Advertisement

ಬಯಲು ಶೌಚ ಮುಕ್ತಕ್ಕೆ ನಾಗರ ನಡೆಯ ತಡೆ!

03:45 AM Jun 27, 2017 | Team Udayavani |

ಶಿವಮೊಗ್ಗ: ಬಯಲು ಶೌಚ ಮುಕ್ತ ಗ್ರಾಮ ಇದು ಸರಕಾರದ ಗುರಿ. ಜನರಲ್ಲಿ ಸ್ವತ್ಛತೆಯ ಅರಿವು ಮೂಡಿಸಿ ಶೌಚಗೃಹ ನಿರ್ಮಾಣ ಮಾಡಿಕೊಳ್ಳಲು ಸಹಾಯಧನವನ್ನೂ ನೀಡಲಾಗುತ್ತದೆ. ಆದರೆ, ಶಿವಮೊಗ್ಗ ಜಿಲ್ಲೆಯನ್ನು ಬಯಲು ಶೌಚ ಮುಕ್ತವನ್ನಾಗಿಸುವ ಪ್ರಯತ್ನಕ್ಕೆ ನಾಗರನಡೆ ಅಡ್ಡಿಯಾಗಿದೆ.!

Advertisement

ಇದೊಂದು ವಿಚಿತ್ರ ಎನಿಸಿದರೂ ಸತ್ಯ. ಬಯಲುಶೌಚ ಮುಕ್ತ ಜಿಲ್ಲೆಯನ್ನಾಗಿಸುವ ಜಿಲ್ಲಾಡಳಿತದ ಗಂಭೀರ ಪ್ರಯತ್ನಕ್ಕೆ ತೀರ್ಥಹಳ್ಳಿ ತಾಲೂಕಿನ ಹಳ್ಳಿಯಲ್ಲಿನ ನಾಗರನಡೆಯೇ ಅಡ್ಡಿಯಾಗಿದೆ. ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿ ಗ್ರಾ.ಪಂ.ವ್ಯಾಪ್ತಿಯ ದಬ್ಬಣಗದ್ದೆ ಗ್ರಾಮಸ್ಥರ ಈ ನಂಬಿಕೆಯಿಂದ ಶೌಚಗೃಹಗಳ ನಿರ್ಮಾಣ ಅಸಾಧ್ಯ ಎನ್ನುವಂತಾಗಿದೆ.

ಈ ಗ್ರಾಮದ ಎರಡು ಕೇರಿಗಳಲ್ಲಿ ಸುಮಾರು 20 ಮನೆಗಳಿವೆ. ಈ ಎಲ್ಲ ಮನೆಯವರೂ ಯಾವುದೇ ಕಾರಣಕ್ಕೂ ತಮ್ಮ ಮನೆಯಲ್ಲಿ ಶೌಚಗೃಹ ನಿರ್ಮಿಸಲು ಒಪ್ಪುತ್ತಿಲ್ಲ. ಅಧಿಕಾರಿಗಳ ಹಲವು ಪ್ರಯತ್ನಗಳ ನಡುವೆಯೂ ತಮ್ಮ ಬಿಗಿಪಟ್ಟು ಸಡಲಿಸದ ಈ ಜನ ಇಲ್ಲೇನಾದರೂ ಶೌಚಾಲಯ ನಿರ್ಮಿಸಿದರೆ ನಾಗರನಡೆಗೆ ತೊಂದರೆಯಾಗುತ್ತದೆ. ಇದರಿಂದ ಮನೆಯವರೆಲ್ಲರಿಗೂ ಆರೋಗ್ಯ ಕೆಡುತ್ತದೆ ಎಂದು ಭಾವಿಸಿದ್ದಾರೆ. ಹೀಗಾಗಿ ಶೌಚಾಲಯ ನಿರ್ಮಿಸಲು ಬಿಲ್‌ಕುಲ್‌ ಒಪ್ಪುತ್ತಿಲ್ಲ.

ಈ ಇಪ್ಪತ್ತು ಮನೆಗಳು ಇರುವ ಜಾಗ ಮತ್ತು ಸುತ್ತಮುತ್ತ ನಾಗರನಡೆ ಇದೆ ಎಂದು ಅಲ್ಲಿನ ಜನ ನಂಬಿದ್ದಾರೆ. ನಾಗರಹಾವುಗಳು ಸದಾ ಸಂಚರಿಸುವ, ವಾಸಿಸುವ ಪ್ರದೇಶವೇ ನಾಗರನಡೆ. ಈ ಸ್ಥಳದಲ್ಲಿ ಬೇರೆ ಕಾಮಗಾರಿ ಮಾಡಿ ನಾಗರ ಹಾವುಗಳ ಸಂಚಾರಕ್ಕೆ ತೊಂದರೆಯುಂಟು ಮಾಡಿದರೆ ಅದರಿಂದ ಅನಾಹುತವಾಗುತ್ತದೆ ಎಂಬುದು ಅವರ ನಂಬಿಕೆ. ಇದು ಈ ಗ್ರಾಮದ ಜನರ ನಂಬಿಕೆಯಷ್ಟೇ ಅಲ್ಲ. ಮಲೆನಾಡಿನ ಬಹುತೇಕ ಎಲ್ಲ ಕಡೆಗಳಲ್ಲಿ ನಾಗರನಡೆಭಯ ಇದ್ದೇ ಇದೆ. ಯಾವುದೇ ಮನೆ ನಿರ್ಮಾಣಕ್ಕೆ ಮುನ್ನ ಕೂಡ ನಾಗರನಡೆಯ ಬಗ್ಗೆ ಪುರೋಹಿತರನ್ನು, ಶಾಸ್ತÅಜ್ಞರ ಅನುಮತಿ ಪಡೆದುಕೊಳ್ಳುತ್ತಾರೆ. ಈ ಗ್ರಾಮಸ್ಥರು ಕೂಡ ಇದೇ ಕಾರಣಕ್ಕೆ ಶೌಚಾಲಯ ನಿರ್ಮಿಸಲು ನಿರಾಕರಿಸುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಪ್ರತಿಯೊಂದು ಮನೆಗೂ ಸ್ವತ್ಛ ಭಾರತ ಅಭಿಯಾನದಡಿ ಶೌಚಗೃಹಗಳನ್ನು ನಿರ್ಮಾಣ ಮಾಡಿಕೊಡಲಾಗುತ್ತಿದೆ. ಆದರೆ, ದಬ್ಬಣಗದ್ದೆ ಗ್ರಾಮದಲ್ಲಿ ಮಾತ್ರ ಈ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. 

Advertisement

ಅಧಿಕಾರಿಗಳು ಹಲವಾರು ಬಾರಿ ಗ್ರಾಮಕ್ಕೆ ಬಂದು ಹೋಗಿದ್ದು, ಮೂಢನಂಬಿಕೆಯ ವಿರುದ್ಧ ಅರಿವು ಮೂಡಿಸಲು ಯತ್ನಿಸುತ್ತಿದ್ದಾರೆ. ಈಗೀಗ ಅಧಿಕಾರಿಗಳು ಬಂದರು ಎಂದರೆ ಜನ ಮನೆಯ ಹಿಂಬಾಗಿಲ ಮೂಲಕ ಪರಾರಿಯಾಗುತ್ತಿದ್ದಾರೆ. ಮನೆ ಬಾಗಿಲನ್ನು ತೆರೆಯದೇ ಅಧಿಕಾರಿಗಳನ್ನು ಸಾಗ ಹಾಕುತ್ತಿದ್ದಾರೆ. ಈ ನಾಗರನಡೆಯ ಕಾರಣಕ್ಕೆ ಗ್ರಾಮದ ಕೆಲವರು ತಮ್ಮ ಮನೆಯನ್ನು ತೊರೆದು ಬೇರೆ ಮನೆ ನಿರ್ಮಿಸಿಕೊಂಡಿದ್ದಾರೆ. ಹೀಗಾಗಿ ಕೆಲವು ಮನೆಗಳು ಇಲ್ಲಿ ಪಾಳು ಬಿದ್ದಿವೆ.

ಇಲ್ಲಿ ನಾಗರನಡೆಯಿದೆ. ಇಂತಹ ಸ್ಥಳದಲ್ಲಿ ಯಾವುದೇ ಕಾರಣಕ್ಕೂ ಮನೆ ಅಥವಾ ಶೌಚಾಲಯ ನಿರ್ಮಿಸಲು ಸಾಧ್ಯವಿಲ್ಲ. ಒಂದು ಪಕ್ಷ ನಾವು ಬಲವಂತವಾಗಿ ಶೌಚಾಲಯ ನಿರ್ಮಿಸಿದರೆ ಹಾವುಗಳು ಮನೆಗೆ ಬರುತ್ತವೆ. ನಮಗೆ ತೊಂದರೆ ಕೊಡುತ್ತದೆ. ಮನೆಯವರಿಗೆ ಕೆಡಕಾಗುತ್ತದೆ.
– ಕೊಲ್ಲಮ್ಮ, ದಬ್ಬಣಗದ್ದೆ ನಿವಾಸಿ

ಜಿಲ್ಲೆಯ ಎಲ್ಲೆಡೆ ಶೌಚಾಲಯ ನಿರ್ಮಿಸಲಾಗಿದೆ. ಆದರೆ ದಬ್ಬಣಗದ್ದೆ ಗ್ರಾಮದಲ್ಲಿ ಕೆಲ ಮನೆಯವರು ಮಾತ್ರ ಶೌಚಗೃಹ ನಿರ್ಮಾಣ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿರುವುದರಿಂದ ಶಿವಮೊಗ್ಗ ಜಿಲ್ಲೆಯನ್ನು ಬಯಲು ಶೌಚಮುಕ್ತ ಜಿಲ್ಲೆ ಎಂದು ಘೋಷಿಸಲು ಸಾಧ್ಯವಾಗುತ್ತಿಲ್ಲ. ಹಲವಾರು ಬಾರಿ ಇಲ್ಲಿಗೆ ಭೇಟಿ ನೀಡಿ ಅರಿವು ಮೂಡಿಸುವ ಯತ್ನ ನಡೆಸಲಾಗಿದೆ. ಆದರೆ ಸಾಧ್ಯವಾಗುತ್ತಿಲ್ಲ. ಆದರೂ ಅಧಿಕಾರಿಗಳು ಪ್ರಯತ್ನ ಬಿಟ್ಟಿಲ್ಲ.
– ಧರ್ಮಜರಾಜ್‌, ತೀರ್ಥಹಳ್ಳಿ ತಾಲೂಕು ಪಂಚಾಯಿತಿ ಇಓ

– ಗೋಪಾಲ್‌ ಯಡಗೆರೆ

Advertisement

Udayavani is now on Telegram. Click here to join our channel and stay updated with the latest news.

Next