ಧಾರವಾಡ : ಮೈಸೂರಿನಲ್ಲಿ ನಡೆದ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಧಾರವಾಡ ಜಿಲ್ಲೆಯಿಂದ ಪ್ರದರ್ಶನಗೊಂಡ ಧಾರವಾಡ ತಳಿ ಎಮ್ಮೆ, ನಮ್ಮ ಹೆಮ್ಮೆ ಟ್ಯಾಗ್‌ಲೈನ್ ಹೊಂದಿದ್ದ ಧಾರವಾಡ ಜಿಲ್ಲಾ ಪಂಚಾಯಿತಿಯ ಸ್ತಬ್ಧಚಿತ್ರವು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದೆ.
ಈ ಜಂಬೂಸವಾರಿಯಲ್ಲಿ ವಿವಿಧ ಜಿಲ್ಲೆಗಳಿಂದ ಸುಮಾರು 31 ಹಾಗೂ ಇತರ ಇಲಾಖೆಗಳ 18 ಸೇರಿ ಒಟ್ಟು 49 ಸ್ತಬ್ಧಚಿತ್ರಗಳು ಭಾಗವಹಿಸಿದ್ದವು. ಈ ಪೈಕಿ ಆಕರ್ಷಕ ಮತ್ತು ಅರ್ಥಪೂರ್ಣವಾಗಿ ರೂಪುಗೊಂಡಿದ್ದ ಧಾರವಾಡ ಪೇಡಾ ಸ್ತಬ್ಧಚಿತ್ರ ವೀಕ್ಷಕರ ಗಮನ ಸೆಳೆದರೆ ಸ್ತಬ್ಧಚಿತ್ರಕ್ಕೆ ನೀಡಿದ ಧಾರವಾಡ ತಳಿ ಎಮ್ಮೆ, ನಮ್ಮ ಹೆಮ್ಮೆ ಟ್ಯಾಗ್‌ಲೈನ್ ನೋಡುಗರ ಕಣ್ಮನ ಸಳೆಯುವ ಮೂಲಕ ಪ್ರಶಸ್ತಿಗೆ ಭಾಜನವಾಗಿದೆ.
ಧಾರವಾಡ ಜಿಲ್ಲಾ ಪಂಚಾಯತಿಯ ಸುಮಾರು 7.80 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡಿದ್ದ ಈ ಸ್ತಬ್ಧಚಿತ್ರವನ್ನು ಜಿ.ಪಂ.ಸಿಇಓ ಸ್ವರೂಪ ಟಿ.ಕೆ. ಅವರು ನೀಡಿದ್ದ ಪರಿಕಲ್ಪನೆ ಹಾಗೂ ವಿಷಯ ವಸ್ತುವಿನ ಆಧಾರದ ಮೇಲೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಕೈ ಕುಸುರಿ ಅಪ್ಪಟ ಗ್ರಾಮೀಣ ಪ್ರತಿಭೆ ಯುವ ಕಲಾವಿದ ಶಶಿಧರ ಗರಗ ಅವರು ಮೈಸೂರು ಹೊರವಲಯದ ಆರ್.ಎಂ.ಸಿ.ಯ ಬಂಡಿಪಾಳ್ಯದಲ್ಲಿ ಸತತ 12 ದಿನಗಳ ಕಾಲ ತಮ್ಮ ಕೈಕಲಾ ಚಳಕದಲ್ಲಿ ನಿರ್ಮಿಸಿದ್ದರು. ಈ ಸ್ತಬ್ಧಚಿತ್ರ ನಿರ್ಮಾಣದಲ್ಲಿ ಪಿಓಪಿ., ಬಿದಿರು, ಬೊಂಬು, ಫ್ಲೈವುಡ್, ಥರ್ಮಾಕೊಲ್ ಮತ್ತು ಪೇಂಟ್ ಬಳಸಿ ಕಲಾವಿದ ತಮ್ಮ ಕೈಯಿಂದ ಸ್ವತಃ ತಯಾರಿಸಿದ್ದರು. ಇದರಲ್ಲಿ ಯಾವುದೇ ಕೃತಕ ರೂಪಕ, ವಸ್ತುಗಳನ್ನು ಬಳಸಿರಲಿಲ್ಲ. ಸಾಹಿತ್ಯ, ಸಂಸ್ಕೃತಿಯೊಂದಿಗೆ ಧಾರವಾಡಕ್ಕೆ ಕೀರ್ತಿ ತಂದ ಧಾರವಾಡ ಪೇಡಾ ಮತ್ತು ಧಾರವಾಡ ಎಮ್ಮೆ ತಳಿಗಳ ಬಗ್ಗೆ ಹೆಚ್ಚು ಪ್ರಚುರ ಪಡಿಸುವ ಉದ್ದೇಶದಿಂದ ಈ ಸ್ತಬ್ಧಚಿತ್ರ ರೂಪಿಸಲಾಗಿತ್ತು. ಅಂದುಕೊಂಡಿದ್ದಕ್ಕಿಂತ ಹೆಚ್ಚು ಖುಷಿ ತಂದಿದೆ. ಪ್ರಥಮ ಸ್ಥಾನ ಬಂದಿರುವುದು ಜಿಲ್ಲೆಗೆ ಹೆಮ್ಮೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಸ್ತಬ್ದಚಿತ್ರದ ಬಗ್ಗೆ ಒಂದಿಷ್ಟು: ಪೇಡಾ ತಯಾರಿಕೆಗಾಗಿ 175 ವರ್ಷಗಳ ಇತಿಹಾಸವಿದ್ದು, ಧಾರವಾಡ ಪೇಡಾ ಜಿಐ ಟ್ಯಾಗನ್ನು ಹೊಂದಿದೆ. ಇದಲ್ಲದೇ ಧಾರವಾಡ ದೇಸಿ ತಳಿ ಎಮ್ಮೆಗೆ ರಾಷ್ಟ್ರೀಯ ಮನ್ನಣೆ ದೊರೆಕಿದೆ. ಈ ಪ್ರಾಮುಖ್ಯತೆ ಪಡೆದ ರಾಜ್ಯದ ಮೊದಲ ಸ್ಥಳೀಯ ಎಮ್ಮೆಯ ತಳಿ ಇದಾಗಿದೆ. ಈ ಮೂಲಕ ಸ್ಥಳೀಯವಾಗಿ ಧಾರವಾಡಿ ತಳಿ ಎಮ್ಮೆ ಎಂದೇ ಕರೆಯಲ್ಪಡುವ ದೇಸೀಯ ತಳಿಯ ಹಾಲಿನಿಂದ ತಯಾರಿಸಿದ ಖೊವಾ (ಖವಾ) ಮತ್ತು ಸಕ್ಕರೆಯಿಂದ ತಯಾರಿಸುವ ಪೇಡಾ ಯಾವುದೇ ರಾಸಾಯನಿಕ ಪದಾರ್ಥಗಳನ್ನು ಹೊಂದಿರುವುದಿಲ್ಲ ಮತ್ತು ಆರೋಗ್ಯ ವೃದ್ಧಿಗಾಗಿ ಇದು ಅಗಾಧವಾದ ಕ್ಯಾಲ್ಸಿಯಂ ಕಣಜವಾಗಿದೆ. ದಿನನಿತ್ಯ ಪೇಡಾ ಉತ್ಪಾದನಾ ಚಟುವಟಿಕೆಯಲ್ಲಿ ಗೌಳಿ ಜನಾಂಗದ ಮಹಿಳೆಯರ ಪಾತ್ರ ಬಹುಮುಖ್ಯವಾಗಿದೆ. ಸಾವಿರಾರು ಮಹಿಳೆಯರಿಗೆ ಉದ್ಯೋಗ ನೀಡುವುದರೊಂದಿಗೆ ಪೇಡಾ ತಯಾರಿಕೆಯು ಧಾರವಾಡ ಜಿಲ್ಲೆಯ ಹೆಮ್ಮೆಯ ಕಿರೀಟವಾಗಿದೆ. ಈ ವಿಷಯ ವಸ್ತುವನ್ನು ಪ್ರಸ್ತುತಪಡಿಸುವ ಸ್ತಬ್ಧಚಿತ್ರವನ್ನು ಈ ಸಲದ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯ ಮೆರವಣಿಗೆಯಲ್ಲಿ ಪ್ರದರ್ಶಿಸಲಾಯಿತು. ಈ ಸ್ತಬ್ಧಚಿತ್ರದ ಕಲೆ, ಥೀಮ್, ರೂಪಕ ಪ್ರಸ್ತುತಿ ಪರಿಗಣಿಸಿ, ಪ್ರಥಮ ಬಹುಮಾನ ನೀಡಲಾಗಿದೆ.