ಹುಣಸೂರು: ನಾಗರಹೊಳೆ ಉದ್ಯಾನದಲ್ಲಿ ಹುಲಿ ಹತ್ಯೆಗೈದು, ನಾಲ್ಕು ಕಾಲುಗಳೊಂದಿಗೆ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೂಬ್ಬ ಪ್ರಮುಖ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ, ಆತನಿಂದ ಹುಲಿಯ ನಾಲ್ಕು ಉಗುರು, ಎರಡು ಕೋರೆ ಹಲ್ಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಉದ್ಯಾನದಂಚಿನ ಬಾಳೆಲೆ ಹೋಬಳಿಯ ನಿಟ್ಟೂರು ಗ್ರಾಮದ ವಟ್ಟಂಗಡ ರಂಜು ಅಲಿಯಾಸ್ ಬಿದ್ದಪ್ಪ ಬಂಧಿತ ಆರೋಪಿ.
ಘಟನೆ ವಿವರ: ಆ.26ರಂದು ಕಲ್ಲಹಳ್ಳ ವಲಯದಲ್ಲಿ 6 ವರ್ಷದ ಗಂಡು ಹುಲಿಯನ್ನು ಹತ್ಯೆಗೈದು, ಹುಲಿಯ ನಾಲ್ಕು ಕಾಲುಗಳನ್ನು ಕತ್ತರಿಸಿ ಹಾಗೂ ಕೋರೆ ಹಲ್ಲುಗಳನ್ನು ಹೊತ್ತೂಯ್ದಿದ್ದ ಪ್ರಕರಣ ಸಂಬಂಧ ಬಂಡೀಪುರ ಉದ್ಯಾನದ ಶ್ವಾನ ರಾಣಾನ ನೆರವಿನಿಂದ ತಟ್ಟೆಕೆರೆ ಹಾಡಿ ಬಳಿಯ ಸಂತೋಷ್ ಎಂಬಾತ ಆರೋಪಿಯನ್ನು ಬಂಧಿಸಿ, 7 ಉಗುರುಗಳನ್ನು ವಶಪಡಿಸಿಕೊಳ್ಳಲಾಗಿತ್ತು, ಉಳಿದ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು.
ಮೊಬೈಲ್ ಜಾಡು: ಆರೋಪಿಯ ಮೊಬೈಲ್ ಜಾಡು ಹಿಡಿದು ಆರೋಪಿ ರಂಜುನನ್ನು ರಾಮನಗರದ ಬಸ್ ನಿಲ್ದಾಣದ ಬಳಿ ಆ.31 ರಾತ್ರಿ ಬಂಧಿಸಿ ಕರೆತಂದು ವಿಚಾರಣೆಗೊಳಪಡಿಸಲಾಗಿ, ಆತನ ಮನೆ ಹತ್ತಿರದ ಕಾಫಿ ತೋಟದಲ್ಲಿ ಹುದುಗಿಸಿಟ್ಟಿದ್ದ ಹುಲಿಯ ಹಲ್ಲು, ಉಗುರುಗಳನ್ನು ಪತ್ತೆಹಚ್ಚಿ ಅಮಾನತು ಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಉಳಿದ ಆರೋಪಿಗಳ ಬಂಧನಕ್ಕೂ ಬಲೆ ಬೀಸಲಾಗಿದೆ. ಈವರೆಗೆ 11 ಉಗುರು ಸಿಕ್ಕಿದ್ದು, ಇನ್ನು 7 ಉಗುರುಗಳು ಪತ್ತೆಯಾಗಬೇಕಿದೆ ಎಂದು ಎ.ಸಿ.ಎಫ್.ಸತೀಶ್ ಮಾಹಿತಿ ನೀಡಿದ್ದಾರೆ.
ಹುಲಿ ಯೋಜನೆ ನಿರ್ದೇಶಕ ಡಿ.ಮಹೇಶ್ ಕುಮಾರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎ.ಸಿ.ಎಫ್.ಗಳಾದ ಪೌಲ್ ಆಂಟೋಣಿ, ಸತೀಶ್, ಆರ್.ಎಫ್.ಓ.ಗಳಾದ ಗಿರೀಶ್ ಜಿ. ಚೌಗುಲೆ, ಸಂತೋಷ್‌ಹೂಗಾರ್, ಅಮಿತ್‌ಗೌಡ, ಡಿ.ಆರ್.ಎಫ್.ಓ.ಯೋಗೀಶ್, ಅರಣ್ಯ ರಕ್ಷಕರಾದ ಭರಮಪ್ಪ, ಗಣೇಶ್, ವಾಹನ ಚಾಲಕರಾದ ನಿರಾಲ್‌ಕುಮಾರ್, ಬಸವರಾಜು ಭಾಗವಹಿಸಿದ್ದರು.