ನಾಗಮಂಗಲ: ಕನ್ನಡ ಭಾಷೆ ಉತ್ತುಂಗಕ್ಕೆ ಕೊಂಡೊಯ್ದ ಕೀರ್ತಿ ನಮ್ಮ ಕವಿಗಳಾದ ಶಿವರಾಮ ಕಾರಂತರು ಹಾಗೂ ಕುವೆಂಪು ಅವರಿಗೆ ಸಲ್ಲುತ್ತದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಹೇಳಿದರು.
ತಾಲೂಕಿನ ಬಿಜಿ ನಗರದ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆದಿ ಚುಂಚನಗಿರಿ ವಿಶ್ವವಿದ್ಯಾಲಯದ ಸಮೂಹ ಶಿಕ್ಷಣ ಸಂಸ್ಥೆಗಳು ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ-2019 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೆಳೆಸುವುದು ನಮ್ಮ ಕೆಲಸ: ಕನ್ನಡ ಭಾಷೆ ಇಷ್ಟು ಎತ್ತರಕ್ಕೆ ಬೆಳೆಯಲು, ಹಾಗೆಯೇ ನಾವು ಮರೆತಿದ್ದ ಭಾಷಾಭಿಮಾನ ಮತ್ತೆ ಮರುಕಳಿಸುವಂತೆ ಮಾಡಿದ್ದು ನಮ್ಮ ಕವಿಗಳಾದ ಶಿವರಾಮ ಕಾರಂತರು ಹಾಗೂ ಕುವೆಂಪುರವರು. ಅವರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅಪಾರ, ಹೀಗೆ ಕನ್ನಡದ ಉಳಿವಿಗೆ ನಮ್ಮ ಹಲವು ಸಾಹಿತಿಗಳು, ಕವಿಗಳು ಕೊಡುಗೆ ನೀಡಿದ್ದಾರೆ.
ನಾವು ಈ ಭಾಷೆಯನ್ನು ಉಳಿಸಿ, ಬೆಳೆಸುವ ಮೂಲಕ ಯುವ ಪೀಳಿಗೆಗೆ ಧಾರೆ ಎರೆಯುವ ಕೆಲಸ ಮಾಡಬೇಕು ಎಂದು ಹೇಳಿದರು. ವಿವಿಧತೆಯಲ್ಲಿ ಏಕತೆ: ದೇಶಕ್ಕೆ ಭವ್ಯ ಪರಂಪರೆ ಇದೆ. ವಂದೇ ಮಾತರಂ ಹಾಡು ನಮ್ಮ ಭಾರತ ಖಂಡಕ್ಕೆ ಬಹಳ ಹೊಂದಿಕೊಳ್ಳುತ್ತದೆ. ಇದಕ್ಕೆ ಕಾರಣ ಭಾರತ ದೇಶದಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸೇರಿದಂತೆ ಎಲ್ಲರೂ ಸಹಬಾಳ್ವೆಯಿಂದ ಕೂಡಿ ಬಾಳುತ್ತಿದ್ದೇವೆ. ಭಾರತ ದೇಶದಲ್ಲಿ 64 ಸಾವಿರ ಜಾತಿ, 2 ಸಾವಿರಕ್ಕೂ ಹೆಚ್ಚಿನ ಭಾಷೆ ಹಾಗೂ 33 ಕೋಟಿ ದೇವತೆಗಳ ತವರೂರು ಭಾರತ ದೇಶ. ಎಲ್ಲಾ ಸಮಾಜ ಹೀಗೆ ಒಂದಾಗಿ ಹೋದಾಗ ಮಾತ್ರ ಈ ದೇಶ ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹನಿಗವನ ಸಾಹಿತಿ ದುಂಡಿರಾಜ್ ಮಾತನಾಡಿದರು. ಅಲ್ಲದೇ ವಿದ್ಯಾರ್ಥಿಗಳಿಗೆ ಕೆಲ ಹನಿಗವನ ಹೇಳಿ ರಂಜಿಸಿದರು. ಇದೇ ವೇಳೆ ಗಣ್ಯರು ಆರೋಗ್ಯ ಸುಧೆ ಕೃತಿ ಬಿಡುಗಡೆ ಮಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಕಾರ್ಯಕ್ರಮಕ್ಕೂ ಮುನ್ನ ವೈದ್ಯಕೀಯ ವಿದ್ಯಾರ್ಥಿ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ, ಭರತನಾಟ್ಯ, ಕನ್ನಡ ಕುರಿತಾದ ಹಾಡುಗಳು, ಏಕಪಾತ್ರಾಭಿನಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ಪುರುಶೋತ್ತಮಾನಂದನಾಥ ಸ್ವಾಮೀಜಿ, ಶಾಸಕ ಸುರೇಶ್‌ಗೌಡ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಚಂದ್ರಶೇಖರಶೆಟ್ಟಿ, ರಿಜಿಸ್ಟಾರ್ ಸುಬ್ಬರಾಯ, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು, ಎಂಜಿನೀಯರ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಕೆ.ನರೇಂದ್ರ, ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ರಮೇಶ್, ಪ್ರೊ.ರಾಮು ಸೇರಿದಂತೆ ಮತ್ತಿತರರು ಹಾಜರಿದ್ದರು.