ಜೇವರ್ಗಿ: ಭೀಮಾ ನದಿ ಪ್ರವಾಹಕ್ಕೆ ತುತ್ತಾಗಿದ್ದ ತಾಲೂಕಿನ ಇಟಗಾ ಗ್ರಾಮದ ನೆರೆ ಸಂತ್ರಸ್ತರಿಗೆ ಬೆಂಗಳೂರಿನ ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ ಮುಖ್ಯಸ್ಥ ಹಾಗೂ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಆಹಾರ ಧಾನ್ಯದ ಕಿಟ್ ಹಾಗೂ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ಕಿಟ್, ಸಿಹಿ ವಿತರಿಸುವ ಮೂಲಕ ದೀಪಾವಳಿ ಹಬ್ಬಆಚರಿಸಿದರು.
ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ, ಟೆಂಟ್ ಸಿನಿಮಾ ಶಾಲೆ ವತಿಯಿಂದ ನೆರೆ ಪ್ರವಾಹದಿಂದ ಸಂಕಷ್ಟಕ್ಕೀಡಾದ ಜನರೊಂದಿಗೆ ದೀಪಾವಳಿ ಆಚರಿಸಿದ ಅವರು ಇಟಗಾ ಗ್ರಾಮದ 110 ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್ ಹಾಗೂ 200ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ನೋಟ್‌ಬುಕ್, ಪಠ್ಯ-ಪುಸ್ತಕ, ಪೆನ್ಸಿಲ್ ಸೇರಿದಂತೆ ಕಲಿಕಾ ಸಾಮಗ್ರಿಯ ಕಿಟ್ ಹಾಗೂ ಸಿಹಿ ವಿತರಿಸುವ ಮೂಲಕ ಸಂಭ್ರಮದ ದೀಪಾವಳಿ ಹಬ್ಬ ಆಚರಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಗತಿಹಳ್ಳಿ, ಅಭಿವ್ಯಕ್ತಿ ವೇದಿಕೆ ವತಿಯಿಂದ ಕಳೆದ 35 ವರ್ಷಗಳಿಂದಸಾಹಿತ್ಯ, ಸಾಂಸ್ಕೃತಿಕ, ಆರೋಗ್ಯ ಹಾಗೂ ಪರಿಸರ ಕಾಳಜಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಾ ಬರಲಾಗುತ್ತಿದೆ.
ಪ್ರತಿ ವರ್ಷ ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬ ಆಚರಿಸುವ ಮೂಲಕ ಹಳ್ಳಿ ಸಂಸ್ಕೃತಿ ಪೋಷಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಭೀಮಾನದಿ ವರವಾಗುವ ಬದಲು ಶಾಪವಾಗಿದೆ ಎಂದು ಭಾವಿಸಬೇಡಿ. ಈ ರಾಜ್ಯದಲ್ಲಿ ಹಲವಾರು ಹಳ್ಳಿಗಳಲ್ಲಿ ಕೆರೆ, ಹಳ್ಳ, ನದಿಗಳಿಲ್ಲದೇ ಹನಿ ನೀರಿಗೂ ಪರದಾಡುವಂತಹ ಸ್ಥಿತಿ ಇದೆ. ಕೆಲವೊಮ್ಮೆ ಪ್ರಕೃತಿ ವಿಕೋಪದಿಂದ ಪ್ರವಾಹ ಬಂದು ಸಂಕಷ್ಟ ಅನುಭವಿಸಬೇಕಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಪ್ರಕೃತಿ ವಿಕೋಪಗಳನ್ನು ಮುಂಚಿತವಾಗಿಯೇ ಅರಿತುಕೊಳ್ಳುವಲ್ಲಿ ನಾವು ಸೋಲುತ್ತಿದ್ದೇವೆ ಎಂದು ಹೇಳಿದರು.
ನೆರೆಯಿಂದ ಈ ಭಾಗದಲ್ಲಿ ಸಾಕಷ್ಟು ಹಾನಿಯಾಗಿದೆ. ವೈಯಕ್ತಿಕವಾಗಿ ನನಗೆ ಈ ಭಾಗ, ಆ ಭಾಗ ಎನ್ನುವ ಮಾನಸಿಕ ಅಂತರವಿಲ್ಲ. ನೆರೆ ಸಂತ್ರಸ್ತರಿಗೆ ಕೈಲಾದಷ್ಟು ಸಹಾಯ ಮಾಡುವ ಮೂಲಕ ದೀಪಾವಳಿ ಆಚರಿಸಲು ಬಂದಿದ್ದೇನೆ ಎಂದರು.
ಕಸಾಪ ನಿಕಟಪೂರ್ವ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ, ಮುಖಂಡರಾದ ಸಂಗಣ್ಣ ಹಣಮಂತಗೋಳ, ಪ್ರಕಾಶ ಹರಕೋಡೆ,ತಾಲೂಕು ಆರೋಗ್ಯಾಧಿ ಕಾರಿ ಡಾ| ಸಿದ್ಧು ಪಾಟೀಲ, ನೆಲೋಗಿಉಪ ತಹಶೀಲ್ದಾರ್ ಪ್ರಸನ್ನಕುಮಾರ, ರಾವುತ್ ರಾಯ ಅಂಕಲಗಿ, ವಕೀಲರಾದ ಅಂಬರೀಶ ಪತಂಗೆ, ಆರೋಗ್ಯ ಸಹಾಯಕಿ ವಿಜಯಲಕ್ಷಿ¾àಇಟಗಾ, ರಾಜಶೇಖರ ಮುತ್ತಕೋಡ, ಶ್ಯಾಮರಾವ್ ಹಣಮಂತಗೋಳ, ಉಮೇಶ ಆನೂರ ಇದ್ದರು. ಅನೀಲಕುಮಾರ ಹಜೇರಿ ರೈತ ಗೀತೆ, ವಿದ್ಯಾರ್ಥಿಗಳು ನಾಡಗೀತೆ ಹಾಡಿದರು, ಸಿದ್ದಣ್ಣ ವಡಗೇರಿ ನಿರೂಪಿಸಿ, ವಂದಿಸಿದರು.