Advertisement

ಸುಪ್ರೀಂ ನ್ಯಾಯಮೂರ್ತಿಯಾಗಿ ನಾಗರತ್ನ ಪದಗ್ರಹಣ

04:53 PM Sep 01, 2021 | Team Udayavani |

ಮಂಡ್ಯ: ಜಿಲ್ಲೆಯ ಅನೇಕ ಸಾಧಕರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ ಕೀರ್ತಿ ತಂದಿದ್ದಾರೆ. ಈಗ ಪಾಂಡವಪುರ ತಾಲೂಕಿನ ಇಂಗಲಗುಪ್ಪೆ ಗ್ರಾಮದ ದಿ.ಇ.ಎಸ್‌.ವೆಂಕಟರಾಮಯ್ಯ ಅವರ ಪುತ್ರಿ ಬಿ.ವಿ.ನಾಗರತ್ನ ಅವರು ಸುಪ್ರೀಂಕೋರ್ಟ್‌ನ ನ್ಯಾಯ ಮೂರ್ತಿಯಾಗಿ ಮಂಗಳವಾರ ಅಧಿಕಾರ ವಹಿಸಿಕೊಂಡಿದ್ದಾರೆ.

Advertisement

ಸರ್ವೋಚ್ಚ ನ್ಯಾಯಾಲಯಕ್ಕೆ ನ್ಯಾಯಮೂರ್ತಿಯಾಗಿ ಇತ್ತೀಚೆಗಷ್ಟೇ ನೇಮಕವಾಗಿದ್ದ ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿದ್ದ, ಮಂಡ್ಯ ಮೂಲದ ಬಿ.ವಿ.ನಾಗರತ್ನ ಅವರು ಮಂಗಳವಾರ ಸುಪ್ರೀಂ ಕೋರ್ಟ್‌ನ ಆವರಣದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಅಧಿಕಾರ ಸ್ವೀಕರಿಸಿದರು. ಬಿ.ವಿ.ನಾಗರತ್ನ ಸೇರಿದಂತೆ ಒಟ್ಟು ಒಂಬತ್ತು ಮಂದಿ ನ್ಯಾಯಮೂರ್ತಿಗಳಿಗೆ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ
ಪ್ರಮಾಣ ವಚನ ಭೋದಿಸಿದರು.

ಮೊದಲ ಸಿಜೆಯಾಗುವ ಮಹಿಳಾ ನ್ಯಾಯಾಧೀಶೆ: ತಂದೆ ದಿ.ಇ.ಎಸ್‌.ವೆಂಕಟರಾಮಯ್ಯ ಅವರು ಕೂಡ ಸರ್ವೋಚ್ಚ ನ್ಯಾಯಾಲಯದ ಮುಖ್ಯ
ನ್ಯಾಯಮೂರ್ತಿಯಾಗಿ 6 ತಿಂಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಈಗ ಅವರ ಪುತ್ರಿ ಬಿ.ವಿ.ನಾಗರತ್ನ ಅವರು ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದು, ಇನ್ನು 5 ವರ್ಷಗಳು ಕಾರ್ಯನಿರ್ವಹಿಸಲಿದ್ದು, ನಂತರ ಸೇವಾ ಹಿರಿತನದ ಆಧಾರದಲ್ಲಿ 2027ರಲ್ಲಿ ಸೆಪ್ಟೆಂಬರ್‌ನಿಂದ 36 ದಿನಗಳ ಕಾಲ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಲಿದ್ದಾರೆ. ಇದರಿಂದ ದೇಶದ ಮುಖ್ಯ ನ್ಯಾಯಮೂರ್ತಿಯಾಗುವ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ. ಆ ಮೂಲಕ ಜಿಲ್ಲೆಯ ಕೀರ್ತಿ ಪತಾಕೆಯನ್ನು ಹಾರಿಸಿದ
ಮಹಿಳೆಯೂ ಆಗಲಿದ್ದಾರೆ.

ಇದನ್ನೂ ಓದಿ:ಹೆಲಿಕಾಪ್ಟರ್​ನಲ್ಲಿ ನೇತಾಡಿದ್ದು ಹೆಣವಲ್ಲ; ತಾಲಿಬಾನ್​ ಉಗ್ರನೇ ಜೋತುಬಿದ್ದಿದ್ದ

ಇತಿಹಾಸ ಬರೆಯಲಿರುವ ತಂದೆ-ಮಗಳು: ದೇಶದ ಇದುವರೆಗಿನ ನ್ಯಾಯಾಂಗದ ಇತಿಹಾಸದಲ್ಲಿ ತಂದೆ, ಮಗಳು ಸರ್ವೋಚ್ಚ ನ್ಯಾಯಾಲಯದ
ಮುಖ್ಯ ನ್ಯಾಯಮೂರ್ತಿಯಾದ ದಾಖಲೆ ಬರೆಯಲಿದ್ದು, ಈ ದಾಖಲೆಯೂ ಜಿಲ್ಲೆಯ ಮುಡಿಗೇರಲಿದೆ. ನಾಗರತ್ನ ಅವರ ತಂದೆ ದಿ.ಇ.ಎಸ್‌.
ವೆಂಕಟರಾಮಯ್ಯ ಅವರು 1989ರಲ್ಲಿ 6 ತಿಂಗಳು ದೇಶದ 19ನೇ ಮುಖ್ಯ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಅವರು ಕರ್ನಾಟಕ ದಿಂದ ಆಯ್ಕೆಯಾಗಿದ್ದ ಮೊದಲ ಮುಖ್ಯ ನ್ಯಾಯಮೂರ್ತಿಯೂ ಹೌದು. 2027ರ ವೇಳೆಗೆ ನಾಗರತ್ನ ಅವರು ಸಿಜೆ ಹುದ್ದೆಗೇರಿದರೆ ದೇಶದಲ್ಲಿ ಮೊದಲ ಬಾರಿಗೆ ತಂದೆ-ಮಗಳು ಮುಖ್ಯ ನ್ಯಾಯಮೂರ್ತಿಯಾದ ಇತಿಹಾಸ ದಾಖಲಾಗಲಿದೆ. ಬಿ.ವಿ.ನಾಗರತ್ನ ಅವರು, 2008ರಲ್ಲಿ ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿ, 2010ರಿಂದ ಪೂರ್ಣಾವಧಿ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

Advertisement

ಒಂದೇ ಕುಟುಂಬದ 3 ನ್ಯಾಯಮೂರ್ತಿಗಳು
ದಿ.ಇ.ಎಸ್‌.ವೆಂಕಟರಾಮಯ್ಯ, ಪುತ್ರಿ ಬಿ.ವಿ.ನಾಗರತ್ನ ಹಾಗೂ ಅವರ ಸಹೋದರ ರಾಧಾಕೃಷ್ಣರವರ ಪುತ್ರ ಇಂದ್ರೇಶ್‌ ಅವರು ಪ್ರಸ್ತುತ ಬೆಂಗಳೂರಿನಲ್ಲಿ ಹೈಕೋರ್ಟ್‌ ನ್ಯಾಯಾಧೀಶರಾಗಿದ್ದಾರೆ. ಹೀಗಾಗಿ ಒಂದೇ ಕುಟುಂಬದಲ್ಲೇ ಒಟ್ಟು ಮೂರು ಮಂದಿ ಹೈಕೋರ್ಟ್‌ ನ್ಯಾಯ ಮೂರ್ತಿಯಾಗಿ ಕೆಲಸ ಮಾಡಿರುವ ಹೆಗ್ಗಳಿಕೆ ಈ ಕುಟುಂಬಕ್ಕಿದೆ.

ಇಂಗಲಗುಪ್ಪೆಯಲ್ಲಿ ಸಂಭ್ರಮಾಚರಣೆ
ಮಂಗಳವಾರ ಸುಪ್ರೀಂಕೋಟ್‌ ನ್ಯಾಯಮೂರ್ತಿಯಾಗಿ ಬಿ.ವಿ.ನಾಗರತ್ನ ಅವರು ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಪಾಂಡವಪುರ ತಾಲೂಕಿನ ಇಂಗಲಗುಪ್ಪೆ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ. ಗ್ರಾಮಸ್ಥರು ಸಂಭ್ರಮಾಚರಣೆ ಮಾಡಿ ಸಿಹಿ ಹಂಚಿದ್ದಾರೆ. ಬಿ.ವಿ.ನಾಗರತ್ನ ಅವರು1962ರ ಅಕ್ಟೋಬರ್‌30ರಂದು ಜನಿಸಿದ ಅವರು, ಬೆಂಗಳೂರಿನ ಸೋಫಿಯಾ ಶಾಲೆಯಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದು ನಂತರ ಪಿಯುಸಿ, ಪದವಿ ಹಾಗೂ ಕಾನೂನು ಪದವಿಯನ್ನು ದೆಹಲಿಯಲ್ಲಿ ಪಡೆದಿದ್ದರು. ಆದರೂ ತಮ್ಮ ಹುಟ್ಟೂರನ್ನು ಮರೆತಿಲ್ಲ. ಆಗಾಗ್ಗೆ ಗ್ರಾಮಕ್ಕೆ ಭೇಟಿ ನೀಡುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next