Advertisement

ನಡಾಲ್‌-ಸಿಸಿಪಸ್‌ ಸೆಮಿ ಹೋರಾಟ

12:50 AM Jan 23, 2019 | Team Udayavani |

ಮೆಲ್ಬರ್ನ್: ವರ್ಷಾರಂಭದ ಟೆನಿಸ್‌ ಗ್ರ್ಯಾನ್‌ ಸ್ಲಾಮ್‌ ಕೂಟವಾದ “ಆಸ್ಟ್ರೇಲಿಯನ್‌ ಓಪನ್‌’ನಲ್ಲಿ ಸ್ಪೇನ್‌ನ ತಾರೆ ರಫೆಲ್‌ ನಡಾಲ್‌, ಗ್ರೀಕ್‌ನ ಸ್ಟೆಫ‌ನಸ್‌ ಸಿಸಿಪಸ್‌ ಮತ್ತು ಪೆಟ್ರಾ ಕ್ವಿಟೋವಾ ಗೆಲುವು ದಾಖಲಿಸಿ ಸೆಮಿಫೈನಲ್‌ ಹಂತಕ್ಕೆ ಪ್ರವೇಶಿಸಿದ್ದಾರೆ. 

Advertisement

ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ರಫೆಲ್‌ ನಡಾಲ್‌ ಅವರು ಫ್ರಾನ್ಸೆಸ್‌ ಟಿಯಾಫೋ ಅವರನ್ನು 6-3, 6-4, 6-2 ನೇರ ಸೆಟ್‌ಗಳಿಂದ ಸೋಲಿಸಿ ಅಂತಿಮ ನಾಲ್ಕರ ಸುತ್ತಿಗೇರಿದ್ದಾರೆ. ಈ ಹಿಂದಿನ ಪಂದ್ಯಗಳಲ್ಲಿ  ಕೆವಿನ್‌ ಆ್ಯಂಡರ್ಸನ್‌, ಗ್ರಿಗರ್‌ ಡಿಮಿಟ್ರೋವ್‌ ಅವರಿಗೆ ಆಘಾತವಿಕ್ಕಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದ ಶ್ರೇಯಾಂಕ ರಹಿತ ಆಟಗಾರ ಟಿಯಾಫೋ ಅವರು ನಡಾಲ್‌ ಅವರ ಆಟಕ್ಕೆ ಬೆಚ್ಚಿಬಿದ್ದು ಸುಲಭವಾಗಿ ಮುಗ್ಗರಿಸಿದರು. 

17 ಬಾರಿಯ ಗ್ರ್ಯಾನ್‌ ಸ್ಲಾಮ್‌ ಚಾಂಪಿಯನ್‌ ನಡಾಲ್‌ ಯಾವುದೇ ಹಂತದಲ್ಲೂ ಟಿಯಾಫೋ ಅವರಿಗೆ ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ. ನಡಾಲ್‌ ಸೆಮಿಫೈನಲ್‌ ಹೋರಾಟದಲ್ಲಿ ಮತ್ತೋರ್ವ ಉದಯೋನ್ಮುಖ ಆಟಗಾರ, ಗ್ರೀಕ್‌ನ ಸ್ಟೆಫ‌ನಸ್‌ ಸಿಸಿಪಸ್‌ ಅವರನ್ನು ಎದುರಿಸಲಿದ್ದಾರೆ. 

ನಡಾಲ್‌ ಅವರಿಗೆ ಪ್ರತಿಸ್ಪರ್ಧಿಯಿಂದ ದೊಡ್ಡ ಮಟ್ಟದ ಪೈಪೋಟಿಯೇನೂ ಬರಲಿಲ್ಲ. ಮೊದಲ ಸೆಟ್‌ ಅನ್ನು ಸುಲಭವಾಗಿ ಜಯಸಿದ ನಡಾಲ್‌ ಟಿಯಾಫೋ ಅವರ ದೌರ್ಬಲ್ಯ ಅರಿತುಕೊಳ್ಳುವಲ್ಲಿ ಯಶಸ್ವಿಗಾಗಿ ಮುಂದಿನೆರಡು ಸೆಟ್‌ಗಳಲ್ಲಿಯೂ ನಿರಾಯಾಸವಾಗಿ ಜಯ ಒಲಿಸಿಕೊಂಡರು.

ಕ್ವಿಟೋವಾ ಆಟಕ್ಕೆ ಮಂಕಾದ ಬಾರ್ಟಿ
ಶರಪೋವಾ ಅವರನ್ನು ಸೋಲಿಸಿ ಮೆರೆದಿದ್ದ ತವರಿನ ಆ್ಯಶ್ಲಿ ಬಾರ್ಟಿಯ ಆಟಕ್ಕೆ ತೆರೆ ಬಿದ್ದಿದೆ. ಬಾರ್ಟಿ  ಜೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವಾ ವಿರುದ್ಧ 1-6, 4-6 ನೇರ ಸೆಟ್‌ಗಳಿಂದ ಸೋಲನುಭವಿಸಿ ನಿರ್ಗಮಿಸಿದ್ದಾರೆ. 
2 ಬಾರಿಯ ವಿಂಬಲ್ಡನ್‌ ಚಾಂಪಿಯನ್‌ ಕ್ವಿಟೋವಾ  ಸೆಮಿಫೈನಲ್‌ನಲ್ಲಿ  ಡೇನಿಯಲ್‌ ಕಾಲಿನ್ಸ್‌ ಅವರೊಂದಿಗೆ ಸೆಣಸಾಟ ನಡೆಸಲಿದ್ದಾರೆ. 

Advertisement

ಈ ಕೂಟದಲ್ಲಿ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ಕಾಲಿನ್ಸ್‌ ರಶ್ಯದ ಅನಾಸ್ತಾಸಿಯಾ ಪಾವುÉಚೆಂಕೋವಾ ಅವರನ್ನು 2-6, 7-5, 6-1 ಸೆಟ್‌ಗಳಿಂದ ಸೋಲಿಸಿದರು. ಮೊದಲ ಸೆಟ್‌ನಲ್ಲಿ ಹೀನಾಯವಾಗಿ ಸೋತ ಕಾಲಿನ್ಸ್‌ ಅನಂತರದ ಎರಡು ಸೆಟ್‌ಗಳಲ್ಲೂ ಅತ್ಯುತ್ತಮ ಆಟವಾಡಿ ಜಯ ದಾಖಲಿಸಿದರು. 

ಮುಂದುವರಿದ ಸಿಸಿಪಸ್‌ ಆಟ
ಇನ್ನೊಂದು ಪಂದ್ಯದಲ್ಲಿ ಗ್ರೀಕ್‌ನ ಸ್ಟೆಫ‌ನಸ್‌ ಸಿಸಿಪಸ್‌ ಅವರ ಅಜೇಯ ಓಟ ಮುಂದುವರಿದಿದೆ. ಸ್ಪೇನ್‌ನ ರಾಬರ್ಟೊ ಬಟಿಸ್ಟ ಆಗುಟ್‌ ಅವರನ್ನು 7-5, 4-6, 6-4, 7-6 (7-2) ಕಠಿನ ಹೋರಾಟದಿಂದ ಸೋಲಿಸಿ ಚೊಚ್ಚಲ ಬಾರಿ ಗ್ರ್ಯಾನ್‌ಸ್ಲಾಮ್‌ನ ಸೆಮಿಫೈನಲ್‌ಗೆ ಕಾಲಿಟ್ಟಿದ್ದಾರೆ. ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಫೆಡರರ್‌ ಅವರನ್ನು ಸೋಲಿಸಿದ ಬಳಿಕ ಮತ್ತಷ್ಟು ಉತ್ಸಾಹದಿಂದ ಆಡಿದ ಸಿಸಿಪಸ್‌ ಅದೇ ಲಯವನ್ನು ಮುಂದುವರಿಸಿ ಜಯ ಒಲಿಸಿಕೊಂಡಿದ್ದಾರೆ. ಮೊದಲ ಸೆಟ್‌ ಗೆದ್ದ ಸಿಸಿಪಸ್‌ಗೆ ದ್ವಿತೀಯ ಸೆಟ್‌ ಒಲಿಯಲಿಲ್ಲ. ಆದರೆ 3ನೇ ಸೆಟ್‌ ಗೆದ್ದ ಸಿಸಿಪಸ್‌ ಮೇಲುಗೈ ಸಾಧಿಸಿದರು. ನಿರ್ಣಾಯಕ ಸೆಟ್‌ನಲ್ಲಿ ಇಬ್ಬರೂ ಉಗ್ರ ಕಾದಾಟ ನಡೆಸಿದ್ದರಿಂದ ಸೆಟ್‌ ಟೈಬ್ರೇಕರ್‌ ತಲುಪಿತು. ಟೈಬ್ರೇಕರ್‌ನಲ್ಲಿ ಮೇಲುಗೈ ಸಾಧಿಸಿದ ಸಿಸಿಪಸ್‌ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next