Advertisement

Nagamangala Case ಬಂಧನದ ಭೀತಿ: ಊರು ಬಿಟ್ಟ ಯುವಕರು

11:28 PM Sep 13, 2024 | Team Udayavani |

ಮಂಡ್ಯ: ಗಣೇಶಮೂರ್ತಿ ಪ್ರತಿಷ್ಠಾಪಿಸಿದ್ದ ಪಟ್ಟಣಕ್ಕೆ ಹೊಂದಿಕೊಂಡಂತಿರುವ ಬದ್ರಿಕೊಪ್ಪಲು ಹಾಗೂ ಗಲಭೆ ಆರಂಭವಾದ ಮೈಸೂರು ರಸ್ತೆಯ ಮುಸ್ಲಿಂ ಬ್ಲಾಕ್‌ನಲ್ಲಿ ನೀರವ ಮೌನ ಆವರಿಸಿದೆ. ಬಂಧನದ ಭೀತಿಯಿಂದ ಕೆಲವು ಪುರುಷರು ಬದ್ರಿಕೊಪ್ಪಲು ಗ್ರಾಮ ತೊರೆದಿದ್ದಾರೆ. ಇತ್ತ ಮುಸ್ಲಿಂ ಬ್ಲಾಕ್‌ನ ಕೆಲವರು ಮನೆ ತೊರೆದಿದ್ದಾರೆ.

Advertisement

ಇದರಿಂದ ಬಂಧಕ್ಕೊಳಗಾದ ಯುವಕರು ಹಾಗೂ ತಮ್ಮ ಪತಿಯನ್ನು ಬಂಧಿಸಿರುವ ಮಹಿಳೆಯರ ಅಳಲು, ಅಸಹಾಯಕತೆ ಎದ್ದು ಕಾಣುತ್ತಿತ್ತು. ನಾಗಮಂಗಲಕ್ಕೆ ಯಾರೇ ರಾಜಕೀಯ ಮುಖಂಡರು ಭೇಟಿ ನೀಡಿದರೂ ಅವರನ್ನು ಗುಂಪು ಗುಂಪಾಗಿ ಭೇಟಿ ಮಾಡುತ್ತಿರುವ ಮಹಿಳೆಯರು ತಮ್ಮ ಮಕ್ಕಳು ಹಾಗೂ ಪತಿಯನ್ನು ಬಿಡುಗಡೆ ಮಾಡುವಂತೆ ಮನವಿ ಮಾಡುತ್ತಿದ್ದಾರೆ.

ಪೊಲೀಸರು ಸಿಸಿ ಟಿವಿ ದೃಶ್ಯಗಳಲ್ಲಿ ನಿಮ್ಮ ಮಗ ಇಲ್ಲದಿದ್ದರೆ ಬಿಟ್ಟು ಕಳುಹಿಸುತ್ತೇವೆ ಎಂದು ಹೇಳಿದ್ದರು. ಆದರೆ, ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಹಾಕಿದ್ದಾರೆ. ನಮ್ಮ ಮಗ, ತಮ್ಮ ಮನೆಯವರು ಯಾವುದೇ ತಪ್ಪು ಮಾಡಿಲ್ಲ. ಆ ಘಟನೆಯಲ್ಲಿ ಭಾಗಿಯಾಗಿಲ್ಲ. ಆದರೂ, ಪೊಲೀಸರು ಜೈಲಿಗೆ ಹಾಕಿದ್ದಾರೆ. ಆದ್ದರಿಂದ ನಮ್ಮವರನ್ನು ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಮುಂದೆ ಗೋಳಾಡುತ್ತಿದ್ದ ದೃಶ್ಯ ಕಂಡು ಬಂದಿತು.

ಬೆಂಕಿ 40 ಗಂಟೆ ಕಳೆದರೂ ಆರಿಲ್ಲ
ನಾಗಮಂಗಲ: ಗಲಭೆ ವೇಳೆ ಬೆಂಕಿ ಬಿದ್ದಿದ್ದ ಆಟೋ ಮೊಬೈಲ್‌ ಹಾಗೂ ಪಂಚರ್‌ ಅಂಗಡಿಯಲ್ಲಿ 40 ಗಂಟೆ ಕಳೆದರೂ ಬೆಂಕಿ ಮಾತ್ರ ಆರಿರಲಿಲ್ಲ. ರಿಜಾನ್‌ ಸಲೀಂ ಅವರಿಗೆ ಸೇರಿದ್ದ ಅಂಗಡಿಗಳಲ್ಲಿ ಬೆಂಕಿ ಉರಿಯುತ್ತಲೇ ಇತ್ತು. ಶುಕ್ರವಾರ ಇದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬಂದಿ ಬೆಂಕಿ ನಂದಿಸಿದ್ದಾರೆ. ಅಂಗಡಿಯ ಛಾವಣಿ ತೆಗೆದು ಸಿಬ್ಬಂದಿ ಬೆಂಕಿ ನಂದಿಸಿದರು.

ಬೆಂಕಿ ಹಾಕುವಾಗ ಅಂಗಡಿಯ ಷಟರ್‌ ಜಖಂಗೊಳಿಸಿದ್ದರಿಂದ ಒಳಗಡೆ ಏನಾಗಿದೆ ಎಂಬುದು ಗೊತ್ತಿರಲಿಲ್ಲ. ಇದರಿಂದ ಅಂಗಡಿಯ ಒಳಗೆಯೇ ಬೆಂಕಿ ಹೊತ್ತಿಕೊಂಡು ಉರಿದಿತ್ತು. ಆದರೆ, ಸರಿಯಾಗಿ ಬೆಂಕಿ ನಂದಿಸಿರಲಿಲ್ಲ. ಶುಕ್ರವಾರ ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಿತ್ತು. ಅಗ್ನಿಶಾಮಕ ಸಿಬಂದಿ ಷಟರ್‌ ಒಡೆದು ಬೆಂಕಿ ನಂದಿಸಿದರು. ಅಂಗಡಿಯಲ್ಲಿ 25 ಲಕ್ಷ ರೂ. ಮೌಲ್ಯದ ಆಟೋ ಮೊಬೈಲ್‌, ಟೈರ್‌ಗಳು ಸುಟ್ಟು ಕರಕಲಾಗಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.