Advertisement

ರಂಗೇರುತ್ತಿದೆ ಪಟ್ಟಣ ಪಂಚಾಯತ್‌ ಸ್ಪರ್ಧಾ ಕಣ!

11:47 AM May 10, 2019 | Team Udayavani |

ಎನ್‌.ಆರ್‌.ಪುರ: ಪಟ್ಟಣದಲ್ಲಿ ಬಿಸಿಲ ತಾಪ ಹೆಚ್ಚಿದಂತೆ ಸ್ಥಳೀಯ ಸಂಸ್ಥೆ ಚುನಾವಣೆ ತಾಪವೂ ಏರುತ್ತಿದೆ. ಚುನಾವಣೆ ಕಣಕ್ಕಿಳಿಯಲು ಆಕಾಂಕ್ಷಿಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಿದ್ದು, ಟಿಕೆಟ್ಗಾಗಿ ಎಲ್ಲ ಪಕ್ಷಗಳಲ್ಲೂ ಲಾಬಿ ಶುರುವಾಗಿದೆ.

Advertisement

ಪಟ್ಟಣ ಪಂಚಾಯತ್‌ ಆಡಳಿತದ ಅವಧಿ ಕಳೆದ ಮಾರ್ಚ್‌ 15ಕ್ಕೆ ಕೊನೆಗೊಂಡಿತ್ತು. ಅಧಿಕಾರ ಅವಧಿ ಪೂರ್ಣಗೊಳ್ಳುವ ಮುನ್ನವೇ ವಾರ್ಡ್‌ ಮೀಸಲಾತಿ ಘೋಷಣೆಯಾಗಿದ್ದರಿಂದ ಸ್ಪರ್ಧಾಕಾಂಕ್ಷಿಗಳು ಟಿಕೆಟ್ಗಾಗಿ ರಾಜಕೀಯ ಪಕ್ಷಗಳ ಹೈಕಮಾಂಡ್‌ ಮುಂದೆ ಟವಲ್ ಹಾಕಿ ಕುಳಿತಿದ್ದರು.

ಅಲ್ಲದೆ, ವಾರ್ಡ್‌ ಮೀಸಲಾತಿ ಬದಲಾವಣೆಯಿಂದಾಗಿ ಹಿಂದೆ ಸ್ಪರ್ಧಿಸುವ ವಾರ್ಡ್‌ನಲ್ಲಿ ಸ್ವರ್ಧಿಸಲು ಸಾಧ್ಯವಾಗದವರು ಯಾವ ವಾರ್ಡ್‌ನಲ್ಲಿ ತಮಗೆ ಅನುಕೂಲವಾಗುವ ಮೀಸಲಾತಿ ಘೋಷಣೆಯಾಗಿದೆಯೋ ಆ ವಾರ್ಡ್‌ನಿಂದ ಸ್ಪರ್ಧಿಸಲು ಮುಂದಾಗಿದ್ದರು.

ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆ ಯಾಗುತ್ತಿದ್ದಂತೆ ಮತದಾರರ ಮನಓಲೈಕೆಯಲ್ಲಿ ತೊಡಗಿದ್ದು ಆಕಾಂಕ್ಷಿಗಳು ಜನಸೇವೆ ಆರಂಭಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸದಿರುವವರ ಹೆಸರು ಸೇರಿಸುವುದು, ಸರ್ಕಾರದ ಸವಲತ್ತುಗಳನ್ನು ಕೊಡಿಸುವುದು ಸೇರಿದಂತೆ ವಾರ್ಡ್‌ನ ಜನರಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ತಲುಪಿಸುವ ಕಾರ್ಯ ಆರಂಭಿಸಿದ್ದರು.

ಈ ನಡುವೆ ಲೋಕಸಭಾ ಚುನಾವಣೆ ಘೋಷಣೆಯಾಗಿದ್ದರಿಂದ ಸ್ಥಳೀಯ ಸಂಸ್ಥೆ ಚುನಾವಣೆ ಸ್ವಲ್ಪ ತಡವಾಗಿ ಘೋಷಣೆಯಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಿಗೆ ಇದ್ದಕ್ಕಿದ್ದಂತೆ ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆಯಾಗಿದ್ದು ಬರ ಸಿಡಿಲು ಬಡಿದಂತಾಗಿದೆ.

Advertisement

ಅಭ್ಯರ್ಥಿಗಳ ಆಯ್ಕೆಗೆ ರಾಜಕೀಯ ಪಕ್ಷಗಳ ಕಸರತ್ತು: ರಾಜ್ಯ ಚುನಾವಣಾ ಆಯೋಗ ಸ್ಥಳೀಯ ಸಂಸ್ಥೆಗಳ ಚುನಾವಣೆಯ ದಿನಾಂಕ ಘೋಷಣೆ ಮಾಡುತ್ತಿದ್ದಂತೆ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳ ನಾಯಕರು ವಾರ್ಡ್‌ವಾರು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಅಲ್ಲದೆ, ಪ್ರಮುಖ ರಾಜಕೀಯ ಪಕ್ಷಗಳು ಆಕಾಂಕ್ಷಿಗಳಿಂದ ಅರ್ಜಿಯನ್ನು ಆಹ್ವಾನಿಸಿದರೆ, ಇನ್ನು ಕೆಲವು ರಾಜಕೀಯ ಪಕ್ಷಗಳು ಆಕಾಂಕ್ಷಿಗಳ ಪಟ್ಟಿಯನ್ನೇ ತಯಾರಿಸಿವೆ.

ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಸ್ಪರ್ಧಾ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ನನಗೇ ಟಿಕೆಟ್ ಸಿಗಬಹುದೆಂಬ ವಿಶ್ವಾಸ ಹೊಂದಿರುವ ಆಕಾಂಕ್ಷಿಗಳು ಈಗಾಗಲೇ ತಾವು ಸ್ಪರ್ಧೆ ಬಯಸುವ ವಾರ್ಡ್‌ನಲ್ಲಿ ಇಂತವರ ಮನೆಯ ಮತಗಳು ನಮಗೆ ಬರಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ.

ಇಷ್ಟೇ ಅಲ್ಲ, ಪ್ರಮುಖ ರಾಜಕೀಯ ಪಕ್ಷಗಳಿಂದ ಟಿಕೆಟ್ ಸಿಗದಿದ್ದರೆ ಪಕ್ಷೇತರರಾಗಿ ಸ್ಪರ್ಧಿಸುವ ಚಿಂತನೆಯಲ್ಲೂ ತೊಡಗಿದ್ದು, ಒಂದು ವೇಳೆ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದರೆ ‘ಗಾಳಿ ಬಂದ ಕಡೆ ತೂರಿಕೋ’ ಎಂಬ ಗಾದೆಯಂತೆ ಬಹುಮತ ಪಡೆದ ಪಕ್ಷದೊಂದಿಗೆ ಕೈಜೋಡಿಸಿ ಹೆಚ್ಚಿನ ಅಧಿಕಾರ ಪಡೆಯುವ ದೂರಾಲೋಚನೆಯಲ್ಲೂ ತೊಡಗಿದ್ದಾರೆ.

ಪಟ್ಟಣ ಪಂಚಾಯತ್‌ ವಾರ್ಡ್‌ ವಿವರ: ನರಸಿಂಹರಾಜಪುರ ಪಟ್ಟಣ ಪಂಚಾಯತಿ ಒಟ್ಟು 11 ವಾರ್ಡ್‌ಗಳನ್ನು ಹೊಂದಿದೆ. 2019ರ ಜನವರಿಯಲ್ಲಿ ತಯಾರಿಸಿರುವ ಮತದಾರರ ಪಟ್ಟಿಯ ಪ್ರಕಾರ ಪಟ್ಟಣದಲ್ಲಿ ಒಟ್ಟು 5465 ಮತದಾರರಿದ್ದು, ಇದರಲ್ಲಿ 2706 ಪುರುಷರು, 2758 ಮಹಿಳಾ ಮತದಾರರಿದ್ದಾರೆ. ಬಹುತೇಕ ವಾರ್ಡ್‌ಗಳಲ್ಲಿ ಮಹಿಳಾ ಮತದಾರರೇ ನಿರ್ಣಾಯಕರಾಗಿದ್ದಾರೆ.

•ಪ್ರಶಾಂತ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next