Advertisement

ನಾಗಾಇದಲಾಯಿ ಕೆರೆಯಲಿ ಬಿರುಕು

06:09 PM Aug 02, 2022 | Team Udayavani |

ಚಿಂಚೋಳಿ: ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದ ನಾಗಾಇದಲಾಯಿ ಗ್ರಾಮದ ಸಣ್ಣ ನೀರಾವರಿ ಕೆರೆಯ ಬಂಡಿಂಗನಲ್ಲಿ ಬಿರುಕು ಉಂಟಾಗಿ ಕೆರೆ ಒಡೆಯುವ ಸಾಧ್ಯತೆ ಇದೆ. ಸಂಗ್ರಹಣೆಗೊಂಡಿರುವ ನೀರು ಖಾಲಿ ಮಾಡುವ ಕಾರ್ಯ ನಡೆಯುತ್ತಿದೆ. ಕೆರೆ ಕೆಳಭಾಗದ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ಶಾಸಕ ಡಾ| ಅವಿನಾಶ ಜಾಧವ್‌ ತಿಳಿಸಿದರು.

Advertisement

ನಾಗಾಇದಲಾಯಿ ಗ್ರಾಮದ ಸಣ್ಣನೀರಾವರಿ ಕೆರೆ ಸ್ಥಿತಿಗತಿ ಮತ್ತು ದುರಸ್ತಿಕಾರ್ಯ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಕಳೆದ 2020ರಲ್ಲಿ ವ್ಯಾಪಕ ಮಳೆ ಸುರಿದ ಪರಿಣಾಮವಾಗಿ ಕೆರೆ ನೀರಿನ ರಭಸಕ್ಕೆ ಒಡೆದು ಹೋಗಿತ್ತು. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ರೈತರ ಬೆಳೆಗಳು ಮತ್ತು ಅನೇಕ ಮನೆಗಳಿಗೆ ನೀರು ನುಗ್ಗಿ ಹಾನಿ ಆಗಿರುವುದರಿಂದ ಸಣ್ಣ ನೀರಾವರಿ ಕೆರೆ ಸಚಿವ ಜೆ.ಸಿ. ಮಾಧುಸ್ವಾಮಿ ಭೇಟಿ ನೀಡಿ ದುರಸ್ತಿ ಕಾರ್ಯ ಕೈಕೊಳ್ಳುವುದಕ್ಕಾಗಿ ನೈಸರ್ಗಿಕ ವಿಪತ್ತು ನಿರ್ವಹಣೆ ಯೋಜನೆ ಅಡಿ 4ಕೋಟಿ ರೂ. ಮಂಜೂರಿಗೊಳಿಸಿದ್ದರಿಂದ ಕೆರೆಯನ್ನು ದುರಸ್ತಿಗೊಳಿಸಲಾಗಿದೆ ಎಂದರು.

ಕಳೆದ ಏಪ್ರಿಲ್‌-ಮೇ ತಿಂಗಳಲ್ಲಿ ದುರಸ್ತಿ ಕಾರ್ಯ ಪುರ್ಣಗೊಳಿಸಲಾಗಿದೆ. ಕೆರೆ ದುರಸ್ತಿ ಕಾರ್ಯ ನಡೆಸಿದ ಸ್ಥಳದಲ್ಲಿ ಮಣ್ಣಿನ ಕುಸಿತ ಆಗಿಲ್ಲ. ಬೇರೆ ಕಡೆಯಲ್ಲಿ ಕುಸಿತವಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಕೆರೆಯ ಒಡೆಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೆರೆಯ ವೇಸ್ಟ್‌ವೇರ್‌ನಿಂದ ನೀರು ಖಾಲಿ: ನಾಗಾಇದಲಾಯಿ ಗ್ರಾಮದಲ್ಲಿ ರೈತರ ಅನುಕೂಲಕ್ಕಾಗಿ ಆಗಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು 1972ರಲ್ಲಿ ಕೆರೆ ನಿರ್ಮಿಸಿಕೊಟ್ಟಿದ್ದರು. 50 ವರ್ಷದ ಹಳೆಯ ಕೆರೆ ಆಗಿರುವುದರಿಂದ ಕೆರೆ ಒಡೆಯುವ ಸಾಧ್ಯತೆ ಇರುವುದರಿಂದ ಎರಡು ಕಡೆಗೆ ವೇಸ್ಟ್‌ವೇರ್‌ ಮೂಲಕ ನೀರು ಹರಿದು ಬಿಡಲಾಗಿರುವುದರಿಂದ ಅಪಾರ ಪ್ರಮಾಣದಲ್ಲಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ ಎಂದು ನಿರಾಶೆ ವ್ಯಕ್ತಪಡಿಸಿದರು.

ತಜ್ಞರ ತಂಡದಿಂದ ಪರಿಶೀಲನೆ: ನಾಗಾಇದಲಾಯಿ ಸಣ್ಣ ನೀರಾವರಿ ಕೆರೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ವಿಶೇಷ ತಜ್ಞರಿಂದ ಪರಿಶೀಲಿಸಿ ಅವರು ನೀಡಿದ ವರದಿ ಆಧಾರದ ಮೇಲೆ ಸರಕಾರಕ್ಕೆ ಹೆಚ್ಚು ಅನುದಾನ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ನಾಗಾಇದಲಾಯಿ ಗ್ರಾಮದ ಸಣ್ಣ ನೀರಾವರಿ ಕೆರೆ ದುರಸ್ತಿಗೆ ಸರಕಾರ ಈಗಾಗಲೇ 4 ಕೋಟಿ ರೂ.ಅನುದಾನ ನೀಡಿದೆ. ಆದರೆ ಕಾಮಗಾರಿ ಗುಣಮಟ್ಟದ ಸರಿಯಾಗಿ ನಡೆದಿಲ್ಲವೆಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಪಂ ಮುಖ್ಯಕಾರ್ಯನಿರ್ವಾಹಣಾ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಶಾಸಕರು ತಿಳಿಸಿದರು.

Advertisement

ತಾಲೂಕಿನ ನಾಗಾಇದಲಾಯಿ ಗ್ರಾಮದ ಸಣ್ಣ ನೀರಾವರಿ ಕೆರೆಯೂ ಮುಂದಿನ ದಿನಗಳಲ್ಲಿ ಯಾವುದೇ ಸಂದರ್ಭದಲ್ಲಿ ಕೆರೆ ಒಡೆದು ಹೋಗುವ ಸಾಧ್ಯತೆ ಇರುವುದರಿಂದ ನಾಗಾಇದಲಾಯಿ, ಪಟಪಳ್ಳಿ, ದೇಗಲಮಡಿ, ಚಿಂಚೋಳಿ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ವಹಿಸುವುದಕ್ಕಾಗಿ ಡಂಗೂರ ಸಾರಿ ಜನರಿಗೆ ತಿಳಿಸಬೇಕೆಂದು ತಹಶೀಲ್ದಾರ್‌ ಅಂಜುಮ್‌ ತಬಸುಮ್‌ ಮತ್ತು ತಾಪಂ ಅಧಿಕಾರಿ ವೈ.ಎಲ್‌. ಹಂಪಣ್ಣ ಅವರಿಗೆ ಶಾಸಕರು ಸೂಚಿಸಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಗೌತಮ ಪಾಟೀಲ ಮಾತನಾಡಿ, ಮುಂಜಾನೆ ಮಣ್ಣಿನ ಒಡ್ಡು ಪರಿಶೀಲಿಸಿದಾಗ ಕೇವಲ ಸ್ವಲ್ಪಮಟ್ಟಿಗೆ ಬಿರುಕು ಕಾಣಿಸಿದೆ. ಮಧ್ಯಾಹ್ನ ಸಮಯದಲ್ಲಿ 30 ಅಡಿ ಕೆರೆಯಲ್ಲಿ ಬಿರುಕು ಉಂಟಾಗಿದೆ. ಕ್ಷಣ ಕ್ಷಣಕ್ಕೆ ಬಿರುಕು ಕಾಣಿಸುತ್ತಿರುವುದರಿಂದ ಕೆರೆಯಲ್ಲಿ ನೀರು ಖಾಲಿಗೊಳಿಸುವುದು ಸೂಕ್ತವಾಗಿದೆ ಎಂದು ತಿಳಿಸಿದರು.

ಸಣ್ಣ ನೀರಾವರಿ ಎಇಇ ಶಿವಶರಣಪ್ಪ ಕೇಶ್ವಾರ ಮಾತನಾಡಿ, ನಾಗಾಇದಲಾಯಿ ಸಣ್ಣ ನೀರಾವರಿಗೆ 10 ಕ್ಯೂಸೆಕ್‌ ಒಳಹರಿವು ಇದೆ. ಅಷ್ಟೇ ಪ್ರಮಾಣದಲ್ಲಿ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಕೆರೆ ನೀರಿನ ಸಂಗ್ರಹಣೆ ಒಟ್ಟು 44 ಎಂಸಿಎಫ್‌ಟಿ ಇದೆ. ಕೆರೆ ಸುರಕ್ಷತೆ ಕಾಪಾಡಿಕೊಳ್ಳುವುದಕ್ಕಾಗಿ ನೀರು ವೇಸ್ಟ್‌ವೇರ್‌ದಿಂದ ಎರಡು ಕಡೆಯಿಂದ ನೀರು ಬಿಡಲಾಗುತ್ತಿದೆ ಎಂದು ಶಾಸಕರ ಗಮನಕ್ಕೆ ತಂದರು.

ತಾಪಂ ಅಧಿಕಾರಿ ವೈ.ಎಲ್‌. ಹಂಪಣ್ಣ, ತಾಲೂಕು ಬಿಜೆಪಿ ಅಧ್ಯಕ್ಷ ಸಂತೋಷ ಗಡಂತಿ, ಕೆ.ಎಂ. ಬಾರಿ, ಶ್ರೀಮಂತ ಕಟ್ಟಿಮನಿ, ಉದಯಕುಮಾರ ಸಿಂಧೋಲ, ಭೀಮಶೆಟ್ಟಿ ಮುರುಡಾ, ಪಿಎಸೈ ಉದ್ದಂಡಪ್ಪ, ನಿಂಗಪ್ಪ, ಶೇರಖಾನ ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next