Advertisement

ಇನ್ನೂ ಮೂರು ದಿನ ಪೊಲೀಸ್‌ ವಶಕ್ಕೆ ನಾಗರಾಜ್‌

12:34 PM May 23, 2017 | Team Udayavani |

ಬೆಂಗಳೂರು: ಬ್ಲ್ಯಾಕ್‌ ಆ್ಯಂಡ್‌ ವೈಟ್‌ ದಂಧೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಾಗರಾಜ್‌ ಮತ್ತು ಆತನ ಇಬ್ಬರು ಮಕ್ಕಳನ್ನು ಹೆಣ್ಣೂರು ಪೊಲೀಸರು ಮತ್ತೆ ಮೂರು ದಿನ ವಶಕ್ಕೆ ಪಡೆದಿದ್ದಾರೆ. ಮೇ 11ರಂದು ತಮಿಳುನಾಡಿನ ವೆಲ್ಲೂರಿನಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರು, 11 ದಿನಗಳ ಕಾಲ ವಶಕ್ಕೆ ಪಡೆದಿದ್ದರು.

Advertisement

ಇದೀಗ ಪೊಲೀಸ್‌ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಸೋಮವಾರ ಮೇಯೋ ಹಾಲ್‌ನಲ್ಲಿರುವ ನ್ಯಾಯಾಲಯಕ್ಕೆ ಹಾಜರು ಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಮತ್ತೆ ವಶಕ್ಕೆ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿದರು. ಮನವಿ ಪುರಸ್ಕರಿಸಿದ ನ್ಯಾಯಾಲಯ, ಮೇ 25ರವರೆಗೆ ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಿ ಆದೇಶಿಸಿದೆ.

ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಆರೋಪಿ ಗಳನ್ನು ಬಂಧಿಸಬೇಕಿದೆ. ಜತೆಗೆ ಆರೋಪಿಗಳನ್ನು ತಮಿಳನಾಡಿನ ವೆಲ್ಲೂರು ಸೇರಿ ಹಲವೆಡೆ ಕರೆದೊಯ್ದು ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕಿದೆ. ಈ ಹಿನ್ನೆಲೆಯಲ್ಲಿ ವಶಕ್ಕೆ ನೀಡುವಂತೆ ಮನವಿ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ ಮೂರು ದರೋಡೆ ಪ್ರಕರಣಗಳ ಸಂಬಂಧ ನಾಗರಾಜನನ್ನು ತಮ್ಮ ವಶಕ್ಕೆ ಪಡೆಯಲು ಕೆಂಗೇರಿ ಠಾಣೆ ಪೊಲೀಸರು ಅರ್ಜಿ ಸಲ್ಲಿಸಿದ್ದಾರೆ.

ಪ್ರಕರಣ ಸಂಬಂಧ ಸೋಮವಾರ ವಿಚಾರಣೆಗೆ ಹಾಜರಾದ ನಾಗರಾಜನ ಇಬ್ಬರು ಪತ್ನಿಯರ ಪೈಕಿ ಪಾಲಿಕೆ ಮಾಜಿ ಸದಸ್ಯೆ ಲಕ್ಷ್ಮಿಗೆ ನಾಗರಾಜನ ಅವ್ಯವಹಾರದ ಸಂಪೂರ್ಣ ಮಾಹಿತಿ ಇದೆ. ಲಕ್ಷ್ಮಿಗೆ ಹೊಸ ನೋಟುಗಳನ್ನು ಇಟ್ಟಿರುವ ಜಾಗ ತಿಳಿದಿದೆ ಎಂದು ನಾಗರಾಜ್‌ ವಿಚಾರಣೆ ವೇಳೆ ಹೇಳಿದ್ದ.

ಈ ಹಿನ್ನೆಲೆಯಲ್ಲಿ ಲಕ್ಷ್ಮಿ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಸಾಲ ಮಾಡಿಯಾದರೂ ಹಣ ಕೊಡುತ್ತೇನೆಂದು ಎರಡು ದಿನಗಳ ಕಾಲಾವಕಾಶ ಕೋರಿದ್ದಾರೆ. ಆದರೆ, ಮಂಗಳವಾರ ಸಂಜೆವರೆಗೂ ಅವರಿಗೆ ಸಮಯಾವಕಾಶ ಕೊಟ್ಟಿದ್ದು, ಸೂಕ್ತ ಮಾಹಿತಿ ನೀಡದಿದ್ದಲ್ಲಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆಯುವುದಾಗಿ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ. 

Advertisement

ಚೆನ್ನೈನಲ್ಲಿ ಬದಲಾವಣೆಗೆ ಸಂಚು: ವಿಚಾರಣೆ ವೇಳೆ ನಾಗರಾಜ್‌, “ನಾನು 20 ಕೋಟಿ ರೂ. ಸಂಗ್ರಹಿಸಿ ತಮಿಳುನಾಡಿನ ಚೆನ್ನೈನಲ್ಲಿರುವ ಸ್ನೇಹಿತನೊಬ್ಬನ ಮೂಲಕ ಶೇ.10ರಷ್ಟು ಕಮಿಷನ್‌ ಆಧಾರದಲ್ಲಿ ನೋಟುಗಳ ಬದಲಾವಣೆಗೆ ಯೋಜನೆ ರೂಪಿಸಿದ್ದೆ. ಇದೇ ಹಣದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಚಿಂತನೆ ನಡೆಸಿದ್ದೆ. ಆದರೆ, ನನ್ನ ಬಳಿಯಿದ್ದದ್ದು ಹಳೇ ನೋಟುಗಳು, ಹೊಸ ನೋಟುಗಳಲ್ಲ,’ ಎಂದು ಆರೋಪಿ ಪುನರುಚ್ಚರಿಸಿದ್ದಾನೆಂದು ಮೂಲಗಳು ತಿಳಿಸಿವೆ.

ಪತಿ- ಪತ್ನಿ ಚರ್ಚೆ
ಸೋಮವಾರ ವಿಚಾರಣೆಗೆ ಹಾಜರಾದ ಪತ್ನಿಯರ ಪೈಕಿ ಲಕ್ಷ್ಮಿ ಜತೆ ಮಾತನಾಡಲು ನಾಗರಾಜ್‌ ಮನವಿ ಮಾಡಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಪತಿ-ಪತ್ನಿಯ ಮಾತುಕತೆಗೆ 10 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ಈ ವೇಳೆ ಅವರಿಬ್ಬರೂ ತಮಿಳು ಭಾಷೆಯಲ್ಲಿ ಚರ್ಚಿಸಿದ್ದಾರೆ. ವಂಚಿಸಿದ ಹಣವನ್ನು ಕೊಟ್ಟು ಬಿಡುಗಡೆಗೆ ಸಹಾಯ ಮಾಡುವಂತೆ ಪತ್ನಿ ಬಳಿ ಆರೋಪಿ ಮನವಿ ಮಾಡಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಬಿಟ್ಬುಡಿ ಸ್ವಾಮಿ
ಸೋಮವಾರ ಮಧ್ಯಾಹ್ನ ಕೋರ್ಟ್‌ಗೆ ಹಾಜರಾದ ನಾಗರಾಜ್‌ನನ್ನು ನ್ಯಾಯಾಧೀಶರು ಮತ್ತೆ ಪೊಲೀಸ್‌ ವಶಕ್ಕೆ ಆದೇಶಿಸುತ್ತಿದ್ದಂತೆ ಆರೋಪಿ ಕೋರ್ಟ್‌ ಆವರಣದಲ್ಲೇ ಹೈಡ್ರಾಮಾ ಸೃಷ್ಟಿಸಿದ್ದಾನೆ. ಕೋರ್ಟ್‌ ಆವರಣದಲ್ಲೇ ಗಳಗಳನೇ ಕಣ್ಣೀರು ಸುರಿಸಿ, “ದಯಮಾಡಿ ನನ್ನನ್ನು ಬಿಟ್ಟುಬಿಡಿ ಸ್ವಾಮಿ’ ಎಂದು ಪೊಲೀಸರಿಗೆ ಸನ್ನೆ ಮೂಲಕ ಅಂಗಲಾಚಿದ್ದಾನೆ. ಅಲ್ಲದೆ “ಎಲ್ಲ ಹಣೆ ಬರಹ’ ಎಂದು ಹಣೆ ಮೇಲೆ ಕೈ ಇಟ್ಟು ಪೊಲೀಸ್‌ ವಾಹನ ಏರಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next