ಮೈಸೂರು: ನನಗೆ ರಾಜಕೀಯದಿಂದ ನಿವೃತ್ತಿ ಕೊಡಿಸಲು ನಮ್ಮ ಪಕ್ಷದ ವರಿಷ್ಠರು ತಯಾರಿದ್ದಾರೆ. ಹಾಗಾಗಿಯೇ ಚನ್ನಪಟ್ಟಣ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆಯಲಿಲ್ಲ ಎಂದು ಶಾಸಕ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಹೇಳಿದರು.
ನಗರದಲ್ಲಿ ಉಪಚುನಾವಣೆ ಪ್ರಚಾರದಿಂದ ದೂರ ಉಳಿದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನನ್ನು ಪ್ರಚಾರದ ವೇಳೆ ಯಾರೂ ಕರೆಯಲಿಲ್ಲ. ಅಭ್ಯರ್ಥಿ ಕರೆಯಲಿಲ್ಲ. ಅಭ್ಯರ್ಥಿಯ ತಾಯಿಯೂ ಕರೆಯಲಿಲ್ಲ. ಜತೆಗೆ ದೊಡ್ಡಗೌಡರೂ ಕರೆಯಲಿಲ್ಲ. ಅವರಿಗೆ ನನ್ನ ಅವಶ್ಯಕತೆ ಇದ್ದಂತೆ ಕಾಣುತ್ತಿಲ್ಲ. ಅವರಿಗೆ ನಾನು ಬೇಡವಾಗಿದ್ದೇನೆ. ನನ್ನ ಮಗ ಬೇಕಾಗಿದ್ದಾನೆ ಎಂದು ಹೇಳಿದರು.
ಜಿ.ಟಿ.ದೇವೇಗೌಡನಿಗೆ ವಯಸ್ಸಾಗಿದೆ, ರಾಜಕೀಯದಿಂದ ನಿವೃತ್ತಿಯಾಗಲಿ. ಜಿಟಿಡಿ ಬೇಡ, ಮಗನಷ್ಟೇ ಬೇಕು ಎಂಬ ಆದೇಶ ಅವರಿಂದ ಆಗಿದೆ. ನನಗೆ ರಾಜಕೀಯದಿಂದ ನಿವೃತ್ತಿ ಕೊಡಿಸಲು ಅವರು ತಯಾರಿದ್ದಾರೆ ಎಂದು ಹೇಳಿದರು. ನನಗೂ ಕುಮಾರಸ್ವಾಮಿ ನಡುವೆ ಯಾವ ಮುನಿಸು ಇಲ್ಲ. ಅವರು ಆ ರೀತಿ ಬಿಂಬಿಸಿ ಬಿಡುತ್ತಾರೆ, ನಾನೇನು ಮಾಡಲಿ ಹೇಳಿ ಎಂದರು.