ಬೆಂಗಳೂರು:ಇಂದಿನ ಬೆಂಗಳೂರಿನ ಪೇಟೆಗಳ ನಿರ್ಮಾತೃ ಕೆಂಪೇಗೌಡರು. 70 ದಶಕಗಳ ಹಿಂದೆ ಬೆಂಗಳೂರು ತುಂಬಾ ಸುಂದರವಾಗಿತ್ತು. ಇಲ್ಲಿನ ವಾತಾವರಣ ಎಲ್ಲರಿಗೂ ಇಷ್ಟವಾಗುವಂತಿತ್ತು. ಗಾರ್ಡನ್ ಸಿಟಿ ಎಂಬ ಹೆಗ್ಗಳಿಕೆಗೂ ನಗರ ಪಾತ್ರವಾಗಿತ್ತು. 4 ದಿಕ್ಕುಗಳಲ್ಲಿಯೂ 4 ಗೋಪುರಗಳನ್ನು ಕೆಂಪೇಗೌಡರು ನಿರ್ಮಿಸಿದ್ದರು. ಆದರೆ ಬೆಂಗಳೂರು ನಗರ ಇಂದು ಗೋಪುರ ಬಿಟ್ಟು ಬೆಳೆದಿದೆ. ಕೆರೆಗಳನ್ನು ನುಂಗುವ ಕೆಲಸವಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ರಾಜ್ಯ ಸರ್ಕಾರದ ವತಿಯಿಂದ ಆಯೋಜಿಸಿದ್ದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಂಪೇಗೌಡರು ಜಾತ್ಯತೀತ ನಾಯಕರಾಗಿದ್ದರು. ಕೆಂಪೇಗೌಡರ ಹೆಸರು ಅಜರಾಮರವಾಗಿರಬೇಕು. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯನಿರ್ವಹಿಸಿದೆ ಎಂದು ಹೇಳಿದರು.
ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡಲು ಕೇಂದ್ರಕ್ಕೆ ಶಿಫಾರಸು ಮಾಡಿದ್ದೇವು. ಬಳಿಕ ದೇವನಹಳ್ಳಿ ಏರ್ ಪೋರ್ಟ್ ಗೆ ಕೆಐಎಎಲ್ ಹೆಸರು ಬಂತು. ಮೆಟ್ರೋ ನಿಲ್ದಾಣಕ್ಕೂ ಕೆಂಪೇಗೌಡರ ಹೆಸರನ್ನು ಇಡಲಾಗಿದೆ. ಬೆಂಗಳೂರು ವಿವಿ 3 ಭಾಗವಾಗಿದೆ. ಅದರಲ್ಲಿ ಒಂದು ವಿವಿಗೆ ಕೆಂಪೇಗೌಡರ ಹೆಸರಿಡಲು ಸರ್ಕಾರ ಚಿಂತನೆ ನಡೆಸಿದೆ. ನಾವು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದೇವೆ ಎಂದರು.
ಕೆಂಪೇಗೌಡರು ಬೆಂಗಳೂರನ್ನು ಸುಂದರ ನಗರವನ್ನಾಗಿ ಬೆಳೆಸಿದ್ದರು. ಕೆರೆಗಳನ್ನು ಕಟ್ಟಿ ರಕ್ಷಿಸಿದ್ದರು. ಆದರೆ ಇಂದು ಬೆಂಗಳೂರಿನಲ್ಲಿ ಕೆರೆಗಳನ್ನು ನುಂಗಿ ಕೆರೆಗಳೇ ಮಾಯವಾಗಿದೆ. ಬೆಂಗಳೂರಿನ ಜನಸಂಖ್ಯೆ ಇಂದು ಒಂದು ಕೋಟಿಗೂ ಮೀರಿದೆ. ನಗರದಲ್ಲಿ ಸುಮಾರು 40 ಲಕ್ಷ ದ್ವಿಚಕ್ರ ವಾಹನಗಳಿವೆ. ಒಟ್ಟು 67 ಲಕ್ಷ ವಾಹನಗಳು ನಗರದಲ್ಲಿ ದಿನಂಪ್ರತಿ ಸಂಚರಿಸುತ್ತವೆ ಎಂದು ವಿವರಿಸಿದರು.
ಪ್ರತಿ ಜೂನ್ 27ರಂದು ರಾಜ್ಯಾದ್ಯಂತ ಕೆಂಪೇಗೌಡ ಜಯಂತಿ:
ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡರ ಜಯಂತಿಯನ್ನು ಪ್ರತಿವರ್ಷ ಜೂನ್ 27ರಂದು ರಾಜ್ಯಾದ್ಯಂತ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆಂಪೇಗೌಡ ಪುತ್ಥಳಿಗೆ ಮಾಲಾರ್ಪಣೆ ಮಾಡಿದ್ದರು.