ಚಾಮರಾಜನಗರ: ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.3ರಿಂದ ಶೇ.7.5 ಕ್ಕೇರಿಸಬೇಕೆಂದು ಶಿಫಾರಸು ಮಾಡಿರುವ ನ್ಯಾಯಮೂರ್ತಿ ನಾಗಮೋಹನ್‌ದಾಸ್ ವರದಿ ಜಾರಿ ಮಾಡಬೇಕೆಂದು ಆಗ್ರಹಿಸಿ ನಾಯಕ ಸಮುದಾಯ ನಗರದಲ್ಲಿ ಶುಕ್ರವಾರ ಭಾರೀ ಪ್ರತಿಭಟನೆ ನಡೆಸಿತು.
ನಗರದ ಪ್ರವಾಸಿ ಮಂದಿರ ಆವರಣದಲ್ಲಿ ಸಮಾವೇಶಗೊಂಡ ಸಮುದಾಯದವರು, ಭುವನೇಶ್ವರಿ ವೃತದಲ್ಲಿ ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆತಡೆ ನಡೆಸಿ, ನಂತರ ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ, ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಮೂಲಕ ಸರ್ಕಾರಕ್ಕೆ ಹಕ್ಕೊತ್ತಾಯ ಸಲ್ಲಿಸಿದರು.
ಧರಣಿಗೂ ಬಗ್ಗದ ಸರ್ಕಾರ: ಪ್ರತಿಭಟನೆ ನೇತೃತ್ವ ವಹಿಸಿದ್ದ ನಾಯಕ ಸಮಾಜದ ಮುಖಂಡ ಪು.ಶ್ರೀನಿವಾಸನಾಯಕ ಮಾತನಾಡಿ, ನ್ಯಾ.ನಾಗಮೋಹನ್ ದಾಸ್ ವರದಿ ಜಾರಿಗೊಳಿಸುವಂತೆ 100 ದಿನಗಳಿಂದಲೂ, ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯ ವಾಲ್ಮೀಕಿ ಮಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇಷ್ಟಾದರೂ ರಾಜ್ಯ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರಿದರು.
ಜಾನುವಾರುಗಳ ಜತೆ ಪ್ರತಿಭಟನೆ: ಸೌಜನ್ಯಕ್ಕಾದರೂ ಮುಖ್ಯಮಂತ್ರಿಯವರು ಧರಣಿ ಸ್ಥಳಕ್ಕೆ ಭೇಟಿ ನೀಡಿಲ್ಲ, ಶ್ರೀಗಳ ಹೋರಾಟ ಬೆಂಬಲಿಸಿ ರಾಜ್ಯಾದ್ಯಂತ ಎಲ್ಲಾ ತಾಲೂಕು ಕಚೇರಿ, ಡೀಸಿ ಕಚೇರಿ ಮುಂದೆ ಪ್ರತಿಭಟನೆ ನಡಸಲಾಗುತ್ತಿದ್ದು, ಚಾಮರಾಜನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ. ಸರ್ಕಾರ ನ್ಯಾ.ನಾಗಮೋಹನ್ ದಾಸ್ ವರದಿ ಜಾರಿಗೆ ತರದಿದ್ದರೆ ಜನ, ಜಾನುವಾರುಗಳೊಂದಿಗೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
Related Articles
ರಾಜೀನಾಮೆ ನೀಡಲಿ: ಚಾಮರಾಜನಗರ ಮತ್ತು ಮೈಸೂರು ಜಿಲ್ಲಾ ನಾಯಕರ ಸಂಘದ ಅಧ್ಯಕ್ಷ ಕೆಲ್ಲಂಬಳ್ಳಿ ಸೋಮನಾಯಕ ಮಾತನಾಡಿ, ಸಮುದಾಯದ ಮೀಸಲಾತಿಯಡಿಯಲ್ಲಿ ಶಾಸಕರು, ಸಚಿವರಾಗಿರುವ ಎಲ್ಲರೂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ದಲಿತ ಮುಖಂಡ ಅರಕಲವಾಡಿ ನಾಗೇಂದ್ರ ಮಾತನಾಡಿದರು. ಪ್ರತಿಭಟನೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಮಾಜಿ ಸದಸ್ಯರಾದ ಎಸ್. ಸೋಮನಾಯಕ, ರಮೇಶ್, ತಾಪಂ ಮಾಜಿ ಅಧ್ಯಕ್ಷ ಎಚ್ .ವಿ.ಚಂದ್ರು, ಪಾಳ್ಯ ಜಯಸುಂದರ್, ನಿವೃತ್ತ ಅಭಿಯಂತರಾದ ರಂಗರಾಮನಾಯಕ, ಯ.ರಾಜುನಾಯಕ, ನಗರಸಭಾ ಸದಸ್ಯರಾದ ಶಿವರಾಜ್, ಸುರೇಶ್, ಪ್ರಕಾಶ್, ಮಾಜಿ ಸದಸ್ಯ ಚೆಂಗುಮಣಿ, ಮುಖಂಡರಾದ ಕಪಿನಿನಾಯಕ, ನಗರಸಭಾ ಮಾಜಿ ಅಧ್ಯಕ್ಷ ಸುರೇಶ್‌ನಾಯಕ, ಚಾ.ಸಿ.ಸೋಮನಾಯಕ, ಕೃಷ್ಣನಾಯಕ, ನಾರಾಯಣ್, ಶಿವುವಿರಾಟ್, ಬುಲೆಟ್ ಚಂದ್ರು, ವರದನಾಯಕ, ನಾಗೇಂದ್ರನಾಯಕ, ಬಂಗಾರು, ಮಣಿಕಂಠನಾಯಕ, ಮಹೇಂದ್ರ, ಜಿ.ಎಂ.ಗಾಡ್ಕರ್, ದಲಿತ ಮುಖಂಡ ಸಿ.ಎಂ.ಕೃಷ್ಣಮೂರ್ತಿ, ಬಿಎಸ್ಪಿ ಜಿಲ್ಲಾಧ್ಯಕ್ಷ ಎನ್
.ನಾಗಯ್ಯ, ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ರಮೇಶ್, ಮಾದೇಶ್, ರಂಗಸ್ವಾಮಿ ಭಾಗವಹಿಸಿದ್ದರು.