Advertisement

ನಾಗ್ಪುರ ಟೆಸ್ಟ್‌: ಬೃಹತ್‌ ಗೆಲುವಿನತ್ತ ಭಾರತ

12:08 PM Nov 27, 2017 | |

ನಾಗ್ಪುರ: ನಾಯಕ ವಿರಾಟ್‌ ಕೊಹ್ಲಿ ಅವರ ಅಮೋಘ ದ್ವಿಶತಕ ಮತ್ತು ರೋಹಿತ್‌ ಶರ್ಮ ಅವರ ಶತಕದಿಂದಾಗಿ ಭಾರತ ತಂಡವು ಪ್ರವಾಸಿ ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಬೃಹತ್‌ ಗೆಲುವಿನತ್ತ ಹೊರಟಿದೆ. ಕೊಹ್ಲಿ ಮತ್ತು ರೋಹಿತ್‌ ಅವರ ಭರ್ಜರಿ ಆಟದಿಂದಾಗಿ ಭಾರತವು ಆರು ವಿಕೆಟಿಗೆ 610 ರನ್‌ ಪೇರಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿದೆ.

Advertisement

405 ಮೊದಲ ಇನ್ನಿಂಗ್ಸ್‌ ಹಿನ್ನಡೆ ಪಡೆದ ಶ್ರೀಲಂಕಾ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್‌ ಕಳೆದುಕೊಂಡಿದ್ದು 21 ರನ್‌ ಗಳಿಸಿದೆ. ಇನ್ನೆರಡು ದಿನಗಳ ಆಟ ಬಾಕಿ ಉಳಿದಿದ್ದು ಪ್ರವಾಸಿ ತಂಡ ಇನ್ನಿಂಗ್ಸ್‌ ಸೋಲು ತಪ್ಪಿಸಲು ಇನ್ನೂ 384 ರನ್‌ ಗಳಿಸಬೇಕಾಗಿದೆ. ತಂಡ ಈಗಾಗಲೇ ಸಮರವಿಕ್ರಮ ಅವರ ವಿಕೆಟನ್ನು ಕಳೆದುಕೊಂಡಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ರನ್‌ ಖಾತೆ ತೆರೆಯುವ ಮೊದಲೆ ಇಶಾಂತ್‌ ಅವರ ಅಮೋಘ ಎಸೆತಕ್ಕೆ ಸಮರವಿಕ್ರಮ ಕ್ಲೀನ್‌ಬೌಲ್ಡ್‌ ಆಗಿದ್ದರು. ಕರುಣರತ್ನೆ 11 ಮತ್ತು ತಿರಿಮನ್ನೆ 9 ರನ್ನಿನಿಂದ ಆಡುತ್ತಿದ್ದಾರೆ.

ವಿರಾಟ್‌ ಕೊಹ್ಲಿ ದ್ವಿಶತಕ
ಪಂದ್ಯದ ದ್ವಿತೀಯ ದಿನ ವಿಜಯ್‌ ಮತ್ತು ಪೂಜಾರ ಶತಕ ಸಿಡಿಸಿ ಸಂಭ್ರಮಿಸಿದ್ದರೆ ಮೂರನೇ ದಿನ ಕೊಹ್ಲಿ ಮತ್ತು ರೋಹಿತ್‌ ಅಮೋಘ ಆಟವಾಡಿ ಭಾರತವನ್ನು ಸುಸ್ಥಿತಿಗೆ ತಲುಪಿದರು. ಕೊಹ್ಲಿ ದ್ವಿಶತಕ ಸಿಡಿಸಿ ರಂಜಿಸಿದರೆ ರೋಹಿತ್‌ ನಾಲ್ಕು ವರ್ಷಗಳ ಬಳಿಕ ಟೆಸ್ಟ್‌ನಲ್ಲಿ ಶತಕ ಬಾರಿಸಿದರು. ಟೆಸ್ಟ್‌ನಲ್ಲಿ 19ನೇ ಶತಕ ಸಿಡಿಸಿದ ಕೊಹ್ಲಿ ಈ ವೇಳೆ ಹಲವು ದಾಖಲೆಗಳನ್ನು ಮುರಿದರು. 

ಕೊಹ್ಲಿ ಮತ್ತು ರೋಹಿತ್‌ ಶ್ರೀಲಂಕಾ ದಾಳಿಯನ್ನು ಯಾವುದೇ ಅಂಜಿಕೆಯಿಲ್ಲದೇ ದಂಡಿಸಿ ನೆರೆದ 12 ಸಾವಿರದಷ್ಟು ಪ್ರೇಕ್ಷಕರನ್ನು ರಂಜಿಸಿದರು. ರವಿವಾರವಾದ ಕಾರಣ ಭಾರೀ ಸಂಖ್ಯೆಯಲ್ಲಿ ಪ್ರೇಕ್ಷಕರು ಪಂದ್ಯವನ್ನು ವೀಕ್ಷಿಸಿ ಆನಂದಿಸಿದರು. 
ಪೆರೆರ ಎಸೆತದಲ್ಲಿ ಕರುಣರತ್ನೆ ಅವರಿಗೆ ಕ್ಯಾಚ್‌ ನೀಡುವ ಮೊದಲು 267 ಎತೆತ ಎದುರಿಸಿದ ಕೊಹ್ಲಿ 17 ಬೌಂಡರಿ ಮತ್ತು 2 ಭರ್ಜರಿ ಸಿಕ್ಸರ್‌ ನೆರವಿನಿಂದ 213 ರನ್‌ ಗಳಿಸಿದ್ದರು. ಎರಡೂ ಸಿಕ್ಸರ್‌ ಪೆರೆರ ಬೌಲಿಂಗ್‌ನಲ್ಲಿ ಬಾರಿಸಿದ್ದರು. ನಾಯಕನಾಗಿ ತನ್ನ 12ನೇ ಶತಕ ಸಿಡಿಸಿದ ಕೊಹ್ಲಿ ಸುನೀಲ್‌ ಗಾವಸ್ಕರ್‌ ಅವರ ದಾಖಲೆಯನ್ನು ಅಳಿಸಿ ಹಾಕಿದರು. ಗಾವಸ್ಕರ್‌ 11 ಶತಕ ಬಾರಿಸಿದ್ದರು.

ಟೆಸ್ಟ್‌ನಲ್ಲಿ 19ನೇ ಶತಕ ಸಿಡಿಸಿದ ಕೊಹ್ಲಿ ಇದನ್ನು ದ್ವಿಶತಕವಾಗಿ ಪರಿವರ್ತಿಸಿದರು. ಇದು ಅವರ ಐದನೇ ದ್ವಿಶತಕವಾಗಿದ್ದು ರಾಹುಲ್‌ ದ್ರಾವಿಡ್‌ ಜತೆ ಸೇರಿ ಕೊಂಡರು. ತೆಂಡುಲ್ಕರ್‌ ಮತ್ತು ಸೆಹವಾಗ್‌ ತಲಾ ಆರು ದ್ವಿಶತಕ ಬಾರಿಸಿದ್ದಾರೆ. ವರ್ಷವೊಂದರಲ್ಲಿ ಇದು ಕೊಹ್ಲಿ ಅವರ 10ನೇ ಶತಕ (ಆರು ಏಕದಿನ ಮತ್ತು 4 ಟೆಸ್ಟ್‌) ವಾಗಿದೆ. ಇದು ಕೂಡ ದಾಖಲೆಯಾಗಿದೆ. ಈ ಹಿಂದೆ ರಿಕಿ ಪಾಂಟಿಂಗ್‌ (2005 ಮತ್ತು 2006ರಲ್ಲಿ 9 ಶತಕ) ಮತ್ತು ಗ್ರೇಮ್‌ ಸ್ಮಿತ್‌ (2005ರಲ್ಲಿ 9 ಶತಕ) ವರ್ಷವೊಂದರಲ್ಲಿ ನಾಯಕರಾಗಿ ಗರಿಷ್ಠ ಸಂಖ್ಯೆಯ ಶತಕ ಬಾರಿಸಿದ ಆಟಗಾರ ಎಂದೆನಿಸಿಕೊಂಡಿದ್ದರು.

Advertisement

ಕೊಹ್ಲಿ ಇದೀಗ 5 ರಾಷ್ಟ್ರಗಳೆದುರು ದ್ವಿಶತಕ ಬಾರಿಸಿದ ಸಾಧನೆ ಮಾಡಿದಂತಾಯಿತು. ಅವರು ವೆಸ್ಟ್‌ಇಂಡೀಸ್‌, ನ್ಯೂಜಿಲ್ಯಾಂಡ್‌, ಇಂಗ್ಲೆಂಡ್‌, ಬಾಂಗ್ಲಾ ಮತ್ತು ಶ್ರೀಲಂಕಾ ವಿರುದ್ಧ ದ್ವಿಶತಕ ಬಾರಿಸಿದ್ದು ಟೆಸ್ಟ್‌ ಕ್ರಿಕೆಟ್‌ನಲ್ಲಿ 5 ಸಾವಿರ ರನ್‌ ಪೂರ್ತಿಗೊಳಿಸಲು ಇನ್ನು 25 ರನ್‌ ಬೇಕಾಗಿದೆ.

ಸಿಂಗಲ್‌ ಮತ್ತು ಅವಳಿ ರನ್‌ ತೆಗೆಯುವ ಮೂಲಕ ಕೊಹ್ಲಿ ಅವರು ಶ್ರೀಲಂಕಾ ಬೌಲರ್‌ಗಳ ಬೆವರಿಳಿಸಿದರು. 213 ರನ್‌ಗಳಲ್ಲಿ 133 ರನ್‌ ಸಿಂಗಲ್‌ ಅಥವಾ ಅವಳಿ  ರನ್‌ ಮೂಲಕವೇ  ಬಂದಿದ್ದವು. ಪೂಜಾರ ಜತೆ ಮೂರನೇ ವಿಕೆಟಿಗೆ 183 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡ ಕೊಹ್ಲಿ ಆಬಳಿಕ ರೋಹಿತ್‌ ಜತೆ 173 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ದೊಡ್ಡ ಕೊಡುಗೆ ಸಲ್ಲಿಸಿದರು. 

121 ರನ್ನಿನಿಂದ ದಿನದಾಟ ಮುಂದುವರಿಸಿದ ಪೂಜಾರ 143 ರನ್‌ ಗಳಿಸಿ ಔಟಾದರು. ಅಜಿಂಕ್ಯ ರಹಾನೆ ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಅನುಭವಿಸಿದರು. ಆದರೆ ರೋಹಿತ್‌ ಭರ್ಜರಿ ಆಟವಾಡಿ ತಂಡವನ್ನು ಆಧರಿಸಿದರು. 160 ಎಸೆತ ಎದುರಿಸಿ 8 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ ರೋಹಿತ್‌ ಟೆಸ್ಟ್‌ನಲ್ಲಿ ಮೂರನೇ ಶತಕ ಸಿಡಿಸಿದರು. ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಾಗ ರೋಹಿತ್‌ 102 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಸ್ಕೋರ್‌ಪಟ್ಟಿ
ಶ್ರೀಲಂಕಾ ಪ್ರಥಮ ಇನ್ನಿಂಗ್ಸ್‌    205
ಭಾರತ ಪ್ರಥಮ ಇನ್ನಿಂಗ್ಸ್‌
ಕೆಎಲ್‌ ರಾಹುಲ್‌    ಬಿ ಗಾಮಗೆ    7
ಮುರಳಿ ವಿಜಯ್‌    ಸಿ ಪೆರೆರ ಬಿ ಹೆರಾತ್‌    128
ಚೇತೇಶ್ವರ ಪೂಜಾರ    ಬಿ ಶಣಕ    143
ವಿರಾಟ್‌ ಕೊಹ್ಲಿ    ಸಿ ಕರುಣರತ್ನೆ ಬಿ ಪೆರೆರ     213
ಅಜಿಂಕ್ಯ ರಹಾನೆ    ಸಿ ಕರುಣರತ್ನೆ ಬಿ ಪೆರೆರ    2
ರೋಹಿತ್‌ ಶರ್ಮ    ಔಟಾಗದೆ    102
ಆರ್‌. ಅಶ್ವಿ‌ನ್‌    ಬಿ ಪೆರೆರ    5
ವೃದ್ಧಿಮಾನ್‌ ಸಾಹಾ    ಔಟಾಗದೆ    1

ಇತರ:        9
ಒಟ್ಟು (6 ವಿಕೆಟಿಗೆ ಡಿಕ್ಲೇರ್‌)    610
ವಿಕೆಟ್‌ ಪತನ: 1-7, 2-216, 3-399, 4-410, 5-583, 6-597

ಬೌಲಿಂಗ್‌:
ಸುರಂಗ ಲಕ್ಮಲ್‌        29-2-111-0
ಲಹಿರು ಗಾಮಗೆ        35-8-97-1
ರಂಗನ ಹೆರಾತ್‌        39-11-81-1
ದಸುನ್‌ ಶಣಕ        26.1-4-103-1
ದಿಲುವಾನ್‌ ಪೆರೆರ        45-2-202-3
ದಿಮುತ್‌ ಕರುಣರತ್ನೆ        2-0-8-0

ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್‌
ಸಮರವಿಕ್ರಮ    ಬಿ ಇಶಾಂತ್‌    0
ದಿಮುತ್‌ ಕರುಣರತ್ನೆ    ಬ್ಯಾಟಿಂಗ್‌    11
ಲಹಿರು ತಿರಿಮನ್ನೆ    ಬ್ಯಾಟಿಂಗ್‌    9

ಇತರ:        1
ಒಟ್ಟು (ಒಂದು ವಿಕೆಟಿಗೆ)        21
ವಿಕೆಟ್‌ ಪತನ: 1-0

ಬೌಲಿಂಗ್‌:
ಇಶಾಂತ್‌ ಶರ್ಮ        4-1-15-1
ಆರ್‌. ಅಶ್ವಿ‌ನ್‌        4-3-5-0
ರವೀಂದ್ರ ಜಡೇಜ        1-1-0-0

Advertisement

Udayavani is now on Telegram. Click here to join our channel and stay updated with the latest news.

Next