Advertisement
ಪ್ರಾಚೀನ ಹಬ್ಬ: ರಾಮಾವತಾರ ಕಾಲದಲ್ಲಿ ರಾಮನಿಗೆ ತಮ್ಮನಾಗಿ ಲಕ್ಷ್ಮಣ, ಕೃಷ್ಣಾವತಾರ ಕಾಲದಲ್ಲಿ ಕೃಷ್ಣನಿಗೆ ಅಣ್ಣನಾಗಿ ಬಂದ ಬಲರಾಮ ಇದೇ ದೇವತಾಶಕ್ತಿ. ವಿಶ್ವವನ್ನು ಹೊತ್ತವ ಸಂಕರ್ಷಣ ರೂಪಿ ಎಂದು ಪ್ರಸಿದ್ಧಿ. ಸರೀಸೃಪಗಳಲ್ಲಿ ಮುಖ್ಯ ವಾಸುಕಿಯಾದರೆ, ಹೆಡೆ ಇರುವ ನಾಗಗಳಲ್ಲಿ ಮುಖ್ಯ ಅನಂತ ಅಥವಾ ಶೇಷ. ನಾಗ ಪಂಚಮಿ ವೇದ ಪುರಾಣಗಳಲ್ಲಿಯೂ ಉಲ್ಲೇಖಗೊಂಡ ಹಿರಿಯ ಹಬ್ಬ ಎಂದು ಹಿರಿಯ ವಿದ್ವಾಂಸ ಡಾ| ರಾಮನಾಥಾಚಾರ್ಯ ಉಲ್ಲೇಖೀಸುತ್ತಾರೆ. ಇಂತಹ ಹಬ್ಬ ಇಂದಿನವರೆಗೂ ಬೇರೆ ಬೇರೆ ವಿಧಾನಗಳಲ್ಲಿ ಮುಂದುವರಿದು ಬಂದಿದೆ.
Related Articles
Advertisement
ಸಮುದ್ರರಾಜನಿಗೆ ನಾಗಪ್ರಸಾದ: ನಾಗ ಪಂಚಮಿಯಲ್ಲಿ ಉಪಯೋಗಿಸುವ ಅರಿಶಿನ, ಹಿಂಗಾರ, ಸಂಪಿಗೆ ಹೂವುಗಳು ವಿವಿಧ ಬಗೆಯ ರೋಗಗಳಿಗೆ ರಾಮಬಾಣ. ಇದರ ಕುರಿತು ಬೇಕಾದಷ್ಟು ಸಂಶೋಧನೆಗಳು ನಡೆಯಲು ಅವಕಾಶಗಳಿವೆ. ಪುನ್ನಾಗ, ನಾಗಚಂಪಕ, ನಾಗಲಿಂಗ ಮೊದಲಾದ ಅಪರೂಪದ ತಳಿಗಳೂ ಕಾಣಸಿಗದ ಸ್ಥಿತಿಗೆ ತಲುಪಿವೆ. ಅರಿಶಿನ, ಎಳನೀರು ಅಭಿಷೇಕದ ನೀರು ಸಮುದ್ರಕ್ಕೆ ಸೇರಬೇಕು ಎಂಬ ಮಾತು ಇತ್ತು. ಅಂದರೆ ನಾಗಪಂಚಮಿಯಂದು ಭಾರೀ ಮಳೆಯಾಗುತ್ತದೆ ಎಂಬ ಪ್ರತೀತಿ. ಆದರೆ ಇತ್ತೀಚಿಗೆ ಪ್ರಾಕೃತಿಕ ವಿದ್ಯಮಾನಗಳ ಬದಲಾವಣೆಗಳಿಂದ ಇಂತಹ ನಂಬಿಕೆಗಳು ಏರುಪೇರಾಗಿವೆ. ಇಂತಹ ನೈಸರ್ಗಿಕ ವಸ್ತುಗಳು ಭೂಮಿಯ ಒಡಲನ್ನು ಸೇರಿದರೆ ಪರಿಸರದಲ್ಲಿ ಆಗುವ ಪರಿಣಾಮಗಳನ್ನು ಅರಿಯುವುದು ತುಸು ಕಷ್ಟವೆನ್ನಬಹುದು.
ವಿಷದಿಂದಲೇ ವಿಷನಾಶ: ನಾಗನ ಕುರಿತು ಇರುವ ಭಯಕ್ಕೆ ಮುಖ್ಯ ಕಾರಣ ಅದರಲ್ಲಿರುವ ವಿಷ. ಆದರೆ ಸರ್ಪ ಕಚ್ಚಿದರೆ ಕೊಡುವ ಔಷಧವನ್ನು ನಾಗನ ವಿಷದಿಂದಲೇ ತಯಾರಿಸುವ ಕ್ರಮ ಹೋಮಿಯೋಪತಿ ಪದ್ಧತಿ ಯಲ್ಲಿದೆ. ಸರ್ಪದ ವಿಷವನ್ನು ಶುದ್ಧೀಕರಿಸಿ ಒಂದು ಹನಿಗೆ 99 ಅಂಶದಷ್ಟು ಕಬ್ಬಿನ ರಸದಿಂದ ಉಂಟಾಗುವ ಮೊಲಾಸೆಸ್ (ಮದ್ಯಸಾರ) ಮಿಶ್ರಣ ಮಾಡುವುದೇ ಈ ಪ್ರಕ್ರಿಯೆ. ಇವುಗಳನ್ನು ರಭಸದಿಂದ ಕುಲುಕಿಸಿದರೆ ಆಟಮ್‌ಗಳು ಒಡೆದು ಅದರ ಶಕ್ತಿ ಅಪಾರ ಪ್ರಮಾಣದಲ್ಲಿ ಹೆಚ್ಚುವುದು ಇದರ ವೈಶಿಷ್ಟé. ಕೋಲ್ಕತ್ತದಲ್ಲಿ ವಿಶೇಷವಾಗಿ ಇದರ ಔಷಧ ತಯಾರಿಸುವ ಸಂಸ್ಥೆ ಗಳಿವೆ. ಹೋಮಿಯೋಪತಿಯಲ್ಲಿ ಕಾಯಿಲೆಗೆ ಔಷಧ ಕೊಡುವುದಲ್ಲ, ಲಕ್ಷಣಾಧಾರಿತವಾಗಿ ಔಷಧ ಕೊಡುವುದು ಮತ್ತು ಬೇರೆ ಪ್ರಾಣಿಗಳ ಮೇಲೆ ಪ್ರಯೋಗ ಮಾಡಿಯಲ್ಲ, ಮನುಷ್ಯರ ಮೇಲೆಯೇ ಪ್ರಯೋಗ ಮಾಡಿ. ಒಬ್ಬನಿಗೆ ಕೊಟ್ಟ ಔಷಧ ಇನ್ನೊಬ್ಬ ಅದೇ ತರಹದ ರೋಗಿಗೆ ಅನ್ವಯವಾಗುವುದಿಲ್ಲ. ಸರ್ಪದ ವಿಷದಿಂದ ತಯಾರಿಸುವ ಔಷಧ ಕೇವಲ ಹಾವು ಕಚ್ಚಿದವರಿಗೆ ಮಾತ್ರವಲ್ಲ, ಹೃದ್ರೋಗಿಗಳಿಗೂ, ಚರ್ಮವ್ಯಾಧಿಗೂ ಬಳಕೆಯಾಗುತ್ತದೆ ಎಂಬ ಅಭಿಮತ ಉಡುಪಿಯ ಹಿರಿಯ ಹೋಮಿಯೋಪತಿ ವೈದ್ಯ ಡಾ| ನಾರಾಯಣ ರಾವ್ ಅವರದು.
ಆಹಾರ ಸರಪಣಿ ಅಗತ್ಯ: ನಿಸರ್ಗದಲ್ಲಿ ಪ್ರತೀ ಪ್ರಾಣಿಯೂ ಪ್ರಮುಖ ವಾದುದು ಮತ್ತು ಆಹಾರ ಸರಪಣಿ ಕ್ರಮವಿದೆ. ಈ ಸರಪಣಿ ತಪ್ಪಿದರೆ ಘೋರ ಅಪಾಯ ಕಾದಿರುತ್ತದೆ. ಒಂದು ಪ್ರಾಣಿ ಇನ್ನೊಂದು ಪ್ರಾಣಿಯನ್ನು ಆಹಾರ ವಾಗಿ ಬಳಸಿ ನಿಸರ್ಗದ ಸಮತೋಲನವನ್ನು ಕಾಪಾಡುತ್ತದೆ. ಅದೇ ರೀತಿ ಇಲಿ ಸಂತತಿ ನಾಶಕ್ಕೂ ನಾಗರಹಾವಿಗೂ ನೈಸರ್ಗಿಕ ಮಹತ್ವವಿದೆ ಎನ್ನುತ್ತಾರೆ ಹಿರಿಯ ಪ್ರಾಣಿಶಾಸ್ತ್ರಜ್ಞ ಡಾ| ಎನ್.ಎ. ಮಧ್ಯಸ್ಥರು.
ಶುದ್ಧ ವಸ್ತುಗಳ ಬಳಕೆ: ನಾಗನೇ ಪರಿಸರಸ್ನೇಹಿ ಯಾಗಿರುವಾಗ ನಾಗರ ಪಂಚಮಿಗೆ ಸಂಬಂಧಿಸಿದ ಆಚರಣೆಗಳೂ ಪರಿಸರ ಸ್ನೇಹಿಯಾಗಿರಬೇಕೆಂಬ ಹಂಬಲ ಯಥೋಚಿತ. ನಾಗರಪಂಚಮಿ ದಿನ ಉಂಟಾಗುವ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡುವುದು ಅತೀ ಮುಖ್ಯ. ಬಳಸುವ ವಸ್ತುಗಳಲ್ಲಿಯೂ ಶುದ್ಧತೆ ಕಾಪಾಡುವ ಅಗತ್ಯವಿದೆ. ಉದಾಹರಣೆಗೆ, ಕಡಿಮೆ ಕ್ರಯಕ್ಕೆ ಸಿಗುತ್ತದೆ ಎಂಬ ಕಾರಣಕ್ಕೆ ಅಗ್ಗದ ಎಣ್ಣೆ ಯನ್ನು ಕೊಂಡೊಯ್ಯುವುದು. ಎಷ್ಟೋ ಕಡೆಗಳಲ್ಲಿ ಇವು ಒಂದೇ ದಿನ ಬರುವುದರಿಂದ ಸಮರ್ಪಕ ಬಳಕೆಯೂ ಅಸಾಧ್ಯ. ಹಾಲಿನ ಪರಿಶುದ್ಧತೆಯನ್ನು ಕಾಪಾಡುವುದು ಕೇವಲ ದೇವರ ದೃಷ್ಟಿಯಲ್ಲಲ್ಲ, ನಮ್ಮ ದೃಷ್ಟಿಯಿಂದಲೂ ಮುಖ್ಯ. ಇಂತಹ ವಸ್ತುಗಳನ್ನು ಆದಷ್ಟು ಕಡಿಮೆ ಮಾಡುವುದು ಅಗತ್ಯವಾಗಿದೆ. ಇದನ್ನು ಕೇವಲ ನಾಗರಪಂಚಮಿಗೆ ಮಾತ್ವ ಅನ್ವಯಿಸದೆ ನಿತ್ಯದ ಆಚರಣೆಗೂ ಅನ್ವಯ ವಾಗಬೇಕು. ಸಾಮೂಹಿಕ ಆಚರಣೆಗಳು ಇರುವಲ್ಲಿ ಎಲ್ಲರೂ ಸ್ವಲ್ಪ ಸ್ವಲ್ಪ ಅರಿಶಿನ, ಬತ್ತಿ, ಎಣ್ಣೆಯ ಪ್ಯಾಕೇಟುಗಳನ್ನು ಕೊಂಡೊಯ್ಯುವ ಬದಲು ಒಬ್ಬರು ರಖಂ ಆಗಿ ವ್ಯವಸ್ಥೆಗೊಳಿಸಿದರೆ ತ್ಯಾಜ್ಯಗಳ ಸಂಗ್ರಹ ಕಡಿಮೆಯಾಗುತ್ತದೆ, ಎಲ್ಲಕ್ಕಿಂತ ಹೆಚ್ಚಾಗಿ ಭಕ್ತರಿಗೆ ಅನುಕೂಲವಾಗುತ್ತದೆ.
– ಮಟಪಾಡಿ ಕುಮಾರಸ್ವಾಮಿ