ಎನ್.ಆರ್.ಪುರ: ತಾಲೂಕಿನ ಮುತ್ತಿನಕೊಪ್ಪ ಗ್ರಾ.ಪಂ. ವ್ಯಾಪ್ತಿಯ ಮಡಬೂರು ಬಸ್ ನಿಲ್ದಾಣದಿಂದ ಕುಪ್ಪೂರು, ಬಟ್ಟೆ ಕೊಡುಗೆ, ಕೇಸಕಿ ವರೆಗಿನ ಸುಮಾರು ನಾಲ್ಕು ಕಿ.ಮೀ. ರಸ್ತೆ ಸಂಪೂರ್ಣ ಹಾಳಾದ ಪರಿಣಾಮ ವಾಹನ, ಜನ ಸಂಚಾರಕ್ಕೆ ಕಷ್ಟವಾಗಿದೆ ಎಂದು ಆರೋಪಿಸಿ ಗ್ರಾಮಸ್ಥರೇ ರಸ್ತೆ ಗುಂಡಿ ಮುಚ್ಚಿರುವ ಘಟನೆ ಮುತ್ತಿನಕೊಪ್ಪದಲ್ಲಿ ನಡೆದಿದೆ.
ಹಾಳಾದ ರಸ್ತೆ ದುರಸ್ತಿ ಕುರಿತು ಯಾವುದೇ ಇಲಾಖೆಗೆ ಮನವಿ ಸಲ್ಲಿಸಿದರೂ ಕೂಡ ಸ್ಪಂದನೆ ದೊರೆತಿಲ್ಲ ಎಂದು ದೂರಿದ ಮುತ್ತಿನಕೊಪ್ಪ ಗ್ರಾ.ಪಂ. ಸದಸ್ಯ ಎನ್.ಕೆ.ಸದಾನಂದ, ಮಡಬೂರು ಆಟೋ ಚಾಲಕರ ಸಂಘ ಹಾಗೂ ಗ್ರಾಮಸ್ಥರು, ಸೋಮವಾರ ತಾವೇ ಸ್ವತಃ ರಸ್ತೆಯ ಗುಂಡಿಗಳಿಗೆ ಮಣ್ಣು ಹಾಕಿ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಿದರು.
ಈ ಬಗ್ಗೆ ಮಾಹಿತಿ ನೀಡಿದ ಮುತ್ತಿನಕೊಪ್ಪ ಗ್ರಾ.ಪಂ. ಸದಸ್ಯ ಎನ್.ಕೆ.ಸದಾನಂದ, ನಾನು ಗ್ರಾ.ಪಂ. ಸದಸ್ಯನಾಗಿದ್ದು, ಊರಿನವರೆಲ್ಲರೂ ಸೇರಿ ಹಾಲಿ ಹಾಗೂ ಮಾಜಿ ಶಾಸಕರಿಗೆ, ಈ ಭಾಗದ ಜಿ.ಪಂ. ಸದಸ್ಯರಿಗೆ ಹಲವಾರು ಬಾರಿ ರಸ್ತೆ ದುರಸ್ತಿಗೊಳಿಸಿಕೊಡುವಂತೆ ಮನವಿ ಮಾಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು. ಗ್ರಾಪಂ ಹಲವಾರು ಸಭೆಗಳಲ್ಲೂ ರಸ್ತೆ ದುರಸ್ತಿ ಬಗ್ಗೆ ಚರ್ಚಿಸಿದ್ದೇನೆ. ಆದರೂ, ಕೆಲಸವಾಗಿಲ್ಲ. ಇದೀಗ ಮೂರು ಲೋಡ್ ಜಲ್ಲಿ, ಒಂದು ಲೋಡ್ ಮರಳನ್ನು ತಂದು ಮಡಬೂರಿನ ಆಟೋ ಚಾಲಕರು ಹಾಗೂ ಗ್ರಾಮಸ್ಥರ ಜತೆ ಸೇರಿ ನಾವೇ ತಾತ್ಕಾಲಿಕವಾಗಿ ಗುಂಡಿಗಳನ್ನು ಮುಚ್ಚಿದ್ದೇವೆ ಎಂದು ತಿಳಿಸಿದರು.
ಇನ್ನಾದರೂ ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ಗಮನ ಹರಿಸಿ, ರಸ್ತೆ ದುರಸ್ತಿ ಕಾರ್ಯಕ್ಕೆ ಕಾಯಕಲ್ಪ ನೀಡಬೇಕು. ಇಲ್ಲವಾದಲ್ಲಿ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ಈ ವೇಳೆ ಸಂದೇಶ್, ನಂದನ್, ಉಮೇಶ್, ಸಿ.ಚೇತನ್, ಪ್ರಭಾಕರ್, ಪ್ರಜ್ವಲ್ಗೌಡ, ಉದಯ ಪೂಜಾರಿ, ಕುಮಾರ್, ಮಂಜುನಾಥ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.