Advertisement

ಬಿಡಾಡಿ ದನಗಳ ಮೇಲೆ ಕಳ್ಳರ ಕಣ್ಣು

06:47 PM Oct 14, 2019 | Naveen |

ಎನ್‌.ಆರ್‌.ಪುರ: ತಾಲೂಕಿನಾದ್ಯಂತ ಕಳೆದ ಕೆಲವು ತಿಂಗಳಿನಿಂದ ಜಾನುವಾರುಗಳ ಕಳ್ಳ ಸಾಗಾಣಿಕೆ ಹೆಚ್ಚಾಗುತ್ತಿರುವುದು ಜಾನುವಾರು ಮಾಲಿಕರ ಆತಂಕ ಹೆಚ್ಚಿಸಿದೆ.

Advertisement

ಪ್ರಮುಖವಾಗಿ ರಾತ್ರಿ ವೇಳೆ ಮನೆಗೆ ಹಿಂದುರುಗದೆ ಪ್ರಮುಖ ಸ್ಥಳಗಳಲ್ಲಿ ಬೀಡು ಬಿಡುವ ಬಿಡಾಡಿ ದನಗಳನ್ನು ಗುರಿಯಾಗಿಟ್ಟುಕೊಂಡು ಜಾನುವಾರು ಕಳ್ಳರು ಕೈಚಳಕ ಪ್ರದರ್ಶಿಸಿ ಕಳ್ಳ ಸಾಗಾಣಿಕೆ ಮಾಡುತ್ತಿದ್ದಾರೆ ಎಂಬುದು ಜನರ ಆರೋಪವಾಗಿದೆ.

ಪಟ್ಟಣದ ವ್ಯಾಪ್ತಿಯಲ್ಲಿ ಹೆಚ್ಚಾಗಿ ದನಗಳು ಬೀಡುಬೀಡುವ ಸ್ಥಳಗಳಾದ ಅಗ್ರಹಾರ, ನೀರಿನ ಟ್ಯಾಂಕ್‌ ವೃತ್ತ, ಬಸ್‌ ನಿಲ್ದಾಣ, ಪ್ರವಾಸಿ ಮಂದಿರದ ಸರ್ಕಲ್‌, ಹಳೇಪೇಟೆ, ತಾಲೂಕಿನ ಬಿ.ಎಚ್‌.ಕೈಮರ ಗ್ರಾಮಗಳ ವ್ಯಾಪ್ತಿಯಲ್ಲಿ ದನಗಳ ಕಳವು ಮಾಡಲಾಗುತ್ತಿದೆ. ಬಹುತೇಕ ಬೆಳಗಿನ ಜಾವ 2 ರಿಂದ 3ಗಂಟೆ ವೇಳೆಗೆ ಹೈಟೆಕ್‌ ವಾಹನಗಳಲ್ಲಿ ಬರುವ ದನಗಳ್ಳರು ಬಿಡಾಡಿ ದನಗಳಿಗೆ ಮಂಪರು ಬರುವ ಔಷಧಿ ಹಾಕಿರುವ ಬ್ರೆಡ್‌ ತಿನ್ನಲು ಹಾಕಿ ಅಥವಾ ಮಂಪರು ಬರುವ ಔಷಧಿ ಹಾಕಿ ನಿದ್ದೆಗೆ ಜಾರಿದ ನಂತರ ದನಗಳನ್ನು ಎತ್ತಿ ವಾಹನಕ್ಕೆ ತುಂಬಿಸಿಕೊಂಡು ಹೋಗುತ್ತಾರೆ ಎಂಬ ಆರೋಪ ಕೇಳಿಬರುತ್ತಿದೆ.

ದನಗಳ್ಳರು ವಾಹನದಲ್ಲಿ ಮಾರಕಾಸ್ತ್ರ ಗಳನ್ನು ಇಟ್ಟುಕೊಂಡಿರುವುದರಿಂದ ಇದನ್ನು ತಡೆಯಲು ಹೋದರೆ ಏನು ಬೇಕಾದರೂ ಮಾಡಲು ಹಿಂಜರಿಯುವುದಿಲ್ಲ. ಹಾಗಾಗಿ, ಏನೂ ಮಾಡದ ಸ್ಥಿತಿ ಇದೆ ಎನ್ನುತ್ತಾರೆ ದನ ಕಳ್ಳತನ ಮಾಡುವುದನ್ನು ಕಂಡ ಪ್ರತ್ಯಕ್ಷ ದರ್ಶಿಗಳು.

ಇತ್ತೀಚೆಗೆ ಸುಂಕದಕಟ್ಟೆ ವ್ಯಾಪ್ತಿಯಲ್ಲಿ ಬೆಳಗ್ಗೆ 6ಗಂಟೆ ವೇಳೆಗೆ ಮುಖ್ಯರಸ್ತೆಯಲ್ಲಿದ್ದ ದನವೊಂದಕ್ಕೆ ಬ್ರೆಡ್‌ ಹಾಕಿ ವಾಹನಕ್ಕೆ ತುಂಬಿಸಿಕೊಂಡು ಹೋದರು. ಎಷ್ಟೇ ಕೂಗಿ ಕೊಂಡರೂ ದನವನ್ನು ಬಿಡಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

Advertisement

ಕಳೆದ ಕೆಲವು ತಿಂಗಳ ಹಿಂದೆ ತಾವು ಸಾಕಿದ ಎರಡು ಹಸುಗಳು ಹಾಗೂ ಪಕ್ಕದ ಮನೆಯ ಎರಡು ಹಸುಗಳು ಮೇಯಲು ಹೋಗಿದ್ದವು. ದಿನವೂ ಮನೆಗೆ ಬರುತ್ತಿದ್ದವು. ಇದ್ದಕ್ಕಿದ್ದಂತೆ ಕಾಣೆಯಾದವು. ಎಷ್ಟು ಹುಡುಕಿದರೂ ಸಿಗಲಿಲ್ಲ. ಕೆಲವು ದಿನ ಕಳೆದ ಮೇಲೆ ಬಿ.ಎಚ್‌.ಕೈಮರದ ಅಂಗಡಿಯೊಂದರ ಸಿಸಿ ಕ್ಯಾಮೆರಾದಲ್ಲಿ ದನಕಳ್ಳರು ಸ್ವಿಫ್ಟ್‌ ಕಾರಿನಲ್ಲಿ ದನ ತುಂಬಿಸಿಕೊಂಡು ಹೋಗಿರುವ ದೃಶ್ಯ ಸೆರೆಯಾಗಿತ್ತು. ಅದನ್ನು ಪರಿಶೀಲಿಸಿದಾಗ ನಮ್ಮ ಹಸುಗಳನ್ನು ತೆಗೆದುಕೊಂಡು ಹೋಗಿದ್ದರು. ಬೆಳಗಿನ ಜಾವ 3ಗಂಟೆ ವೇಳೆಗೆ ಈ ಕೃತ್ಯ ಎಸಗಿರುವುದು ಕಂಡುಬಂದಿದೆ.

ಚೆಕ್‌ಪೋಸ್ಟ್‌ನ ಅರಣ್ಯ ಸಿಬ್ಬಂದಿ  ಇದನ್ನು ತಡೆಯಲು ಮುಂದಾಗುವ ವೇಳೆಗೆ ಕಳ್ಳರು ವಾಹನದಲ್ಲಿ ಪರಾರಿಯಾಗಿದ್ದರು. ದನ ಕಾಣೆಯಾಗಿ ತಿಂಗಳುಗಳೇ ಕಳೆದಿದ್ದರಿಂದ ಪೊಲೀಸರಿಗೆ ದೂರು ನೀಡಲಿಲ್ಲ ಎನ್ನುತ್ತಾರೆ ಬಿ.ಎಚ್‌.ಕೈಮರದ ನಿವಾಸಿ ವಾಸುದೇವ ಕೋಟ್ಯಾನ್‌.

ಪಟ್ಟಣದ ಸಾರ್ವಜನಿಕರ ಸ್ಥಳದಲ್ಲಿ ಎಲ್ಲೂ ಸಹ ಸಿಸಿ ಕ್ಯಾಮೆರಾ ಅಳವಡಿಸಿಲ್ಲ. ಪಟ್ಟಣದ ಪೊಲೀಸ್‌ ಠಾಣೆ ಮುಂಭಾಗದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ಸಹ ಹಾಳಾಗಿ ಹಲವು ವರ್ಷಗಳೇ ಸಂದಿವೆ. ಹಾಗಾಗಿ, ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದರೆ ಆರೋಪಿಗಳನ್ನು ಕಂಡು ಹಿಡಿಯಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಸಾರ್ವಜನಿಕರು.

Advertisement

Udayavani is now on Telegram. Click here to join our channel and stay updated with the latest news.

Next