Advertisement

ದಿನ ಕಳೆದಂತೆ ಬರಿದಾಗುತ್ತಿದೆ ಕಬಿನಿ ಒಡಲು

02:54 PM Jun 17, 2023 | Team Udayavani |

ಎಚ್‌.ಡಿ.ಕೋಟೆ: ಇಡೀ ರಾಜ್ಯದಲ್ಲೇ ಮೊದಲು ಭರ್ತಿಯಾಗುವ ಕೀರ್ತಿಗೆ ಪಾತ್ರವಾಗಿದ್ದ ಕಬಿನಿ ಜಲಾಶಯ ಈ ಬಾರಿ ಜೂನ್‌ ಅರ್ಧ ತಿಂಗಳು ಕಳೆದುಹೋದರೂ ಮುಂಗಾರು ಮಳೆಯ ಆಗಮನವಾಗದೆ, ಜಲಾಶಯದ ಒಡಲು ದಿನದಿಂದ ದಿನಕ್ಕೆ ಬರಿದಾಗುತ್ತಿದೆ.

Advertisement

ತಾಲೂಕಿನ ಹೆಸರಾಂತ ಕಬಿನಿ ಜಲಾಶಯ ಇಡೀ ರಾಜ್ಯದಲ್ಲೇ ಮುಂಗಾರು ಮಳೆ ಆರಂಭಗೊಳ್ಳುತ್ತಿ ದ್ದಂತೆಯೇ ಮೊದಲು ಭರ್ತಿಯಾಗುವ ಕೀರ್ತಿಗೆ ಪಾತ್ರವಾದ ಜಲಾಶಯ. ನೆರೆಯ ತಮಿಳುನಾಡು ನೀರಿಗಾಗಿ ಪ್ರತಿ ಬಾರಿ ಕ್ಯಾತೆ ತೆಗೆದಾಗೆಲ್ಲಾ ತಮಿಳು ನಾಡಿಗೆ ಸಾಕಷ್ಟು ಪ್ರಮಾಣದ ನೀರು ಹರಿಯುತ್ತಿದ್ದದ್ದು ಕಬಿನಿ ಜಲಾಶಯದಿಂದಲೆ.

ಪ್ರತಿ ವರ್ಷ ಮೇ ಕೊನೆಯ ವಾರ ಅಥವಾ ಜೂನ್‌ ಮೊದಲ ವಾರದಲ್ಲೇ ಬಹುತೇಕ ಸಂಪೂರ್ಣವಾಗಿ ಭರ್ತಿಯಾಗುತ್ತಿದ್ದ ಕಬಿನಿ ಜಲಾಶಯ ಈ ಬಾರಿ ಮುಂಗಾರು ಮಳೆ ಆರಂಭಗೊಳ್ಳದೇ ಹಿಂದೆಂದೂ ಕಂಡು ಕೇಳರಿಯಷ್ಟು ಪ್ರಮಾಣದಲ್ಲಿ ನೀರಿನ ಶೇಖರಣೆ ಇಳಿಕೆಯಾಗಿ ಜನ ಜಾನುವಾರುಗಳಷ್ಟೇ ಅಲ್ಲದೆ ಕಬಿನಿ ಹಿನ್ನೀರಿನ ಅರಣ್ಯ ವ್ಯಾಪ್ತಿಯ ವನ್ಯಜೀವಿಗಳೂ ಕೂಡ ನೀರಿಗಾಗಿ ಹಾಹಾಕಾರ ಎದ್ದಿದೆ.

ಅರಣ್ಯದ ಮಧ್ಯದಲ್ಲಿ ಹಾದು ಬರುವ ಕಬಿನಿ: ಕಬಿನಿ ಹಿನ್ನೀರು ತಾಲೂಕಿನ ಹೆಸರಾಂತ ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮಧ್ಯ ಭಾಗ ದಲ್ಲಿ ಹಾದು ಬರುವುದರಿಂದ ನದಿಯ ಸೊಬಗು ಪರಿಸರ ಪ್ರೇಮಿಗಳನ್ನು ಆಕರ್ಷಿಸುವಂತಿದೆ. ಕೇರಳ ಮತ್ತು ಕರ್ನಾಟಕ ರಾಜ್ಯ ಪ್ರತ್ಯೇಕಿಸಿ ಮಧ್ಯಭಾಗದಲ್ಲಿ ಹರಿದು ಬರುತ್ತಿರುವ ಕಬಿನಿ ಜಲಾಶಯದ ಒಂದು ಬದಿ ಕರ್ನಾಟಕ ರಾಜ್ಯಕ್ಕೆ ಸೇರಿದರೆ ಮತ್ತೂಂದು ನದಿ ತೀರ ಕೇರಳ ರಾಜ್ಯಕ್ಕೆ ಸೇರುವುದು ವಿಶೇಷ.

ನೀರಿಗಾಗಿ ವನ್ಯಜೀವಿಗಳ ಹಾಹಾಕಾರ: ಅರಣ್ಯ ದೊಳಗೆ ವನ್ಯಜೀವಿಗಳ ಕುಡಿಯುವ ನೀರಿಗಾಗಿ ಅರಣ್ಯ ಇಲಾಖೆ ಮೂಲಕ ಸರ್ಕಾರ ಅಲ್ಲಲ್ಲಿ ಕೃತಕ ಕೆರೆಗಳನ್ನು ನಿರ್ಮಿಸಿ ನೀರಿನ ವ್ಯವಸ್ಥೆ ಕಲ್ಪಿಸಿದೆ ಯಾದರೂ ಬಹುಸಂಖ್ಯೆ ಪ್ರಾಣಿ ಪಕ್ಷಿಗಳು ಸೇರಿದಂತೆ ಇನ್ನಿತರ ಜಲಚರಗಳು ಕಬಿನಿ ಹಿನ್ನೀರನ್ನೇ ಅವಲಂಭಿ ಸಿವೆ. ಆದರೆ ಈ ಬಾರಿ ಜಲಾಶಯದ ಒಳಹರಿವಿನಲ್ಲಿ ತೀವ್ರ ಇಳಿಕೆಯಾಗಿರುವುದರಿಂದ ಕುಡಿಯುವ ನೀರಿಗಾಗಿ ಜಲಾಶಯದ ಹಿನ್ನೀರಿನ ಅರಣ್ಯದೊಳಗಿನ ಪ್ರಾಣಿ-ಪಕ್ಷಿಗಳು ಪರಿತಪಿಸುವ ಸ್ಥಿತಿ ನಿರ್ಮಾಣಗೊಂಡಿದೆ.

Advertisement

ಕಬಿನಿ ಪಾತ್ರದ ರೈತರ ಪರದಾಟ: ತಾಲೂಕಿನಲ್ಲಿ ಕಬಿನಿ, ತಾರಕ, ನುಗು ಮತ್ತು ಹೆಬ್ಬಳ್ಳ ಎಂಬ 4 ಜಲಾಶಯಗಳಿವೆಯಾದರೂ ತಾಲೂಕಿ ರೈತರ ಕೃಷಿಗೆ ಜಲಾಶಯಗಳಿಂದ ಅಷ್ಟಾಗಿ ಉಪಯೋಗ ಇಲ್ಲ. ನೆರೆಯ ಜಿಲ್ಲೆ ನೆರೆಯ ತಾಲೂಕಿನ ರೈತರು ಜನರಿಗಷ್ಟೇ ಈ ಜಲಾಶಯಗಳು ಉಪಯುಕ್ತವಾಗಿವೆ. ಆದರೆ ಈ ಬಾರಿ ಕಬಿನಿ ಪಾತ್ರದ ಕೃಷಿಕ ರೈತರ ಬೆಳೆಗಳಿಗೂ ಸಮ ರ್ಪಕ ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ.

ನೀರಿಲ್ಲದೆ ಬಿಕೋ ಎನ್ನುತ್ತಿದೆ ಕಬಿನಿ ಜಲಾಶಯ: ಜೂನ್‌ ತಿಂಗಳ ಆರಂಭದಲ್ಲಿ ಮೈದುಂಬಿಕೊಂಡು ಭೋರ್ಗರೆಯುತ್ತಾ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಕಬಿನಿ ಜಲಾಶಯದ ಒಡಲು ಈ ಬಾರಿ ಮಳೆಯಿಲ್ಲದೆ ಬರಿದಾಗಿ ಬಿಕೋ ಅನ್ನುತ್ತಿದೆ. ದಿನದಿಂದ ದಿನಕ್ಕೆ ನೀರಿನ ಶೇಖರಣೆ ಪ್ರಮಾಣದಲ್ಲಿ ತೀವ್ರ ಇಳಿಕೆ ಕಂಡು ಬರುತ್ತಿದೆ. ಇನ್ನು ಕೆಲವು ದಿನಗಳ ತನಕ ಮಳೆ ಕೈಕೊಟ್ಟರೆ ಗತಿ ಏನು ಎನ್ನುವಂತಾಗಿದೆ. ಕುಡಿವ ನೀರಿನ ಹೊರಹರಿವು ಸ್ಥಗಿತ: ಕಬಿನಿ ಜಲಾಶಯದಲ್ಲಿ ನೀರಿನ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ಆದೇಶದಂತೆ ಜಲಾಶಯದಿಂದ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳ ಜನ ಜಾನುವಾರುಗಳಿಗಾಗಿ ನದಿಯಿಂದ ಹರಿಯ ಬಿಟ್ಟಿದ್ದ ಹೊರಹರಿವನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿದೆ. ಬದಲಾಗಿ ನಗರ ಪ್ರದೇಶಗಳಿಗೆ ಕೆಆರ್‌ಎಸ್‌ ನಿಂದ ನೀರು ಬಿಡಲಾಗಿದೆ.

ನೀರಿನ ಅಭಾವ ಅರಿತು ಕೃಷಿಗೆ ನೀರು ಕೇಳದ ಈ ಭಾಗದ ರೈತರು: ಈ ಬಾರಿ ಮುಂಗಾರು ಮಳೆ ಹಿನ್ನೆಡೆಯಾದ್ದರಿಂದ ಜಲಾಶಯದಲ್ಲಿ ನೀರಿಲ್ಲ ಅನ್ನುವ ನೈಜತೆ ಅರಿತ ಕೃಷಿ ಚಟುವಟಿಕೆಗಾರ ರೈತರು ನೀರಿಗಾಗಿ ಬೇಡಿಕೆ ಇಟ್ಟಿಲ್ಲ. ಈಗಿರುವ ನೀರಿನ ಪ್ರಮಾಣವನ್ನು ಗಮನಿಸಿದಾಗ ಸುಮಾರು 35 ದಿನಗಳ ತನಕ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ ಅನ್ನುವುದು ಖಚಿತ ಮಾಹಿತಿಯಿಂದ ತಿಳಿದಿದೆಯಾದರೂ ನಂತರದ ದಿನಗಳಲ್ಲಿ ಮಳೆಯಾ ಗದೇ ಇದ್ದರೆ ನೀರಿಗಾಗಿ ಹಾಹಾಕಾರ ಪಡಬೇಕಾಗುತ್ತದೆ. ಅದರೂ ಅಷ್ಟರಲ್ಲಿ ಮುಂಗಾರು ಮಳೆ ಆರಂಭಗೊಳ್ಳುವ ವಿಶ್ವಾಸ ಜನರಲ್ಲಿದೆ.

ಜಲಾಶಯದ ನೀರಿನ ಮಟ : ಕಬಿನಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2284 ಅಡಿ(4.09 ಟಿಎಂಸಿ), ಈ ದಿನದ ನೀರಿನ ಮಟ್ಟ 2250 ಅಡಿ ಜಲಾಶಯದ ಒಳಹರಿವು 630 ಕ್ಯೂಸೆಕ್‌, 3 ದಿನಗಳ ಹಿಂದಿನಿಂದ ಹೊರಹರಿವು ಸ್ಥಗಿತಗೊಳಿಸಲಾಗಿದೆ. ಕಳೆದ ಸಾಲಿನ ಇದೇ ತಿಂಗಳಲ್ಲಿ ಜಲಾಶಯದ ನೀರಿನ ಮಟ್ಟ 2261 ಅಡಿಗಳಿದ್ದು ಕುಡಿಯುವ ನೀರಿಗಾಗಿ 1 ಸಾವಿರ ಕ್ಯೂಸೆಕ್‌ ನೀರಿ ಹೊರ ಬಿಡಲಾಗಿತ್ತು. ಆದರೆ ಈ ವರ್ಷಕ್ಕೆ ನೀರಿನ ಶೇಖರಣೆಗೆ ಹೊಲಿಕೆ ಮಾಡಿದಾಗ 11 ಸಾವಿರ ಕ್ಯೂಸೆಕ್‌ ನೀರು ಇಳಿಕೆಯಾಗಿದೆ.

ಜಲಾಶಯದಲ್ಲಿದೆ ಒಂದು ಟಿಎಂಸಿಯಷ್ಟು ಹೂಳು: ಕಬಿನಿ ಜಲಾಶಯದಲ್ಲಿ ಶುಕ್ರವಾರ 4.09 ಟಿಎಂಸಿ ನೀರಿದೆ, ಆದರೆ ಹಲವು ವರ್ಷಗಳ ಹಿಂದಿನಿಂದ ಜಲಾಶಯದ ಕ್ರಸ್ಟ್‌ ಗೇಟ್‌ಗಳ ಬಳಿಯಲ್ಲಿ ಹೂಳು ತೆಗೆಸದೇ ಇರುವುದರಿಂದ ಸುಮಾರು 1 ಟಿಎಂಸಿಗೂ ಅಧಿಕ ಪ್ರಮಾಣದ ಹೂಳು ಶೇಖರಣೆಯಾಗಿದೆ. ಹೂಳು ತೆಗೆಸಿದರೆ ಹೆಚ್ಚುವರಿಯಾಗಿ 1 ಟಿಎಂಸಿ ನೀರಿನ ಶೇಖರಣೆಯಾಗುತ್ತದೆ ಅನ್ನುವುದು ಪ್ರಜ್ಞಾವಂತರ ಅಭಿಪ್ರಾಯ.

ಕೇರಳದಲ್ಲಿ ಮಳೆಯಾದರೆ ಭರ್ತಿಯಾಗುವ ಕಬಿನಿ: ಎಚ್‌.ಡಿ.ಕೋಟೆ ತಾಲೂಕು ಕೇರಳ ಗಡಿಭಾಗದಲ್ಲಿದ್ದು, ಕೇರಳ ರಾಜ್ಯದ ವೈನಾಡಿನಲ್ಲಿ ಮಳೆಯಾದಾಗ ಮಾತ್ರ ಕಬಿನಿ ಜಲಾಶಯದ ಒಳಹರಿವು ಹೆಚ್ಚಾಗಿ ಭರ್ತಿಯಾಗುವುದು ಸಹಜ. ಆದರೆ ಈ ಬಾರಿ ಕೇರಳ ರಾಜ್ಯದಲ್ಲಿಯೂ ಮುಂಗಾರು ಮಳೆ ಆರಂಭಗೊಳ್ಳದ ಹಿನ್ನೆಲೆಯಲ್ಲಿ ಜಲಾಶಯದ ಒಳಹರಿವಿನಲ್ಲಿ ಗಣನೀಯವಾಗಿ ಇಳಿಕೆ ಕಂಡು ಬಂದಿದ್ದು ದಿನದಿನಕ್ಕೂ ಜಲಾಶಯದ ಒಡಲು ಬರಿದಾಗಲಾರಂಭಿಸಿದೆ.

ಕಬಿನಿ ಜಲಾಶಯದಲ್ಲಿ 4.09ಟಿಎಂಸಿ (2250) ನೀರಿದೆ. ಜುಲೈ 20ರ ತನಕ ಕುಡಿಯುವ ನೀರಿಗೆ ಜಲಾಶಯದಿಂದ ಯಾವುದೇ ತೊಂದರೆಯಾಗುವುದಿಲ್ಲ. ಅಷ್ಟರಲ್ಲಿ ಮಳೆಯ ಆಗಮನವಾಗು ನಿರೀಕ್ಷೆ ಇದೆ. ಮಳೆಯಾದರೆ ನೀರಿನ ಸಮಸ್ಯೆ ಸ್ವಾಭಾವಿಕವಾಗಿ ದೂರವಾಗುತ್ತದೆ. ಜಲಾಶಯದ ನೀರಿನ ನೈಜತೆ ಅರಿತ ರೈತರೂ ಕೂಡ ಮಳೆಯಾಗದೇ ಇರುವುದರಿಂದ ಕೃಷಿಗಾಗಿ ನೀರಿಗೆ ಒತ್ತಾಯ ಮಾಡದೆ ಸಹಕಾರ ನೀಡುತ್ತಿರುವುದು ಸ್ವಾಗತಾರ್ಹ. ● ಕೆ.ಜನಾರ್ಧನ್‌, ಎಇಇ, ಕಬಿನಿ

ಕಬಿನಿ ಜಲಾಶಯದ ನೀರಿನ ಶೇಖರಣೆಯಲ್ಲಿ ಇಷ್ಟು ಪ್ರಮಾಣದಲ್ಲಿ ಇಳಿಕೆಯಾಗಿರುವುದು ಆತಂಕ ಸೃಷ್ಟಿಸಿದೆ. ಕಬಿನಿ ಅರಣ್ಯ ಮಧ್ಯದಿಂದ ಹಾದು ಹೋಗಿದ್ದು ವನ್ಯಜೀವಿಗಳು ಈ ಬಾರಿ ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ಪ್ರಕೃತಿಯ ಮುನಿಸಿಗೆ ಯಾರೂ ಹೊಣೆ ಯಲ್ಲ. ಈ ತಿಂಗಳಲ್ಲಿ ಬಹುತೇಕ ಮಳೆಯಾ ಗುವ ಸಾಧ್ಯತೆಗಳಿದ್ದು, ನಿರೀಕ್ಷೆ ಪ್ರಮಾಣದ ಮಳೆಯಾಗಿ ಜನ ಜಾನುವಾರುಗಳಷ್ಟೇ ಅಲ್ಲದೆ ವನ್ಯಜೀವಿಗಳ ನೀರಿನ ಹಾಹಾಕಾರ ಕೊನೆಯಾಗಲೆಂದು ಹಾರೈಸೋಣ. ● ಪ್ರದೀಪ್‌, ಹೌಸಿಂಗ್‌ ಬೋರ್ಡ್‌ ನಿವಾಸಿ, ಎಚ್‌.ಡಿ.ಕೋಟೆ

ಎಚ್‌.ಬಿ.ಬಸವರಾಜು.

Advertisement

Udayavani is now on Telegram. Click here to join our channel and stay updated with the latest news.

Next