Advertisement

ನಾಡದೇವಿ ದರ್ಶನಕ್ಕೆ ಭಕ್ತರ ಸಾಗರ

12:19 PM Jul 28, 2018 | Team Udayavani |

ಮೈಸೂರು: ಆಷಾಢ ಮಾಸದ ಎರಡನೇ ಶುಕ್ರವಾರದ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಅಧಿದೇವತೆ ಶ್ರೀ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನೇರವೇರಿಸಲಾಯಿತು. ಸಹಸ್ರಾರು ಭಕ್ತರು ಹಾಗೂ ಗಣ್ಯರು ನಾಡದೇವಿ ದರ್ಶನ ಪಡೆದರು.  

Advertisement

ಎರಡನೇ ಆಶಾಢ ಶುಕ್ರವಾರದಂದು ಮುಂಜಾನೆ 4 ಗಂಟೆಯಿಂದಲೇ ಬೆಟ್ಟದಲ್ಲಿ ಪೂಜಾ ಕೈಂಕರ್ಯ ಆರಂಭಗೊಂಡು ದೇವರಿಗೆ ಅಭಿಷೇಕ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸಲ್ಲಿಸಿದ ಬಳಿಕ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ ನೀಡಲಾಯಿತು. ಬಳಿಕ ಬೆಳಗ್ಗೆ 11 ಗಂಟೆಗೆ ಹೊತ್ತಿಗೆ ದೇವರಿಗೆ ಮತ್ತೂಮ್ಮೆ ಪೂಜೆ, ಸಂಜೆ 6ಕ್ಕೆ ಮತ್ತೂಮ್ಮೆ ಅಭಿಷೇಕ, ಮಹಾಮಂಗಳಾರತಿ ನೆರವೇರಿಸಲಾಯಿತು. 

ತಡರಾತ್ರಿ ಆರಂಭಗೊಂಡ ಚಂದ್ರಗ್ರಹಣ ಕಾಲದಲ್ಲೂ ಚಾಮುಂಡೇಶ್ವರಿಗೆ ವಿವಿಧ ಪುಜಾ ಕೈಂಕರ್ಯಗಳನ್ನು ಸಲ್ಲಿಸಲಾಯಿತು. ಪ್ರಮುಖವಾಗಿ ಜಪ, ಪಾರಾಯಣ ಹಾಗೂ ಚಂದ್ರಗ್ರಹಣದ ಬಳಿಕ ಮೋಕ್ಷ ಪೂಜೆಗಳನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ.ಶಶಿಶೇಖರ್‌ ದೀಕ್ಷಿತ್‌ ಸಮ್ಮುಖದಲ್ಲಿ ನೆರವೇರಿಸಲಾಯಿತು. 

ಕಾಣದ ಜನದಟ್ಟಣೆ: ಪ್ರತಿ ಆಷಾಢ ಶುಕ್ರವಾರಗಳಲ್ಲಿ ಮೈಸೂರು ಸೇರಿದಂತೆ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಚಾಮುಂಡಿಬೆಟ್ಟಕ್ಕೆ ಆಗಮಿಸುತ್ತಿದ್ದರೂ 2ನೇ ಆಷಾಢ ಶುಕ್ರವಾರದ ಜತೆಗೆ ಚಂದ್ರಗ್ರಹಣವಿರುವ ಪರಿಣಾಮ ಬೆಟ್ಟದಲ್ಲಿ ಭಕ್ತರ ಸಂಖ್ಯೆಯಲ್ಲಿ ಕಡಿಮೆಯಾಗಿತ್ತು. 

ವಿಶೇಷ ಅಲಂಕಾರ: ಆಷಾಢ ಮಾಸದ ಪ್ರತಿ ಶುಕ್ರವಾರಗಳಲ್ಲೂ ಚಾಮುಂಡೇಶ್ವರಿಗೆ ವಿವಿಧ ಅಲಂಕಾರ ಮಾಡಲಿದ್ದು, ಈ ಬಾರಿ ದೇವಿಗೆ ಶೇಷ ಲಕ್ಷ್ಮಿ ಅಲಂಕಾರ ಮಾಡಲಾಗಿತ್ತು. ಕೆಂಪುಬಣ್ಣದ ಸೀರೆಯುಟ್ಟು, ವಿವಿಧ ಹೂವುಗಳಿಂದ ಸಿಂಗರಿಸಿದ್ದ ಚಾಮುಂಡೇಶ್ವರಿ ದೇವಿ ದರ್ಶನ ಪಡೆದು ಭಕ್ತರು ಪುನೀತರಾದರು. 

Advertisement

ಗಣ್ಯರಿಂದ ದರ್ಶನ: 2ನೇ ಆಷಾಢ ಶುಕ್ರವಾರದಂದು ಚಾಮುಂಡಿಬೆಟ್ಟಕ್ಕೆ ಬೇಟಿ ನೀಡಿದ್ದ ಅಸಂಖ್ಯಾತ ಭಕ್ತರೊಂದಿಗೆ ಹಲವು ಗಣ್ಯರು ದೇವಿಯ ದರ್ಶನ ಪಡೆದರು. ಸಚಿವರಾದ ಎಚ್‌.ಡಿ.ರೇವಣ್ಣ, ಸಿ.ಎಸ್‌.ಪುಟ್ಟರಾಜು, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಎಲ್‌.ನಾಗೇಂದ್ರ ಸೇರಿದಂತೆ ಮತ್ತಿತರರು ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು. 

ಭಕ್ತರಿಗೆ ಅನ್ನಸಂತರ್ಪಣೆ: ಆಷಾಢ ಶುಕ್ರವಾರದ ಅಂಗವಾಗಿ ದೇವಿ ದರ್ಶನಕ್ಕೆ ಆಗಮಿಸಿದ್ದ ಭಕ್ತರಿಗೆ ಎಂದಿನಂತೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಕಳೆದ 9 ವರ್ಷದಿಂದ ಪ್ರತಿ ವರ್ಷದಂದು 2ನೇ ಆಷಾಢ ಶುಕ್ರವಾರದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿಸುವ ನಂಜನಗೂಡಿನ ಚಾಮುಂಡಿ ಟೌನ್‌ಷಿಪ್‌ ಹಾಗೂ ಕೊಯಮತ್ತೂರಿನ ದುರ್ಗಾ ಏಜೆನ್ಸಿಯ ಶಾಂತಿ ಮತ್ತು ತಂಬು ದಂಪತಿಯಿಂದ ಅನ್ನಸಂತರ್ಪಣೆ ಮಾಡಲಾಗಿತ್ತು.

ಬೆಳಗ್ಗೆ 7 ಗಂಟೆಯಿಂದ ಆರಂಭವಾದ ಅನ್ನಸಂತರ್ಪಣೆಯಲ್ಲಿ ಭಕ್ತರಿಗಾಗಿ ಬಿಸಿಬೇಳೆ ಬಾತ್‌, ಪೊಂಗಲ್‌, ವೆಜಿಟೇಬಲ್‌ ಬಾತ್‌, ಕೇಸರಿಬಾತ್‌ ಸೇರಿದಂತೆ ಅನ್ನ ಸಾಂಬಾರ್‌, ಮೊಸರನ್ನ ನೀಡಲಾಯಿತು. 200 ಬಾಣಸಿಗರಿಂದ ಒಟ್ಟು ಅಂದಾಜು 60 ಸಾವಿರ ಮಂದಿಗೆ ಅನ್ನಸಂತರ್ಪಣೆ ಮಾಡಲಾಗಿತ್ತು. 

ಸಮಯ ಬದಲಾವಣೆ: ಪ್ರತಿ ಆಷಾಢ ಶುಕ್ರವಾರಗಳಲ್ಲಿ ಭಕ್ತರಿಗೆ ಮುಂಜಾನೆ 5.30ರಿಂದ ರಾತ್ರಿ 11ಗಂಟೆವರೆಗೂ ದೇವರ ದರ್ಶನಕ್ಕೆ ಅವಕಾಶವಿರುತ್ತದೆ. ಆದರೆ 2ನೇ ಆಷಾಢ ಶುಕ್ರವಾರದಂದು ಚಂದ್ರಗ್ರಹಣ ಇರುವುದರಿಂದ ಚಾಮುಂಡಿಬೆಟ್ಟದಲ್ಲಿ ದೇವರ ದರ್ಶನ ವ್ಯವಸ್ಥೆ ಹಾಗೂ ಪೂಜಾ ಕೈಂಕರ್ಯಗಳಲ್ಲಿ ಸ್ವಲ್ಪಮಟ್ಟಿಗೆ ಬದಲಾವಣೆ ಮಾಡಲಾಗಿತ್ತು.

ಚಂದ್ರಗ್ರಹಣದ ಹಿನ್ನೆಲೆಯಲ್ಲಿ ರಾತ್ರಿ 9ಕ್ಕೆ ದೇವಾಲಯದ ಬಾಗಿಲು ಮುಚ್ಚಲಿದ್ದು, ಜತೆಗೆ ಶನಿವಾರ ಬೆಳಗ್ಗೆಯೂ ಒಂದು ಗಂಟೆ ತಡವಾಗಿ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ. ಇನ್ನೂ ರಾತ್ರಿ 9ಕ್ಕೆ ದೇವಸ್ಥಾನದ ಬಾಗಿಲು ಬಂದ್‌ ಮಾಡಿದ್ದರಿಂದ ಹೆಲಿಪ್ಯಾಡ್‌ನಿಂದ ಬೆಟ್ಟಕ್ಕೆ ಭಕ್ತರನ್ನು ಕರೆದುಕೊಂಡು ಹೋಗುವ ವ್ಯವಸ್ಥೆ ಸಂಜೆ 6 ಗಂಟೆಗೆ ಅಂತ್ಯಗೊಳಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next