ಬೆಂಗಳೂರು: ಸಾಹಿತ್ಯದ ನಡೆ-ನುಡಿ ವಿಚಾರದಲ್ಲಿ ಕವಿ ಸುಮತೀಂದ್ರ ನಾಡಿಗರು ನೇರ ವ್ಯಕ್ತಿಯಾಗಿದ್ದರು ಎಂದು ಸಾಹಿತಿ ಚಂದ್ರಶೇಖರ ಪಾಟೀಲ್ ಹೇಳಿದ್ದಾರೆ.
ಡಾ.ಸುಮತೀಂದ್ರ ನಾಡಿಗ ಸ್ನೇಹ ಬಳಗವು ಸೋಮವಾರ ಸುರಾನಾ ಕಾಲೇಜಿನಲ್ಲಿ ಆಯೋಜಿಸಿದ್ದ “ನಾಡಿಗ ನೆನಪು’ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ನಡೆ-ನುಡಿ ವಿಚಾರ ಬಂದಾಗ ಕೆಲವು ಸಾಹಿತಿಗಳು ವೇದಿಕೆ ಮೇಲೆ ಒಂದು ವೇದಿಕೆ ಕೆಳಗಿಳಿದ ಬಳಿಕ ಮತ್ತೂಂದು ಹೇಳುತ್ತಿದ್ದರು. ಆದರೆ ನಾಡಿಗರು ನೇರವಾಗಿ ಮಾತನಾಡುತ್ತಿದ್ದರು. ಇನ್ನೊಬ್ಬರ ಕಾವ್ಯದ ಬಗ್ಗೆ ಅನಿಸಿದ್ದನ್ನು ನೇರವಾಗಿ ಹೇಳಿಬಿಡುತ್ತಿದ್ದರು ಎಂದು ತಿಳಿಸಿದರು.
ನಾಡಿಗರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದ ಅವರು, ಎಷ್ಟೇ ಜಗಳವಾಡಿದರೂ ಸುಮತೀಂದ್ರರು ಹಾಗೂ ನನ್ನ ನಡುವಿನ ಸ್ನೇಹ ಗಟ್ಟಿಯಾಗಿತ್ತು. ಕೆಲವು ಸೈದ್ಧಾಂತಿಕ ವಿಚಾರಗಳಲ್ಲಿ ನಾನು ಮತ್ತು ಅವರು ಬೇರೆ ಬೇರೆಯಾಗಿದ್ದೆವು. ಆದರೆ ಸಾಹಿತ್ಯದ ವಿಚಾರ ಬಂದಾಗ ಒಂದೇ ಆಗುತ್ತಿದ್ದೇವು. ಒಬ್ಬರನ್ನು ಮತ್ತೂಬ್ಬರು ಬಿಟ್ಟುಕೊಡುತ್ತಿರಲ್ಲಿಲ್ಲ ಎಂದು ಸ್ಮರಿಸಿದರು.
ವಿಮರ್ಶಕ ಸಿ.ಎನ್.ರಾಮಚಂದ್ರನ್ ಮಾತನಾಡಿ, ಈ ಹಿಂದೆ ಎಸ್.ಎಲ್.ಭೈರಪ್ಪನವರ ಆವರಣ ಕಾದಂಬರಿಯನ್ನು ಟೀಕಿಸಿ ಬರೆದಾಗ ನಾಡಿಗರು ಕೋಪಗೊಂಡು ಪ್ರತಿಕ್ರಿಯಿಸಿದ್ದರು. ಅವರನ್ನು ಈ ರೀತಿಯಲ್ಲಿ ಹಿಂದೆಂದೂ ನೋಡಿರದಿದ್ದರಿಂದ ನಾನು ಗಾಬರಿಗೊಳಗಾಗಿದ್ದೆ. ಅವರಲ್ಲಿ ಹಿಂದುತ್ವ ಭಾವನೆ ಇತ್ತೋ ಅಥವಾ ಭೈರಪ್ಪ ಅವರ ಬಗ್ಗೆ ಅಭಿಮಾನ ಇತ್ತೋ ಎಂಬುದೇ ತಿಳಿಯಲಿಲ್ಲ ಎಂದು ಹೇಳಿದರು.
ಕತೆಗಾರ ಎಸ್.ದಿವಾಕರ್ ಮಾತನಾಡಿ, ಗುಂಪುಗಳನ್ನು ಮೀರಿದ ಮೀರಿದ ಅಂತಃಕರಣ ನಾಡಿಗರಲ್ಲಿತ್ತು¤. ಕನ್ನಡ ಸಾಹಿತ್ಯದಲ್ಲಿ ಅನೇಕ ಶಕ್ತಿಕೇಂದ್ರಗಳಿವೆ. ಯಾವ ಕೇಂದ್ರಕ್ಕೂ ಸೇರದ ನಾಡಿಗರು ಪ್ರತ್ಯೇಕವಾಗಿ ಉಳಿದರು. ಆದರೆ ಅವರಿಗೆ ಸಿಗಬೇಕಾದ ಮಾನ್ಯತೆಗಳು ಸಿಗಲ್ಲಿಲ್ಲ ಎಂದರು.
ಸಾಹಿತಿ ಹಂ.ಪ.ನಾಗರಾಜಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್.ವೀರಯ್ಯ, ಮಾಜಿ ಸಂಸದ ಜನಾರ್ಧನ ಸ್ವಾಮಿ, ಬಳಗದ ಸಂಚಾಲಕ ಮಹಾಬಲಮೂರ್ತಿ ಉಪಸ್ಥಿತರಿದ್ದರು.