Advertisement

“ಕರ್ನಾಟಕ ಉದ್ಯೋಗ ನೀತಿ 2022-25”ಗೆ ನಾಡೋಜ ಡಾ. ಮಹೇಶ ಜೋಶಿ ಸ್ವಾಗತ

08:00 PM Jul 26, 2022 | Team Udayavani |

ಬೆಂಗಳೂರು: ಖಾಸಗಿ ವಲಯಗಳಲ್ಲೂ ಕನ್ನಡಿಗರಿಗೆ ಕೆಲಸದ ಅವಕಾಶ ಕಲ್ಪಿಸಲು ರಾಜ್ಯ ಸರಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಕನ್ನಡಿಗರ ಬಹುದಿನದ ಬೇಡಿಕೆಗೆ ಸರಕಾರ ಸ್ಪಂದಿಸಿದೆ. ಕನ್ನಡಿಗರಿಗೇ ಹೆಚ್ಚಿನ ಉದ್ಯೋಗ ದಕ್ಕಿಸಲು “ಕರ್ನಾಟಕ ಉದ್ಯೋಗ ನೀತಿ 2022-25”ಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿರುವ ಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತಿಸುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಹೇಳಿದ್ದಾರೆ.

Advertisement

ನಮ್ಮ ನಾಡಿನಲ್ಲಿ ನಮ್ಮವರೇ ನಿರುದ್ಯೋಗದ ಪಿಡುಗಿನಲ್ಲಿ ಸಿಲುಕಿಕೊಂಡಿದ್ದಾರೆ. ಸರಕಾರಿರಂಗ ಸೇರಿದಂತೆ ಖಾಸಗಿ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕನ್ನಡಿಗರಿಗೆ ಅವಕಾಶ ನೀಡಬೇಕು ಎನ್ನುವ ಕುರಿತು ಬಹುಸಮಯದಿಂದ ಕನ್ನಡ ಸಾಹಿತ್ಯ ಪರಿಷತ್ತು ಒತ್ತಾಯಿಸುತ್ತಲೇ ಬಂದಿತ್ತು. ಕಾಲಕಾಲಕ್ಕೆ ಕನ್ನಡಿಗರ ಅಭ್ಯುದಯಕ್ಕೆ ಧ್ವನಿಮಾಡುತ್ತಿದ್ದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಾಕಷ್ಟು ಚಿಂತನ-ಮಂಥನ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ. ಇದರೊಂದಿಗೆ ಸರಕಾರಕ್ಕೆ ಕನ್ನಡಿಗರಿಗೆ ಕೆಲಸದ ಅವಶ್ಯಕತೆ ಕುರಿತು ಮನದಟ್ಟು ಮಾಡುವ ಹಿನ್ನೆಲೆಯಲ್ಲಿಯೂ ಪರಿಷತ್ತು ತೊಡಗಿಸಿಕೊಂಡಿತ್ತು.

ಸದ್ಯ ರಾಜ್ಯ ಸರಕಾರ ಕಳೆದ ಸಂಪುಟ ಸಭೆಯಲ್ಲಿ ರಾಜ್ಯ ಉದ್ಯೋಗ ನೀತಿ 2022-25 ಕ್ಕೆ ಒಪ್ಪಿಗೆ ನೀಡಿರುವುದು ಕನ್ನಡಿಗರ ಪಾಲಿಗೆ ಆಶಾಕಿರಣ ಸಿಕ್ಕಂತಾಗಿದೆ. ಎಲ್ಲಾ ಉದ್ಯಮಗಳಲ್ಲಿ ಬಂಡವಾಳ ಹೂಡಿಕೆ ಮಾಡಿ ಉದ್ಯಮಗಳನ್ನು ವಿಸ್ತರಿಸುವ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಶೇ. 2.5 ರಿಂದ ಶೆ.3ರಷ್ಟು  ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ.  ಬಂಡವಾಳದ ಹೂಡಿಕೆಯನ್ನು ಆಧರಿಸಿ ಸಣ್ಣ, ಮಧ್ಯಮ ಮತ್ತು ಬೃಹತ್‌ ಕೈಗಾರಿಕೆಗಳು ಎಂದು ವರ್ಗೀಕರಿಸಲಾಗಿದೆ.  ಇವುಗಳಲ್ಲಿ ಶೇ. 3 ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಅಥವಾ ಸ್ಥಳೀಯರಿಗೆ ಕೆಲಸ ನೀಡಬೇಕು ಎನ್ನುವುದನ್ನು ಕಡ್ಡಾಯ ಮಾಡಲಾಗಿದೆ.

ಆ ಪೈಕಿ ಕನ್ನಡಿಗರಿಗೆ ಪ್ರಾಧಾನ್ಯ ನೀಡಬೇಕು ಎನ್ನುವ ಸರಕಾರದ ನಿರ್ಧಾರ ಅಭಿನಂದನೀಯ. ಇನ್ನೂ ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಸಲು ಕೈಗಾರಿಕೆಗಳಿಗೆ ಹೆಚ್ಚುವರಿ ಪ್ರೋತ್ಸಾಹಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜವಳಿ, ಆಟಿಕೆ ತಯಾರಿಕೆ, ಎಫ್‌ಎಂಸಿಜಿ, ಚರ್ಮ ಉತ್ಪನ್ನಗಳು, ಆಹಾರ ಸಂಸ್ಕರಣೆ ಹಾಗೂ ಆಭರಣ ಕ್ಷೇತ್ರಗಳಿಗೆ ಒತ್ತು ನೀಡುವ ನಿರ್ಧಾರ, ಉದ್ಯೋಗಕ್ಕಾಗಿ ನಿರಂತರ ಬೇಡಿಕೆ ಮತ್ತು ರಾಜ್ಯದಲ್ಲಿ ನುರಿತ ಕಾರ್ಮಿಕರ ಲಭ್ಯತೆ ಖಚಿತ ಪಡಿಸಿಕೊಂಡು ಮೊದಲು ನಮ್ಮ ಕನ್ನಡಿಗರಿಗೆ ಆದ್ಯತೆ ನೀಡುವ ಕ್ರಮ ಆಗಬೇಕಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ಹಿಂದೆ ಸಿ ಮತ್ತು ಡಿ ದರ್ಜೆಯ ನೌಕರರನ್ನು ಮಾತ್ರ ಕನ್ನಡಿಗರಿಗೆ ಆಯ್ಕೆ ಮಾಡಲಾಗುತ್ತಿತ್ತು. ಆದರೆ ಇನ್ನು ಮೂಂದೆ ಎ ಮತ್ತು ಬಿ ದರ್ಜೆಯ ಉದ್ಯೋಗ ಕನ್ನಡಿಗರಿಗೆ ನೀಡುವುದು ಕಡ್ಡಾಯ ಎನ್ನುವ ನಿಯಮವನ್ನು ಕಟ್ಟುನಿಟ್ಟಾಗಿ  ಪಾಲನೆ ಮಾಡಬೇಕು. ಇದನ್ನು ಸರಕಾರವೇ ಪಾಲನೆ ಮಾಡಲಿದೆ. ಅಲ್ಟ್ರಾ ಮೆಗಾ ಉದ್ಯಮದಲ್ಲಿ ಕನಿಷ್ಠ ಉದ್ಯೋಗ ಮಿತಿಯನ್ನು 400 ರಿಂದ 510ಕ್ಕೆ ಏರಿಸಿದ್ದು ಇಲ್ಲೂ ಕೂಡ ಪ್ರತಿ 50 ಕೋಟಿ ರೂ. ಹೂಡಿಕೆ ಮಾಡಿದರೆ 50 ಉದ್ಯೋಗ ಸೃಷ್ಟಿಯಾಗಬೇಕು. ಸೂಪರ್‌ ಮೆಗಾ ಉದ್ಯಮದಲ್ಲಿ ಕನಿಷ್ಠ ಉದ್ಯೋಗಮಿತಿಯನ್ನು 750 ರಿಂದ 1000ಕ್ಕೆ ಏರಿಸಲಾಗಿದೆ. ಈ ಹೆಚ್ಚುವರಿ ಉದ್ಯೋಗಾವಕಾಶವನ್ನು ಕನ್ನಡಿಗರಿಗೆ ನೀಡಬೇಕು ಎನ್ನುವ ದೃಷ್ಟಿಯಿಂದ ಯೋಜನೆ ರೂಪಿಸಿದ್ದು ಉತ್ತಮ ಬೆಳವಣಿಗೆಯಾಗಿದೆ.

Advertisement

ಸಂಪುಟದಲ್ಲಿ ಒಪ್ಪಿಗೆಯಾದ ಕರ್ನಾಟಕ ಉದ್ಯೋಗ ನೀತಿ 2022- 25 ಯು ಮುಂದಿನ ಮೂರು ವರ್ಷಗಳವರೆಗೆ ಚಾಲ್ತಿಯಲ್ಲಿ ಇರಲಿದೆ. ಅಂದರೆ 2025 ರವರೆಗೆ ಈ ನೀತಿಯಡಿಯಲ್ಲಿ ಇನ್ನು ಮುಂದೆ ಸೃಷ್ಟಿಯಾಗಿರುವ ಉದ್ಯೊಗದಲ್ಲಿ ಕನ್ನಡಿಗರಿಗೆ ಕನಿಷ್ಠ ಶೇ. 3ರಷ್ಟು ಅವಕಾಶ ಸಿಗಲಿದೆ. ಇದರಿಂದ ನಮ್ಮ ಕನ್ನಡಿಗರಲ್ಲಿ ಇರುವ ನಿರುದ್ಯೋಗದ ಸಮಸ್ಯೆಗೆ ತಕ್ಕಮಟ್ಟಿಗೆ ಪರಿಹಾರ ಸಿಕ್ಕಂತಾಗುವುದು. ಆದರೆ ಈ ನೀತಿಯನ್ನು ಸರಕಾರ ಕಟ್ಟುನಿಟ್ಟಾಗಿ ಪಾಲಿಸುವ ಕಾರ್ಯವಾಗಬೇಕಿದೆ. ಇನ್ನೂ ಮುಂದಿನ ದಿನಗಳಲ್ಲಿ ಬಂಡವಾಳ ಹಾಕುವ ಉದ್ಯಮಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ನೀಡುವುದಕ್ಕೆ ಮನವೊಲಿಸಿ ನಮ್ಮಲ್ಲಿಯ ನಮಗೆ ಪ್ರಾತಿನಿಧಿತ್ವ ನೀಡುವಂತೆ ಮಾಡುವಲ್ಲಿ ಸರಕಾರದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತು ಸಹ ಕೈ ಜೊಡಿಸಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿಯವರ ಹೆಸರು… ಕಸಾಪ ಸ್ವಾಗತ:

ಮೂಸೂರು ವಿಮಾನ ನಿಲ್ದಾಣಕ್ಕೆ ಕನ್ನಡ ನಾಡಿನ ಜನಾನುರಾಗಿ ದೊರೆ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ ಅವರ ಹೆಸರಿಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಕನ್ನಡಿಗರ ಅಸ್ಮಿತೆಯ ಪ್ರತಿಕವಾಗಿರುವ ಕನ್ನಡ ಸಾಹಿತ್ಯ ಪರಿಷತ್ತುನ್ನು ಸ್ಥಾಪಿಸುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಹಾಗೂ ಕನ್ನಡ ನಾಡಿಗೆ ಅಪಾರ ಕೊಡುಗೆ ನೀಡಿದ ಮಹಾ ಚೇತನ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು. ಅಂತಹ ಮಹಾನುಭಾವರ ಹೆಸರು ಮೈಸೂರು ವಿಮಾನ ನಿಲ್ದಾಣಕ್ಕೆ ಶೋಭೆ ತರುವ ಸಂಗತಿಯಾಗಿದೆ. ಸರಿ ಸುಮಾರು 9.93 ಕೋಟಿ ರೂ. ವೆಚ್ಚದಲ್ಲಿ 240 ಎಕರೆ ಪ್ರದೇಶದಲ್ಲಿ ಮೈಸೂರು ವಿಮಾನ ನಿಲ್ದಾಣವನ್ನು ಉನ್ನತಿಕರಣ ಮಾಡಲಾಗುತ್ತಿದೆ. ಈ ವಿಮಾನ ನಿಲ್ದಾಣ ನಮ್ಮ ರಾಜ್ಯದ ಪ್ರಮುಖ ಪ್ರವಾಸಿ ಹಾಗೂ ಸಾಂಸ್ಕೃತಿಯ ಕೇಂದ್ರವಾದ ಮೈಸೂರಿಗೆ ಕಳಸ ಪ್ರಾಯವಾಗಲಿದೆ. ರಾಜ್ಯ ಸರಕಾರದ ಈ ನಡೆ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನು ಮೈಸೂರು ವಿಮಾನ ನಿಲ್ದಾಣಕ್ಕೆ ಇಟ್ಟಿರುವುದಕ್ಕೆ ಅಭಿಮಾನ ಪೂರ್ವಕವಾಗಿ ಸ್ವಾಗತಿಸುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತನ ಅಧ್ಯಕ್ಷ ನಾಡೋಜ್‌ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next