Advertisement

ನಡಾಲ್‌ ಜಯಭೇರಿ

03:45 AM Jan 24, 2017 | Team Udayavani |

ಮೆಲ್ಬರ್ನ್: ನಾಲ್ಕು ಸೆಟ್‌ಗಳ ಕಠಿನ ಹೋರಾಟದಲ್ಲಿ ಫ್ರಾನ್ಸ್‌ನ ಗಾಯೆಲ್‌ ಮೋನ್‌ಫಿಲ್ಸ್‌ ಅವರನ್ನು ಉರುಳಿಸಿದ ಸ್ಪೇನ್‌ನ ರಫೆಲ್‌ ನಡಾಲ್‌ ಅವರು ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಕೂಟದ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ಫೈನಲ್‌ ಹಂತಕ್ಕೇರಿದ್ದಾರೆ. 

Advertisement

2015ರ ಬಳಿಕ ಮೊದಲ ಬಾರಿ ಗ್ರ್ಯಾನ್‌ ಸ್ಲಾಮ್‌ ಕೂಟದ ಅಂತಿಮ ಎಂಟರ ಸುತ್ತಿಗೇರಿದ ನಡಾಲ್‌ ಅವರು ಅಲ್ಲಿ ಮೂರನೇ ಶ್ರೇಯಾಂಕದ ಕೆನಡದ ಮಿಲೋಸ್‌ ರೋನಿಕ್‌ ಅವ ರನ್ನು ಎದುರಿಸಲಿದ್ದಾರೆ. ರೋನಿಕ್‌ ಇನ್ನೊಂದು ಪಂದ್ಯದಲ್ಲಿ ಸ್ಪೇನ್‌ನ ರಾಬರ್ಟೊ ಬಾಟಿಸ್ಟ ಆಗುಟ್‌ ಅವರನ್ನು 7-6 (8-6), 3-6, 6-4, 6-1 ಸೆಟ್‌ಗಳಿಂದ ಸೋಲಿಸಿದ್ದರು.

ಸುಮಾರು ಮೂರು ತಾಸುಗಳ ಹೋರಾಟದಲ್ಲಿ ಮೋನ್‌ಫಿಲ್ಸ್‌ ಅವ ರನ್ನು 6-3, 6-3, 4-6, 6-4 ಸೆಟ್‌ಗಳಿಂದ ಕೆಡಹಿದ ನಡಾಲ್‌ ಮೆಲ್ಬರ್ನ್ನಲ್ಲಿ 9ನೇ ಬಾರಿ ಕ್ವಾರ್ಟರ್‌ಫೈನಲಿಗೇರಿದ ಸಾಧನೆ ಮಾಡಿದರು. 2009ರ ಚಾಂಪಿಯನ್‌ ನಡಾಲ್‌ 2015ರ ಫ್ರೆಂಚ್‌ ಓಪನ್‌ ಬಳಿಕ ಗ್ರ್ಯಾನ್‌ ಸ್ಲಾಮ್‌ ಕೂಟದ ಕ್ವಾರ್ಟರ್‌ಫೈನಲಿಗೇರಿರುವುದು ಇದೇ ಮೊದಲು.

ಇನ್ನೊಂದು ಪಂದ್ಯದಲ್ಲಿ ರೋನಿಕ್‌ ನಾಲ್ಕು ಸೆಟ್‌ಗಳ ಕಠಿನ ಕಾದಾಟದಲ್ಲಿ ಆಗುಟ್‌ ಅವರನ್ನು ಕೆಡಹಿ  ಅಂತಿಮ ಎಂಟರ ಸುತ್ತಿಗೇರಿದರು. ಆ್ಯಂಡಿ ಮರ್ರೆ ಮತ್ತು ಜೊಕೋವಿಕ್‌ ಈಗಾಗಲೇ ಪತನಗೊಂಡ ಕಾರಣ ಪುರುಷರ ವಿಭಾಗದಲ್ಲಿ ಕಣದಲ್ಲಿ ಉಳಿದ ಗರಿಷ್ಠ ಶ್ರೇಯಾಂಕದ ಆಟಗಾರ ರೋನಿಕ್‌ ಆಗಿದ್ದಾರೆ. 26ರ ಹರೆಯದ ರೋನಿಕ್‌ ಸುಮಾರು 3 ತಾಸುಗಳ ಹೋರಾಟದಲ್ಲಿ 33 ಏಸ್‌ ಮತ್ತು 75 ವಿಜಯಿ ಹೊಡೆತಗಳನ್ನು ನೀಡಿದ್ದರು.

ಗೊಫಿನ್‌  ಕ್ವಾರ್ಟರ್‌ಫೈನಲಿಗೆ 
ಆಸ್ಟ್ರಿಯದ ಡೊಮಿನಿಕ್‌ ಥೀಮ್‌ ಅವರನ್ನು ನಾಲ್ಕು ಸೆಟ್‌ಗಳ ಹೋರಾಟ ದಲ್ಲಿ 5-7, 7-6 (7-4), 6-2, 6-2 ಸೋಲಿಸಿದ ಬೆಲ್ಜಿಯಂನ ಡೇವಿಡ್‌ ಗೊಫಿನ್‌ ಕ್ವಾರ್ಟರ್‌ಫೈನಲಿಗೇರಿದರು. ಇಲ್ಲಿ ಕ್ವಾರ್ಟರ್‌ಫೈನಲಿಗೇರಿದ ಬೆಲ್ಜಿಯಂನ ಮೊದಲ ಆಟಗಾರ ಎಂದೆನಿಸಿಕೊಂಡರು. ಮುಂದಿನ ಸುತ್ತಿಗೇರಲು ಗೊಫಿನ್‌ ಅವರು ಬಲ್ಗೇರಿಯಾದ ಗ್ರಿಗರ್‌ ದಿಮಿತ್ರೋವ್‌ ಅವರ ಸವಾಲನ್ನು ಎದುರಿಸಬೇಕಾಗಿದೆ. ದಿಮಿತ್ರೋವ್‌ ಇನ್ನೊಂದು ಪಂದ್ಯದಲ್ಲಿ ಉಜ್ಬೆಕಿಸ್ಥಾನದ ಇಸ್ತೋಮಿನ್‌ ಅವರನ್ನು 2-6, 7-6 (7-2), 6-2, 6-1 ಸೆಟ್‌ಗಳಿಂದ ಕೆಡಹಿದರು. ಈ ಮೂಲಕ ವೈಲ್ಡ್‌ಕಾರ್ಡ್‌ ಪ್ರವೇಶಿಗ ಉಜ್ಬೆಕ್‌ ಆಟಗಾರನ ಆಟ ಅಂತ್ಯ ಗೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next