ಕಲಬುರಗಿ: ನಗರದ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ನಗರೋತ್ಥಾನ ಯೋಜನೆ ಅಡಿ ಮೂರು ಹಂತಗಳಲ್ಲಿ ಬಂದಿರುವ 300 ಕೋಟಿ ರೂ.ಗಳಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಸಮರ್ಪಕವಾಗಿ ಕಾಲಾವಧಿಯಲ್ಲಿ ಮುಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಮಹಾನಗರ ಪಾಲಿಕೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.
ಒಟ್ಟು ಮೂರು ಹಂತಗಳಲ್ಲಿ ಬಂದಿರುವ ಹಣವನ್ನು ಯಾವ್ಯಾವ ಕಾಮಗಾರಿಗೆ ಬಳಕೆ ಮಾಡಲಾಗಿದೆ ಎಂದು ಅಧಿಕಾರಿಗಳಿಂದ ಉತ್ತರ ಪಡೆದ ಬಳಿಕ, ಒಟ್ಟು 300 ಕೋಟಿ ರೂ.ಗಳನ್ನು ಸಮರ್ಪಕವಾಗಿ ಬಳಕೆ ಮಾಡಿ ಜನರಿಗೆ ಅದರ ಪ್ರಯೋಜನ ದೊರೆಯುವಂತೆ ಮಾಡಬೇಕು ಎಂದು ಹೇಳಿದರು. ಮೊದಲ ಹಂತದಲ್ಲಿ ಬಂದಿರುವ 100 ಕೋಟಿ ರೂ.ಗಳಲ್ಲಿ 94.13 ಕೋಟಿ ರೂ. ಖರ್ಚಾಗಿದೆ. 6 ಕೋಟಿ ರೂ. ಮಾತ್ರವೇ ಬಾಕಿ ಉಳಿದಿದೆ.
ಈ ಹಣದಲ್ಲಿ ಪ್ರಮುಖ ನಗರದ ರಸ್ತೆಗಳನ್ನು ಪುನರ್ ನಿರ್ಮಾಣ ಮಾಡುವಂತೆ ಸೂಚನೆ ನೀಡಲಾಯಿತು. ಎರಡನೇ ಹಂತದ 100 ಕೋಟಿ ರೂ.ಗಳಲ್ಲಿ 92.5 ರೂ. ಬಿಡುಗಡೆಯಾಗಿದೆ. 84.74 ಕೋಟಿ. ರೂ. ಖರ್ಚಾಗಿದೆ. ಒಟ್ಟು 203 ಕಾಮಗಾರಿಗಳಲ್ಲಿ 49 ಕಾಮಗಾರಿ ಕೈಬಿಡಲಾಗಿದೆ. 165 ಕಾಮಗಾರಿಗಳಲ್ಲಿ 158 ಕಾಮಗಾರಿ ಮುಗಿದಿವೆ. ಉಳಿದ 7 ಕಾಮಾಗಾರಿಗಳನ್ನು ಆದಷ್ಟು ಬೇಗ ಪೂರ್ಣ ಮಾಡಲಾಗುವುದು ಎಂದು ಪಾಲಿಕೆ ಮುಖ್ಯ ಇಂಜಿನಿಯರ್ ಜಾಧವ ಹೇಳಿದರು.
ಮಧ್ಯ ಪ್ರವೇಶಿಸಿದ ಸಚಿವ ಶರಣಪ್ರಕಾಶ, ಈಗಾಗಲೇ ನಗರದಲ್ಲಿ ಕೆಲವು ರಸ್ತೆಗಳನ್ನು ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಕೈಗೆತ್ತಿಕೊಳ್ಳಲಾಗಿದೆ. ಆ ರಸ್ತೆಗಳಿಗೆ ಪುನಃ ಮುಖ್ಯಮಂತ್ರಿ ಪ್ಯಾಕೇಜ್ ಅಡಿಯಲ್ಲಿ ಬರುವ ಹಣವನ್ನು ವಿನಿಯೋಗ ಆಗಿ ದುರ್ಬಳಕೆ ಆಗದಂತೆ ಎಚ್ಚರಿಕೆ ವಹಿಸಿ ಎಂದು ಸೂಚಿಸಿದರು. ಮೂರನೇ ಹಂತದ 100 ಕೋಟಿ ರೂ.ಗಳಲ್ಲಿ ಕೇವಲ 30 ಕೋಟಿ ಹಣ ಬಿಡುಗಡೆಯಾಗಿದೆ. 70 ಕೋಟಿ ರೂ. ಇನ್ನೂ ಬಿಡುಗಡೆಯಾಗಿಲ್ಲ.
ಅದೂ ಅಲ್ಲದೆ, ಈ ಹಣದಲ್ಲಿ ಕಾರ್ಮಿಕರಿಗೆ ಪರಿಹಾರವಾಗಿ 40 ಕೋಟಿ ರೂ.ಗಳನ್ನು ಎತ್ತಿಡುವ ಮತ್ತು ನಗರದ ಯುಜಿಡಿ ವ್ಯವಸ್ಥೆ ನಿರ್ಮಾಣಕ್ಕೆ 10 ಕೋಟಿ ರೂ. ಗಳನ್ನು , 5 ಕೋಟಿಯನ್ನು ನಗರದಲ್ಲಿ ಪೊಲೀಸ ಇಲಾಖೆಯ ಸಹಯೋಗದಲ್ಲಿ ಸಿಸಿ ಕ್ಯಾಮರಾಗಳನ್ನು ಹಾಕಲು ಮೀಸಲು ಇಡಲಾಗಿತ್ತು ಎಂದು ಜಾಧವ ವಿವರಣೆ ನೀಡಿದರು. ಈ ವೇಳೆ ಮಧ್ಯೆ ಪ್ರವೇಶ ಮಾಡಿದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಖಮರುಲ್ ಇಸ್ಲಾಂ, ಈ ಹಣದ ಬಳಕೆಯ ವಿವರ ಕೇಳಿದರು.
ಆಯುಕ್ತ ಪಿ.ಸುನೀಲಕುಮಾರ ಮಾಹಿತಿ ನೀಡಿದಾಗ ಖಮರುಲ್ ಸುಮ್ಮನಾದರು. ಈ ವೇಳೆ ಜಾಧವ, ಸಿಸಿ ಕ್ಯಾಮರಾ ಹಾಗೂ ಇತರೆ ಸಲಕರಣೆಗೆ ಮೀಸಲಿಟ್ಟಿದ್ದ 5 ಕೋಟಿ ರೂ. ವೆಚ್ಚದ ಯೋಜನೆ ಸಂಪೂರ್ಣ ಕೈ ಬಿಡಲಾಗಿದೆ ಎಂದಾಗ, ಸಿಟ್ಟಾದ ಖಮರುಲ್ ಇಸ್ಲಾಂ ಯಾಕೆ, ಯಾರ ಒಪ್ಪಿಗೆ ಮೇರೆಗೆ ಅದನ್ನು ಕೈ ಬಿಡಲಾಗಿದೆ ಎಂದಾಗ ಸಭೆಯಲ್ಲಿ ಕೆಲ ಹೊತ್ತು ಗುಸುಗುಸು ಶುರುವಾಯಿತು.
ಕೊನೆಗೆ ಯೋಜನೆ ಕುರಿತು ಸಮಗ್ರ ಮಾಹಿತಿ ಪಡೆದು ತಮ್ಮ ಗಮನಕ್ಕೆ ತರುವಂತೆ ಸೂಚಿಸಿದರು. ದರ್ಗಾ ಪ್ರದೇಶದಲ್ಲಿನ ಚರಂಡಿ, ಮಳೆ ನೀರು ಹರಿದು ಹೋಗುವ ವ್ಯವಸ್ಥೆ ಸೇರಿದಂತೆ ಇತರೆ ಕಾಮಗಾರಿಗಾಗಿ ಮೂರು ಬಾರಿ ಟೆಂಡರ್ ಕರೆದರೂ ಯಾರೂ ಟೆಂಡರ್ ಅರ್ಜಿ ಸಲ್ಲಿಸಿಲ್ಲ ಎಂದು ಜಾಧವ್ ಸಚಿವರ ಗಮನಕ್ಕೆ ತಂದಾಗ, ಸಚಿವ ಪಾಟೀಲ ಇನ್ನೊಂದು ಬಾರಿ ಟೆಂಡರ್ ಕರೆಯಿರಿ, ನೋಡೋಣ, ಇಲ್ಲದೆ ಹೋದರೆ ಏಜೆನ್ಸಿಗೆ ನೀಡಿ ಕೆಲಸ ಮಾಡಿಸಿ ಎಂದರು.
ಉಳಿದಂತೆ ಇತರೆ ಕಾಮಗಾರಿಗಳ ಕುರಿತು ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಯಿತಾದರೂ, ಗಂಭೀರ ನಿರ್ಣಯಗಳನ್ನು ಕೈಗೊಳ್ಳಲು ಸಾಧ್ಯವಾಗದೇ ಸಭೆ ಮುಕ್ತಾಯಗೊಂಡಿತು. ಮೇಯರ್ ಸೈಯದ್ ಅಹ್ಮದ್, ಜಿಲ್ಲಾಧಿಕಾರಿ ಉಜ್ವಲ್‌ಕುಮಾರ ಘೋಷ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಪಾಲಿಕೆಯ ಇಂಜಿನಿಯರ್ ಮತ್ತು ಲೆಕ್ಕಾಧಿಕಾರಿಗಳು ಇದ್ದರು.