Advertisement

ಜಿಲ್ಲೆಯ 20 ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭ

01:07 PM May 07, 2019 | Team Udayavani |

ಎನ್‌ ಆರ್‌ ಪುರ: ಚಿಕ್ಕಮಗಳೂರು ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದನ್ನು ಗಮನಿಸಿ ರಾಜ್ಯ ಸರ್ಕಾರವು 1 ಸಾವಿರ ಸರ್ಕಾರಿ ಶಾಲೆಗಳಿಗೆ ಇಂಗ್ಲಿಷ್‌ ಮಾಧ್ಯಮ ಮಂಜೂರು ಮಾಡಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಿವನಂಜಯ್ಯ ಹೇಳಿದರು.

Advertisement

ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ 20 ಶಾಲೆಗಳಿಗೆ ಇಂಗ್ಲಿಷ್‌ ಮಾಧ್ಯಮ ಮಂಜೂರಾಗಿದೆ ಎಂದರು.

ಇವು ಪ್ರಸಕ್ತ ಸಾಲಿನಲ್ಲೇ ಪ್ರಾರಂಭವಾಗಲಿವೆ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆ ಮುಚ್ಚುತ್ತಿರುವುದನ್ನು ಗಮನಿಸಿ ಗ್ರಾಮೀಣ ಭಾಗದ ಶಾಲೆಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಇದಕ್ಕಾಗಿ ಶಿಕ್ಷಕರಿಗೆ ರಜಾ ಅವಧಿಯಲ್ಲೂ ಇಂಗ್ಲಿಷ್‌ ತರಬೇತಿ ನೀಡಲಾಗುತ್ತಿದೆ. ಪ್ರತಿ ತಾಲೂಕಿಗೆ 1ರಂತೆ ಜಿಲ್ಲೆಗೆ 8 ಪಬ್ಲಿಕ್‌ ಶಾಲೆ ಮಂಜೂರಾಗಿದೆ ಎಂದರು.

ಶಾಲಾ ಪ್ರಾರಂಭೋತ್ಸವದಂದೇ ಪಠ್ಯಪುಸ್ತಕ: ಈ ವರ್ಷ ಮೇ 29 ರಂದು ಶಾಲಾ ಪ್ರಾರಂಭೋತ್ಸವದ ದಿನದಂದೇ ಪಠ್ಯಪುಸ್ತಕ, ಸಮವಸ್ತ್ರ‌್ತ್ರ ಹಾಗೂ ಶೂ, ಸಾಕ್ಸ್‌ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರದೇ ಮುಚ್ಚಿರುವ ಶಾಲೆಗೆ 3 ವರ್ಷದೊಳಗೆ ಮತ್ತೆ ಮಕ್ಕಳು ಬಂದರೆ ಶಾಲೆ ಪ್ರಾರಂಭಿಸಲಾಗುವುದು.ಇಲ್ಲದಿದ್ದರೆ ಆ ಶಾಲಾ ಕಟ್ಟಡವನ್ನು ಅಂಗನವಾಡಿ ಅಥವಾ ಸರ್ಕಾರದ ಇತರ ಇಲಾಖೆಗೆ ಹಸ್ತಾಂತರ ಮಾಡಲಾಗುವುದು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ನಾಗರಾಜ್‌ ಇದ್ದರು.

ಶಿಕ್ಷಕರು ಮಕ್ಕಳ ಪರಿಶ್ರಮದಿಂದ ಫಲಿತಾಂಶ ಹೆಚ್ಚಳ
ಶಿಕ್ಷಕರು ಹಾಗೂ ಮಕ್ಕಳ ಪರಿಶ್ರಮದಿಂದ ಚಿಕ್ಕಮಗಳೂರು ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಕಳೆದ ವರ್ಷ ಶೇ. 72 ಇದ್ದದ್ದು, ಈ ವರ್ಷ ಶೇ. 82ಕ್ಕೆ ಏರಿದೆ. ಹಿಂದಿನ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲಿ 28ನೇ ಸ್ಥಾನದಲ್ಲಿತ್ತು. ಈ ವರ್ಷ 14ನೇ ಸ್ಥಾನಕ್ಕೆ ಏರಿದೆ ಎಂದರು. ಶಿಕ್ಷಣ ಇಲಾಖೆಯ ಸೂಚನೆಯಂತೆ ಮಕ್ಕಳಿಗೆ ವಿಶೇಷ ತರಗತಿ, ರಾತ್ರಿ ಮನೆಗಳಲ್ಲಿ ಪಾಠ ಅಲ್ಲದೆ ಶಿಕ್ಷಕರು ವೈಯಕ್ತಿಕವಾಗಿಯೂ ಆಸಕ್ತಿಯಿಂದ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಹೆಚ್ಚಿನ ಪಾಠ ಬೋಧಿಸಿದ್ದಾರೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪ್ರತ್ಯೇಕವಾಗಿ ಪಾಸಿಂಗ್‌ ಪ್ಯಾಕೇಜ್‌ ಎಂಬ ವಿಶೇಷ ತರಗತಿ ನಡೆಸಲಾಗಿದೆ. ಇದೆಲ್ಲದರ ಪರಿಣಾಮವಾಗಿ ಫಲಿತಾಂಶದಲ್ಲಿ ಹೆಚ್ಚಳವಾಗಿದೆ ಎಂದರು.

Advertisement

ಆರ್‌.ಟಿ.ಇ.ತಿದ್ದುಪಡಿ
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳವಾಗಲಿ ಎಂದು ಶಿಕ್ಷಣ ಹಕ್ಕು ಕಾಯ್ದೆಗೆ (ಆರ್‌ಟಿಇ) ತಿದ್ದುಪಡಿ ತರಲಾಗಿದೆ. ಆರ್‌ಟಿಇ ಕಾಯ್ದೆಯಲ್ಲಿ ಇದುವರೆಗೆ ಅನುದಾನರಹಿತ ಖಾಸಗಿ ಶಾಲೆಗಳಲ್ಲಿ 1 ನೇ ತರಗತಿಯ ದಾಖಲಾತಿಗೆ ದುರ್ಬಲ ವರ್ಗದವರಿಗಾಗಿ ಶೇ. 25 ಮೀಸಲಾತಿ ಇತ್ತು. ಈಗ ತಂದಿರುವ ತಿದ್ದುಪಡಿ ಪ್ರಕಾರ ಆ ಅನುದಾನ ರಹಿತ ಶಾಲೆಯ 1 ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆ ಅಥವಾ ಅನುದಾನಿತ ಶಾಲೆ ಇದ್ದರೆ, ಆ ವ್ಯಾಪ್ತಿಯ ದುರ್ಬಲ ವರ್ಗದ ಮಕ್ಕಳಿಗೆ ಅನುದಾನ ರಹಿತ ಶಾಲೆಗೆ ಪ್ರವೇಶ ಇರುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next