ಗಂಗೊಳ್ಳಿ: ಇಲ್ಲಿನ ಶಾಂತಯ್ಯನಕೇರಿ ಸಕ್ಲಾತಿ ಕುಟುಂಬದ ಮೂಲ ನಾಗಬನದಲ್ಲಿ ಮಂಗಳೂರಿನ ಶ್ರೀ ಗುರುಪರಾಶಕ್ತಿ ಮಠದ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮಿ ದಂಪತಿಯ ಆಶೀರ್ವಾದದೊಂದಿಗೆ ಶುಕ್ರವಾರ ರಾತ್ರಿ ಚತು:ಪವಿತ್ರ ನಾಗಮಂಡಲೋತ್ಸವ ಸಂಪನ್ನಗೊಂಡಿತು.
ಶನಿವಾರ ಬೆಳಗ್ಗೆ ಸೂರ್ಯೋದಯಕ್ಕೆ ಮಂಗಲಗಣಯಾಗ ಜರಗಿತು. ಶುಕ್ರವಾರ ರಾತ್ರಿ ನಾಗಬನದಲ್ಲಿ ಹಾಲಿಟ್ಟು ಸೇವೆ, ಮಂಡಲ ಪೂಜೆ ನಡೆದು ಬಳಿಕ ದಿವ್ಯ ಮಂಟಪದಲ್ಲಿ ಚತು: ಪವಿತ್ರ ನಾಗಮಂಡಲೋತ್ಸವ ನಡೆಯಿತು.
ಕೆ.ಸುಬ್ರಹ್ಮಣ್ಯ ಅಡಿಗ ಅವರು ನಾಗಪಾತ್ರಿಗಳಾಗಿ, ಗೋಳಿ ಅಂಗಡಿಯ ವಾಸುದೇವ ವೈದ್ಯ ಮತ್ತು ಬಳಗದವರು ವೈದ್ಯರಾಗಿ ನಾಗಮಂಡಲೋತ್ಸವ ನಡೆಸಿಕೊಟ್ಟರು. ಜಿ.ಲಕ್ಷ್ಮಿನಾರಾಯಣ ಭಟ್ ಮತ್ತು ವಾದೀಶ ಭಟ್ ಹೂವಿನಕೆರೆ ಮಾರ್ಗದರ್ಶನದಲ್ಲಿ ಪುರೋಹಿತರ ನೇತೃತ್ವದಲ್ಲಿ ಅಯುತ ಸಂಖ್ಯಾತಿಯಾಗ, ಕೂಷ್ಮಾಂಡಹೋಮ, ಪವಮಾನ ಹೋಮ, ವೇದ ಪಾರಾಯಣ, ಆಶ್ಲೇಷಾ ಬಲ್ಯುದ್ಯಾಪನ ಹೋಮ, ಅಧಿವಾಸ ಹೋಮ, ಕಲಾತತ್ವ ಹೋಮ, ಪ್ರಧಾನ ಹೋಮ, ಬ್ರಹ್ಮಕಲಶಾಭಿಷೇಕ, ವಿವಿಧ ದಾನಾದಿಗಳು, ವಟು ಬ್ರಾಹ್ಮಣ ಆರಾಧನೆ, ಸುವಾಸಿನಿ ಪೂಜೆ, ದಂಪತಿ ಪೂಜೆ, ಆಚಾರ್ಯ ಪೂಜೆ, ಶ್ರೀ ನಾಗದೇವರಿಗೆ ಮಹಾಪೂಜೆ, ನಾಗ ಸಂದರ್ಶನ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ಜರಗಿತು.
ಪಾನಕ ವಿತರಣೆ
ಇದೇ ವೇಳೆ ಈ ಚತುಃ ಪವಿತ್ರ ನಾಗಮಂಡ ಲೋತ್ಸವದಲ್ಲಿ ರಾತ್ರಿಯಿಂದ ಬೆಳಗ್ಗಿನವರೆಗೂ ಬಂದಂತಹ ಭಕ್ತರಿಗೆ ನಿರಂತರವಾಗಿ ನೀರು ಹಾಗೂ ಪಾನಕವನ್ನು ನಿಸ್ವಾರ್ಥವಾಗಿ ವಿತರಣೆ ಮಾಡುವ ಮೂಲಕ ಕೋಟೇಶ್ವರದ ಪದ್ಮಮ್ಮ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಸೇವಾದಾರರಾದ ನಾಗರಾಜ ಶಿವರಾಮ ಸಕ್ಲಾತಿ, ಮಂಜುನಾಥ ಶಿವರಾಮ ಸಕ್ಲಾತಿ, ಸಕ್ಲಾತಿ ಕುಟುಂಬಸ್ಥರು, ಬಾಲಿ ಕುಟುಂಬಸ್ಥರು, ಸಹಸ್ರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.