹಸಿರು, ನೀಲಿ ಮತ್ತದರ ಓರಗೆಯ ಬಣ್ಣಗಳೇ ಇಂದಿನ ಟ್ರೆಂಡ್.
ಚೆಂದಳಿರಿನಂತಹ ಬೆರಳಿಗೆ ತುಸು ಗುಲಾಬಿ ಬಣ್ಣದ ಉಗುರು ಇದ್ದರೆ ಎಷ್ಟು ಚೆನ್ನ !
ಹೀಗೆ ಭಾವಿಸುತ್ತಾ ನಳಿನಿ ತನ್ನ ಮಗಳಿಗೆ ಫ್ಯಾನ್ಸಿ ಸ್ಟೋರ್‌ನಲ್ಲಿ ನೇಲ್‌ಪಾಲಿಷ್‌ನ ಒಂದೊಂದೇ ಟ್ರೇಯಲ್ಲಿ ಬಣ್ಣಗಳನ್ನು ಹುಡುಕುತ್ತಿದರೆ ಅಂಗಡಿಯಾಕೆ ಗಾಢ ಕಪ್ಪು, ಹಸಿರು ಮತ್ತು ನೀಲಿ ಬಣ್ಣಗಳನ್ನು ತೋರಿಸುತ್ತ, ಈ ಬಣ್ಣಗಳನ್ನು ಹುಡುಗಿಯರು ಇಷ್ಟಪಡುತ್ತಾರೆ ಎಂದು ಹೇಳುತ್ತಿದ್ದಳು. ಹೌದು. ಉಗುರಿನ ಬಣ್ಣ ಕೆಂಪೋ, ಗುಲಾಬಿಯೋ, ಮೆಹಂದಿಯ ಬಣ್ಣವೋ ಆಗಿರಬೇಕು ಎಂಬುದು ಹಳೆ ವಿಚಾರ. ಕಾಲ ಬದಲಾದಂತೆ ಸೌಂದರ್ಯ ಪ್ರಜ್ಞೆಯೂ ಬದಲಾಗುತ್ತದೆ. ಇದು ಕಡು ಬಣ್ಣಗಳು ಜನಪ್ರಿಯವಾಗಿರುವ ಕಾಲ. ಕಡು ಬಣ್ಣಗಳಿಗೆ ಹೆಚ್ಚು ಮಹತ್ವ ನೀಡಲು ಹಳದಿ, ಆಕಾಶ ನೀಲಿಯಂತಹ ತಿಳಿ ಬಣ್ಣದ ನೇಲ್ ಕಲರ್‌ಗಳು ಕೂಡ ಮಾರುಕಟ್ಟೆಯಲ್ಲಿ ಕಾರುಬಾರು ಮಾಡುತ್ತಿವೆ.
ಕಾಮಿಡಿ ಶೋ ಒಂದರಲ್ಲಿ ತೀರ್ಪುಗಾರ್ತಿಯಾಗಿ ಕುಳಿತ ನಟಿ ರಕ್ಷಿತಾ ಕೆನ್ನೆ ಮೇಲೆ ಕೈ ಇಟ್ಟುಕೊಂಡು ಕುಳಿತಿರುವಾಗ ಆಕೆಯ ಉಗುರಿನಲ್ಲಿ ಹೊಳೆಯುವ ಕಡು ನೀಲಿಬಣ್ಣ (ಡೀಪ್ ನೇವಿ ಬ್ಲೂ) ಎಷ್ಟು ಚೆಂದ ಕಾಣುತ್ತದೆ. ಚೆರ್ರಿ ಬ್ಲಾಸಮ್ ಬಣ್ಣವನ್ನು ಮೆತ್ತಿಕೊಂಡ ಉಗುರು ಹಸ್ತದ ಲಾವಣ್ಯಕ್ಕೆ ಹೆಚ್ಚು ಮೆರುಗು ನೀಡುತ್ತದೆ. ಬೆಳ್ಳನೆಯ ಪಿಂಗಾಣಿ ಕಪ್‌ಗ್ಳನ್ನು ಎತ್ತಿಕೊಂಡು ಚಹಾ ಹೀರುವ ಕೈಗಳ ಉಗುರುಗಳು ಕಡುಗಂದು ಬಣ್ಣದಲ್ಲಿದ್ದ ಮಿನುಗುತ್ತಿರುವ ಜಾಹೀರಾತು ನೋಡಿಲ್ಲವೇ…
ಮೊನ್ನೆ ತಾನೆ ಬಿಗ್‌ಬಾಸ್‌ನಲ್ಲಿ ನೇಲ್ ಪಾಲಿಶ್ ಹಚ್ಚಿಕೊಳ್ಳುವ ಟಾಸ್ಕ್ನ್ನು ಕುರಿ ಪ್ರತಾಪ್ ಯಶಸ್ವಿಯಾಗಿ ಪೂರೈಸಿದರಲ್ಲ !
20ನೇ ಶತಮಾನದಲ್ಲಿ ಕಲಾವಿದರು ಕಡು ಬಣ್ಣವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಹಸ್ತದ ಚಲನೆಯು ಪ್ರೇಕ್ಷಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ರೀತಿಯ ಆಯ್ಕೆಗಳಿಗೆ ಹೆಚ್ಚು ಆದ್ಯತೆ ಇರುತ್ತಿತ್ತು. ಆದರೆ, 21ನೇ ಶತಮಾನವೇನಿದ್ದರೂ ಡಿಜಿಟಲ್ ಯುಗ. ಪ್ರಖರ ಬೆಳಕಿನ ಯುಗ. ವೇದಿಕೆ ಮತ್ತು ಪ್ರೇಕ್ಷಕರು ಎಂಬ ಪರಿಕಲ್ಪನೆಯ ನಡುವೆ ಕ್ಯಾಮೆರಾಗಳು ತೂರಿಕೊಂಡು ಬಂದಾಗ “ಸೌಂದರ್ಯ ಪ್ರಜ್ಞೆ’ ಎಂಬ ಪರಿಕಲ್ಪನೆಯೂ ಬದಲಾಯಿತೇನೋ. ಝೂಮ್ ಲೆನ್ಸ್ ಗಳಿಗೆ ಸಲ್ಲುವಂತೆ ಚಿಕಣಿ ಕಲಾಕೃತಿಗಳು ಉಗುರಿನ ಮೇಲೆ ಮೂಡಿತು. ಬೆಳಕನ್ನು ಸಹಿಸಿ ಚೆಂದಗಾಣಿಸಬಲ್ಲ ಮ್ಯಾಟ್ ಕಲರ್‌ಗಳೂ, ಹೊಳೆಯುವ ಗ್ಲಿಟ್ಟರ್‌ಗಳೂ ಉಗುರಿನ ಪ್ರಸಾಧನ ಡಬ್ಬಿ ಸೇರಿಕೊಂಡವು.
ಕಾರಣಗಳೇನೇ ಇದ್ದರೂ ಉಗುರಿನ ಮೇಲೆ ಕೆಂಪು ಮತ್ತು ಗುಲಾಬಿ ಬಣ್ಣದ ಪಾರುಪತ್ಯ ಅಂತ್ಯವಾಗಿದೆ. ಇತ್ತೀಚೆಗಿನ ಒಂದೆರಡು ವರ್ಷಗಳಲ್ಲಿ ಉಗುರಿನ ಮೇಲೆ ಕಲಾಕೃತಿಗಳನ್ನೇ ಬಿಡಿಸುವ ನೇಲ್ ಆರ್ಟ್ ಎಂಬ ಹೊಸ ಉದ್ಯಮವೇ ಶುರುವಾಗಿದೆ. ಮಾಲ್‌ಗಳಲ್ಲಿ ನೇಲ್ ಆರ್ಟ್ ಎಂಬ ಪ್ರತ್ಯೇಕ ಮಳಿಗೆಗಳು ತೆರೆದುಕೊಂಡು ಹುಡುಗಿಯರು ಲಗ್ಗೆ ಹಾಕುತ್ತ ಉಗುರಿನ ಮೇಲೆ ಕಲಾಕೃತಿಗಳನ್ನು ಬಿಡಿಸಿಕೊಂಡು ಖುಷಿಪಡುತ್ತಿದ್ದರು. “ಶ್ರಾವಣಿ ಸುಬ್ರಹ್ಮಣ್ಯ’ ಚಿತ್ರದಲ್ಲಿ ಬೆರಳುಗಳ ಮೇಲೆ ಸುಬ್ಬು ಅಂತ ಒಂದೊಂದೇ ಅಕ್ಷರಗಳನ್ನು ಬರೆದುಕೊಂಡು ಶ್ರಾವಣಿ ತನ್ನ ಪ್ರೇಮವನ್ನು ವ್ಯಕ್ತಪಡಿಸುತ್ತಾಳಲ್ಲ.
ಕೆಂಪು ಮತ್ತು ಗುಲಾಬಿ ಬಣ್ಣವನ್ನು ಪಕ್ಕಕ್ಕೆ ಸರಿಸುವಲ್ಲಿ ಈ ಹೊಸ ಟ್ರೆಂಡ್ ಕೂಡ ಹೆಚ್ಚು ನೆರವಾಗಿದೆ. ಯಾಕೆಂದರೆ, ತಿಳಿ ಹಳದಿ ಬಣ್ಣದ ಉಗುರು ಬಣ್ಣದ ಮೇಲೆ ಕಡು ನೀಲಿಯ ಗೆರೆಗಳು ಚೆಂದದ ಚಿತ್ರವನ್ನು ಮೂಡಿಸಬಲ್ಲವು. ಐದು ಬೆರಳುಗಳಿಗೆ ಪ್ರತ್ಯೇಕ ಬಣ್ಣಗಳನ್ನು ಹಾಕಿಕೊಳ್ಳುವ ಶೈಲಿಯೂ ಜನಪ್ರಿಯವಾಗಿದೆ.
ಡೀಪ್ ನೇವಿ, ಡಾರ್ಕ್ ಚಾಕೊಲೇಟ್, ಎಲೆಕ್ಟ್ರಿಕ್ ಬ್ಲೂ, ಸಿನಿಸ್ಟರ್ ಬರ್ಗೆಂಡಿ, ರೆಪ್ಟೆ„ಲ್ ಗ್ರೀನ್, ಗ್ಲೋಯಿಂಗ್ ಗ್ಲಿಟ್ಟರ್, ರೊಮಾಂಟಿಕ್ ರೆಡ್, ಇಂಟೆನ್ಸ್ ಬ್ಲೂ… ಹೀಗೆ ಕಡು ಬಣ್ಣಗಳ ಪಾರುಪತ್ಯ ಹೆಚ್ಚಲು ತಿಳಿಬಣ್ಣಗಳೇ ವೇದಿಕೆ ಮಾಡಿಕೊಟ್ಟಿವೆ ಎಂದರೆ ತಪ್ಪಲ್ಲ. ಇತ್ತೀಚೆಗಿನ ಯುವತಿಯರು ಕಡು ಬಣ್ಣಗಳನ್ನು ಇಷ್ಟಪಡುತ್ತಾರೆ ಎಂಬುದನ್ನು ಮೆನಿಕ್ಯೂರ್ ಪರಿಣತರೂ ಒಪ್ಪಿಕೊಳ್ಳುತ್ತಾರೆ. ಅದರಲ್ಲಿಯೂ ನೀಲಿ ಮತ್ತು ಹಸಿರು ಬಣ್ಣವಂತೂ ಒಂದೆರಡು ವರ್ಷಗಳಲ್ಲಿ ಹೆಚ್ಚು ಟ್ರೆಂಡೀ ಆಗಿ, ಉಗುರಿನ ಸೌಂದರ್ಯದ ಪರಿಕಲ್ಪನೆಯನ್ನೇ ಬದಲಾಯಿಸಿಬಿಟ್ಟಿವೆ.
ಇತ್ತೀಚೆಗಿನ ಐದಾರು ವರ್ಷಗಳಲ್ಲಿ ಫ್ಯಾಷನ್ ಪರಿಕಲ್ಪನೆಯೂ ವೈಭವವನ್ನೇ ಹೆಚ್ಚು ಇಷ್ಟಪಡುತ್ತದೆ. “ಪದ್ಮಾವತ್’ ಲೆಹಂಗ, “ಬಾಹುಬಲಿ’ ಸಿನಿಮಾದ ಪ್ರಭಾವವೋ ಎಂಬಂತೆ ಭಾರೀ ಮೆರುಗಿನ ಆಭರಣಗಳ ಟ್ರೆಂಡ್ ಹೆಚ್ಚಿದೆ. ಅದಕ್ಕೆ ಪೂರಕವಾಗಿಯೋ ಎಂಬಂತೆ ಉಗುರಿನಲ್ಲಿ ಶ್ರೀಮಂತ ವಿನ್ಯಾಸವೂ ಟ್ರೆಂಡಿಂಗ್ ಆಗಿರಬಹುದು ಎಂದು ಬ್ಯೂಟಿ ಸೆಲೋನ್ ನಡೆಸುವ ಪ್ರಿಯಾಂಕಾ ಅಭಿಪ್ರಾಯಪಡುತ್ತಾರೆ.
ಶಾಲಿನಿ