ಕನ್ನಡ ಚಿತ್ರರಂಗದಲ್ಲಿ ಸಿನಿಪ್ರೇಕ್ಷಕರಿಗೆ ಹಲವು ದೇಶಗಳನ್ನು ತಮ್ಮ ಚಿತ್ರಗಳಲ್ಲಿ ಸುತ್ತಿಸಿದ ಕೀರ್ತಿ ನಾಗತಿಹಳ್ಳಿ ಚಂದ್ರಶೇಖರ್ ಅವರದ್ದು. ‘ಅಮೆರಿಕಾ ಅಮೆರಿಕಾ’, ‘ನನ್ನ ಪ್ರೀತಿಯ ಹುಡುಗಿ’, ‘ಸೂಪರ್ ಸ್ಟಾರ್’, ‘ಪ್ಯಾರಿಸ್ ಪ್ರಣಯ’ ಹೀಗೆ ಹಲವು ಚಿತ್ರಗಳಲ್ಲಿ ಆಡಿಯನ್ಸ್‌ಗೆ ಫಾರಿನ್ ಟೂರ್ ಮಾಡಿಸಿದ್ದ ನಾಗತಿಹಳ್ಳಿ ಈ ಬಾರಿ, ಪ್ರೇಕ್ಷಕರಿಗೆ ಇಂಗ್ಲೆಂಡ್ ತೋರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹೌದು, ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಚಿತ್ರಕ್ಕೆ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಅಂತ ಹೆಸರಿಟ್ಟಿದ್ದಾರೆ. ಚಿತ್ರಕ್ಕೆ ಹೆಸರಿಡುವ ಮೊದಲೇ ಬಹುತೇಕ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದ ನಾಗತಿಹಳ್ಳಿ ಆ್ಯಂಡ್ ಟೀಮ್, ಈಗ ಚಿತ್ರದ ಅಂತಿಮ ಕೆಲಸಗಳಲ್ಲಿ ನಿರತವಾಗಿದೆ. ಈ ಬಗ್ಗೆ ಮಾತನಾಡುವ ನಾಗತಿಹಳ್ಳಿ, ‘ಇಲ್ಲಿಯವರೆಗೆ ನಾನು ಮಾಡಿರುವ ಚಿತ್ರಗಳಿಗಿಂತ ಇದು ತುಂಬಾ ದೊಡ್ಡ ಬಜೆಟ್ ಚಿತ್ರ. ನನ್ನ ಪ್ರಕಾರ ಇದೊಂದು ಗ್ಲೋಬಲ್ ಚಿತ್ರ.
ಇಡೀ ಚಿತ್ರ ಇಂಗ್ಲೆಂಡ್ ಮತ್ತು ಇಂಡಿಯಾ ಎರಡೂ ದೇಶಗಳನ್ನು ಆವರಿಸಿಕೊಂಡಿದೆ. ಎರಡು ದೇಶದ ಸಂಸ್ಕೃತಿ, ಕಂಟೆಂಟ್ ಎಲ್ಲವೂ ಇದರಲ್ಲಿ ಕಾಣಬಹುದು’ ಎಂದು ಚಿತ್ರದ ಬಗ್ಗೆ ವ್ಯಾಖ್ಯಾನಿಸುತ್ತಾರೆ. ‘ಇನ್ನು ಬಹಳ ಜನ ‘ಇಂಡಿಯಾ ವರ್ಸಸ್ ಇಂಗ್ಲೆಂಡ್ ಅಂದ್ರೆ ಕ್ರಿಕೆಟ್ ಅಂಥ ಭಾವಿಸುತ್ತಾರೆ. ಆದ್ರೆ, ಅದನ್ನು ಬಿಟ್ಟು ಹತ್ತಾರು ಸಂಗತಿಗಳು ಇಂಡಿಯಾ ಮತ್ತು ಇಂಗ್ಲೆಂಡ್ ನಡುವೆ ಇದೆ. ಅದಕ್ಕಾಗಿ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರದ ಶೀರ್ಷಿಕೆಗೆ ‘ಆದರೆ ಕ್ರಿಕೆಟ್ ಅಲ್ಲ’ ಎನ್ನುವ ಅಡಿಬರಹವನ್ನು ಕೊಟ್ಟಿದ್ದೇವೆ’ ಎನ್ನುತ್ತಾರೆ ನಾಗತಿಹಳ್ಳಿ. ಸಾಮಾನ್ಯವಾಗಿ ಬಿಗ್ ಬಜೆಟ್ ಚಿತ್ರಗಳನ್ನು ಮಾಡುವಾಗ ಬಿಗ್ ಹೀರೋ, ಹೀರೋಯಿನ್ಸ್, ಬಿಗ್ ಸ್ಟಾರ್ಗಳತ್ತ ಬಹುತೇಕ ನಿರ್ಮಾಪಕರು ಮತ್ತು ನಿರ್ದೇಶಕರ ಚಿತ್ತ ಹೊರಡುವುದು ಸಾಮಾನ್ಯ. ಆದ್ರೆ ನಾಗತಿಹಳ್ಳಿ ಮಾತ್ರ ಆ ಸೂತ್ರವನ್ನು ಪಕ್ಕಕ್ಕಿಟ್ಟು ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಈ ಬಗ್ಗೆ ಮಾತನಾಡುವ ಮೇಷ್ಟ್ರು ‘ಸಾಮಾನ್ಯವಾಗಿ ಚಿತ್ರರಂಗದಲ್ಲಿ ಬಿಗ್ ಬಜೆಟ್ ಚಿತ್ರಗಳು, ಸ್ಟಾರ್ ಡಮ್ ಇಟ್ಟುಕೊಂಡೆ ನಡೆಯುವುದು ವಾಡಿಕೆ. ಆದ್ರೆ ನಾನು ಅದಕ್ಕೆ ಹೊರತಾಗಿ ಯೋಚಿಸುತ್ತೇನೆ.
ನನಗೆ ಕಥೆಯೇ ಹೀರೋ, ಸಂಗೀತವೇ ಹೀರೋಯಿನ್. ಒಂದು ಸದಭಿರುಚಿ ಚಿತ್ರವನ್ನು ಕೊಡಬೇಕು ಎನ್ನುವ ಕಾರಣಕ್ಕೆ ಚಿತ್ರರಂಗದ ಇತರೆ ಲೆಕ್ಕಾಚಾರಗಳನ್ನು ಪಕ್ಕಕ್ಕಿಟ್ಟು ಈ ಚಿತ್ರ ಮಾಡಿದ್ದೇವೆ’ ಎನ್ನುತ್ತಾರೆ.
ಇನ್ನು ಇಲ್ಲಿಯವರೆಗೆ ಹತ್ತಾರು ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಿ ಸೈ ಎನಿಸಿಕೊಂಡಿರುವ ನಟ ವಸಿಷ್ಠ ಸಿಂಹ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರದಲ್ಲಿ ಎನ್‌ಆರ್‌ಐ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಸಿಷ್ಠಗೆ ಕೂಡ ಈ ಚಿತ್ರ ಸಾಕಷ್ಟು ಕಲಿಸಿದೆಯಂತೆ. ಈ ಬಗ್ಗೆ ಮಾತನಾಡುವ ವಸಿಷ್ಠ, ‘ ನಾಗತಿಹಳ್ಳಿ ಚಂದ್ರಶೇಖರ್ ಸಿನಿಮಾ ವಿಷಯದಲ್ಲೂ ಮೇಷ್ಟ್ರು ತುಂಬ ಸ್ಟ್ರಿಕ್ಟ್. ಅವರ ಸಿನಿಮಾಕ್ಕೆ ಏನು ಬೇಕು, ಒಂದೊಳ್ಳೆ ಕಥೆಗೆ ಹೇಗೆ ದೃಶ್ಯರೂಪ ಕೊಡಬೇಕು. ಕಲಾವಿದರಿಂದ ಹೇಗೆ ಅಭಿನಯ ತೆಗೆದುಕೊಳ್ಳಬೇಕು. ಅದನ್ನು ಹೇಗೆ ಸ್ಕ್ರೀನ್ ಮೇಲೆ ತರಬೇಕು ಎನ್ನುವ ಪ್ರತಿಯೊಂದು ವಿಷಯದ ಬಗ್ಗೆಯೂ ಅವರಿಗೆ ಸ್ಪಷ್ಟತೆ ಇರುತ್ತದೆ. ಹಾಗಾಗಿ ಅವರ ಸಿನಿಮಾ ಅನೇಕರಿಗೆ ಒಂಥರಾ ಸಿಲೆಬಸ್ ಇದ್ದಂಗೆ. ಅವರ ಜೊತೆ ಕೆಲಸ ಮಾಡುವಾಗ ಕಲಿತುಕೊಳ್ಳೋದಕ್ಕೆ ಸಾಕಷ್ಟು ವಿಷಯಗಳಿರುತ್ತವೆ. ಕಥೆಗೆ, ಕಲಾವಿದರಿಗೆ ಎಷ್ಟು ಇಂಪಾರ್ಟೆನ್ಸ್ ಕೊಡಬೇಕು ಅನ್ನೋದು ಅವರಿಗೆ ಚೆನ್ನಾಗಿ ಗೊತ್ತು. ಅವರ ಜೊತೆ ಚಿತ್ರ ಮಾಡುವ ಅವಕಾಶ ಸಿಕ್ಕಿದ್ದು, ನನಗೂ ಸಾಕಷ್ಟು ಕಲಿತುಕೊಳ್ಳಲು ಸಹಾಯವಾಯಿತು’ ಎನ್ನುತ್ತಾರೆ.
ಇನ್ನು ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರದಲ್ಲಿ ವಸಿಷ್ಠ ಸಿಂಹ ಅವರ ಜೊತೆ ಅನೇಕ ದೊಡ್ಡ ಕಲಾವಿದರು ಮತ್ತು ತಂತ್ರಜ್ಞರ ದಂಡೇ ಇದೆ. ಚಿತ್ರದಲ್ಲಿ ವಸಿಷ್ಠ ಸಿಂಹ ಅವರಿಗೆ ನಾಯಕಿಯಾಗಿ ಮಾನ್ವಿತಾ ಕಾಮತ್ ಜೋಡಿಯಾಗಿದ್ದಾರೆ. ಉಳಿದಂತೆ ಹಿರಿಯ ನಟ ಅನಂತನಾಗ್, ಸುಮಲತಾ ಅಂಬರೀಶ್, ಪ್ರಕಾಶ್ ಬೆಳವಾಡಿ, ಶಿವಮಣಿ, ಸಾಧುಕೋಕಿಲ, ಗೋಪಾಲ್ ಕುಲಕರ್ಣಿ, ಬ್ರಿಟಿಷ್ ನಟ ಮೈಕಲ್ ಆಸ್ಟಿನ್ ಮೊದಲಾದ ಕಲಾವಿದರ ತಾರಾಗಣವಿದೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಇನ್ನು ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರದ ದೃಶ್ಯಗಳನ್ನು ಎ.ವಿ ಕೃಷ್ಣಕುಮಾರ್, ಸತ್ಯ ಹೆಗಡೆ, ಬ್ರಿಟಿಷ್ ಛಾಯಾಗ್ರಹಕ ವಿಲ್ಸ್ ಪ್ರೈಸ್‌ಸೆರೆಹಿಡಿದಿದ್ದಾರೆ. ಚಿತ್ರಕ್ಕೆ ಶ್ರೀಕಾಂತ್ ಸಂಕಲನವಿದೆ. ಕನಸು ನಾಗತಿಹಳ್ಳಿ ಬರೆದ ಕಾದಂಬರಿಗೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಚಿತ್ರರೂಪ ಕೊಟ್ಟು ತೆರೆಮೇಲೆ ತರುತ್ತಿದ್ದಾರೆ.
•ಜಿ.ಎಸ್.ಕಾರ್ತಿಕ ಸುಧನ್