Advertisement

Mysuru: ನಾನು ಹೆದರುವ, ಜಗ್ಗುವ, ಬಗ್ಗುವ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

11:30 PM Sep 29, 2024 | Team Udayavani |

ಮೈಸೂರು: ‘ನನ್ನ ರಾಜಕೀಯ ಬದುಕಿನಲ್ಲಿ ನಯಾಪೈಸೆ ಭ್ರಷ್ಟ ಹಣಕ್ಕಾಗಿ ಕೈಚಾಚಿಲ್ಲ, ಆತ್ಮಸಾಕ್ಷಿಯಾಗಿ ನಾನು ಸರಿಯಾಗಿದ್ದೇನೆ. ಹೀಗಾಗಿ ನಾನು ಹೆದರುವ, ಜಗ್ಗುವ-ಬಗ್ಗುವ ಪ್ರಶ್ನೆಯೇ ಇಲ್ಲ, ಜನರ ಆಶೀರ್ವಾದ, ನಿಮ್ಮೆಲ್ಲರ ಬೆಂಬಲ ಇರುವವರೆಗೂ ನಾನು ಅಲ್ಲಾಡುವುದಿಲ್ಲ’ ಎಂದು ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramiah) ಗಟ್ಟಿಯಾಗಿ ಸಮರ್ಥಿಸಿಕೊಂಡಿದ್ದಾರೆ.

Advertisement

ನಗರದ ಅಶೋಕಪುರಂನಲ್ಲಿ ರವಿವಾರ 245 ವೀಳ್ಯದೆಲೆ ಬೆಳೆಗಾರರಿಗೆ ತಲಾ 0.5 ಗುಂಟೆ ಜಾಗ ನೀಡುವುದು ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಬಳಿಕ ಮಾತನಾಡಿ, ಬಹಳ ಜನ ಬಂದು, ಬಂದು ನನಗೆ, “ಧೈರ್ಯವಾಗಿರಿ, ರಾಜೀನಾಮೆ ಕೊಡಬೇಡಿ” ಅಂತಾರೆ. ನಾನು ಷಡ್ಯಂತ್ರಗಳಿಗೆ ಹೆದರುವವನೇ ಅಲ್ಲ. ರಾಜಕೀಯವಾಗಿ ನನಗೆ ಒಂದೆರಡು ತಿಂಗಳು ತೊಂದರೆ ಕೊಡಬಹುದು. ಆದರೆ ಕಾನೂನಾತ್ಮಕವಾಗಿ ನಾನು ಗೆದ್ದೇ ಗೆಲ್ತೇನೆ. ರಾಜಕೀಯವಾಗಿ ಇದನ್ನೆಲ್ಲಾ ಎದುರಿಸಿ ನಿಲ್ಲೋದು ನನಗೆ ಗೊತ್ತಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳಿಗೆ ತಿರುಗೇಟು ನೀಡಿದರು.

ನಾವು ಅಂಬೇಡ್ಕರ್ ವಾದಿಗಳು:
ನಾನು, ಮಹದೇವಪ್ಪ, ಶ್ರೀನಿವಾಸ ಪ್ರಸಾದ್ ಎಲ್ಲರೂ ಅಂಬೇಡ್ಕರ್ ವಾದಿಗಳು. ಅಂಬೇಡ್ಕರ್ ಸಂವಿಧಾನವನ್ನು ದಲಿತರಿಗೆ ಮಾತ್ರ ಮಾಡಲಿಲ್ಲ. ಅವಕಾಶ ವಂಚಿತರೆಲ್ಲರಿಗೂ ಮಾಡಿದ್ದಾರೆ. ಅಂಬೇಡ್ಕರ್ ಸಂವಿಧಾನದಿಂದ ನಾನು ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ಪೌರಕಾರ್ಮಿಕರು ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಯಾಗಲು ಅವಕಾಶ ಕೊಟ್ಟಿರುವುದು ಸಂವಿಧಾನ. ದಲಿತರ ಆರ್ಥಿಕ ಸಾಮಾಜಿಕ ಬದಲಾವಣೆಯಾಗಬೇಕಾದರೇ ಜನಸಂಖ್ಯೆಗೆ ಅನುಗುಣವಾಗಿ ಖರ್ಚು ಮಾಡಬೇಕು ಎಂದು ಹೇಳಿದ್ದಾರೆ.

ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದೆಲೆ, ಈರನಗೆರೆ ಬದನೆಕಾಯಿ ಮೈಸೂರಿನ ಹೆಮ್ಮೆಯ ಸಾಂಪ್ರದಾಯಿಕ ಬೆಳೆಗಳಾಗಿದ್ದು
ಈ ಬೆಳೆಗಳ ರಕ್ಷಣೆ, ವಿಸ್ತರಣೆಗೆ ಸರ್ಕಾರದಿಂದ ಕಾರ್ಯಕ್ರಮ ಘೋಷಣೆ ಮಾಡುತ್ತೇನೆ. ಅಶೋಕಪುರಂನ‌ ಅಭಿವೃದ್ಧಿಗಾಗಿ ಅಗತ್ಯ ಇರುವ ಎಲ್ಲಾ ಕಾರ್ಯಕ್ರಮಗಳ ಪಟ್ಟಿ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಅವರಿಗೆ ಸೂಚಿಸಿದ್ದೇನೆ. ಅಗತ್ಯ ಅನುದಾನ ಕೊಡಲು ಸರ್ಕಾರ ಬದ್ಧವಾಗಿದೆ ಎಂದರು.

ಸ್ನೇಹಮಯಿ ಕೃಷ್ಣ ಗೊತ್ತಿಲ್ಲ: 

ನನಗೆ ಸ್ನೇಹಮಯಿ ಕೃಷ್ಣ ಯಾರು ಎಂಬುದೇ ಗೊತ್ತಿಲ್ಲ. ನಾನು ಇವತ್ತಿನವರೆಗೂ ಅವರನ್ನು ನೋಡಿಲ್ಲ. ಅವರ ಮೇಲೆ ಏನೇನು ಕೇಸ್‌ಗಳಿವೆ ಅದು ನನಗೆ ಗೊತ್ತಿಲ್ಲ. ಅವರು ಇ.ಡಿ.ಗೆ ದೂರು ನೀಡಿರಬಹುದು. ದೂರು ನೀಡಿದ ತಕ್ಷಣ ತನಿಖೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ದೂರು ಕೊಟ್ಟಿದ್ದಾರೆ, ಕೊಡಲಿ ಬಿಡಿ. ಈಗ ಮುಡಾ ವಿಚಾರ ನ್ಯಾಯಾಲಯದಲ್ಲಿದೆ, ಇದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು.

ಸಿದ್ದರಾಮಯ್ಯ ಮೇಲೆ ರಾಜಕೀಯ ದಾಳಿ: ಡಾ.ಎಚ್​.ಸಿ.ಮಹದೇವಪ್ಪ

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್​.ಸಿ.ಮಹದೇವಪ್ಪ ಮಾತನಾಡಿ, ಸಿಎಂ ಸಿದ್ದರಾಮಯ್ಯ ಮೇಲೆ ಯಾವುದೇ ತಪ್ಪು ಮಾಡದ, ಭ್ರಷ್ಟಾಚಾರ ಮಾಡದಿರುವ ಸಿಎಂ ಮೇಲೆ ರಾಜಕೀಯ ದಾಳಿ ನಡೆಯುತ್ತಿದೆ. ಹೀಗಾಗಿ ಹಿಂದುಳಿದ ವರ್ಗಗಳು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಕಾರ್ಯಕ್ರಮದಲ್ಲಿ ಜನರಿಗೆ ಕರೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next