ಮೈಸೂರು: ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಮೀಸಲಿಟ್ಟಿದ್ದ ಹಣದಲ್ಲಿ ಒಂದು ಪೈಸೆ ಕೂಡ ಕಡಿಮೆಯಾಗದಂತೆ ಕೊಡಲಾಗುವುದು. ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಪರಿಶಿಷ್ಟ ವರ್ಗದ ಮಂತ್ರಿಯಾಗಿದ್ದ ನಾಗೇಂದ್ರರ ಮೇಲೂ ಸುಳ್ಳು ಪ್ರಕರಣ ದಾಖಲಿಸಿದ್ದರು. ಈಗ ನಾಗೇಂದ್ರ ಜೈಲಿನಿಂದ ಹೊರಗಡೆ ಬಂದಿದ್ದು ಉಪ ಚುನಾವಣೆ ಬಳಿಕ ಈ ಬಗ್ಗೆ ಒಳ್ಳೆಯ ತೀರ್ಮಾನ ಮಾಡುತ್ತೇನೆ ಎಂದು ಶಾಸಕ ಬಿ. ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳಿವು ನೀಡಿದ್ದಾರೆ.
ಜಿಲ್ಲೆಯ ಎಚ್.ಡಿ.ಕೋಟೆಯಲ್ಲಿ ಮಂಗಳವಾರ ಸುಮಾರು 443.64 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ ಎಚ್.ಡಿ.ಕೋಟೆ ಶಾಸಕ ಸಿ.ಅನಿಲ್ ಕುಮಾರ್ ರಿಗೆ ಸಚಿವ ಸ್ಥಾನ ನೀಡುವಂತೆ ನಾಯಕ ಸಮುದಾಯದವರ ಬೇಡಿಕೆಗೆ ಸ್ಪಂದಿಸಿ ಸಿದ್ದರಾಮಯ್ಯ ಈ ಮಾತುಗಳನ್ನಾಡಿದ್ದಾರೆ. ನಾಗೇಂದ್ರಗೆ ಸ್ಥಾನ ನೀಡಲಾಗುವುದು, ನಾನು ಕೊಟ್ಟ ಮಾತಿನಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ದುರುಪಯೋಗದ ಆರೋಪಗಳನ್ನು ಬಿ. ನಾಗೇಂದ್ರ ನಿರಾಕರಿಸುತ್ತಲೇ ಬಂದಿದ್ದರು. ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಅವರು ಉಪ ಚುನಾವಣೆ ಮುಗಿದ ಬಳಿಕ ಸಂಪುಟಕ್ಕೆ ಸೇರ್ಪಡೆಯಾಗಬಹುದು ಎನ್ನಲಾಗುತ್ತಿದೆ. ತಮ್ಮ ಆದ್ಯತೆ ನಾಗೇಂದ್ರರನ್ನು ಸಂಪುಟಕ್ಕೆ ಮರುಸೇರ್ಪಡೆ ಮಾಡುವುದಾಗಿದ್ದು, ಮುಂದಿನ ದಿನಗಳಲ್ಲಿ ಅನಿಲ್ ಅವರಿಗೂ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಅನುದಾನವನ್ನು ಮೀಸಲಿಟ್ಟಿದ್ದು ನಮ್ಮ ಸರ್ಕಾರ. ಇದನ್ನು ದೇಶದ ಬೇರೆ ಯಾವ ಸರ್ಕಾರವೂ ಕೊಟ್ಟಿರಲಿಲ್ಲ. ವಾಲ್ಮೀಕಿಯವರು ಸಂಸ್ಕೃತದಲ್ಲಿ 20 ಸಾವಿರ ಶ್ಲೋಕಗಳನ್ನು ರಚಿಸಿದ್ದಾರೆ. ಶೂದ್ರ ವರ್ಗದ ಜನ ವಿದ್ಯೆ ಕಲಿಯುವುದೇ ನಿಷಿದ್ಧವಾಗಿದ್ದ ಕಾಲದಲ್ಲಿ ವಿದ್ಯೆ ಕಲಿತು, ಸಂಸ್ಕೃತವನ್ನೂ ಕಲಿತು, ರಾಮಾಯಣ ರಚಿಸಿದ್ದು ಬಹಳ ದೊಡ್ಡ ಹೋರಾಟ ಮತ್ತು ಸಾಧನೆ ಎಂದು ವಿಶ್ಲೇಷಿಸಿದರು.
ಗ್ಯಾರಂಟಿ ಬಗ್ಗೆ ಬಿಜೆಪಿ ಸುಳ್ಳು ಪ್ರಚಾರ:
ರಾಜ್ಯ ಸರ್ಕಾರದ ಗ್ಯಾರಂಟಿಗಳಿಂದ ಸಂಬಳ ಕೊಡಲು, ಅಭಿವೃದ್ಧಿಗೆ ಹಣ ಇಲ್ಲ ಎಂದು ಬಿಜೆಪಿಯವರು ಹಸಿ ಸುಳ್ಳು ಹರಡಿಸುತ್ತಾರೆ. ನಮ್ಮಲ್ಲಿ ಹಣ ಇಲ್ಲದಿದ್ದರೆ ಎಚ್.ಡಿ.ಕೋಟೆಗೆ ಈ ₹443 ಕೋಟಿ ರೂ. ಎಲ್ಲಿಂದ ಬಂತು? ಯಾವುದಾದರೂ ರಾಜ್ಯ ಸರ್ಕಾರಿ ನೌಕರರಿಗೆ ಸಂಬಳ ನಿಂತಿದೆಯಾ? ರಾಜ್ಯದ ಕೋಟಿ ಕೋಟಿ ಫಲಾನುಭವಿಗಳು ನಮ್ಮ ಐದೂ ಗ್ಯಾರಂಟಿ ಯೋಜನೆಗಳ ಫಲವನ್ನು ಪ್ರತೀ ತಿಂಗಳೂ ಪಡೆಯುತ್ತಿದ್ದಾರೆ. ಆದರೂ ಬಿಜೆಪಿಯವರು ಗ್ಯಾರಂಟಿ ಯೋಜನೆಗಳಿಗೂ ಹಣ ಇಲ್ಲ ಎಂದು ಸುಳ್ಳು ಹರಡಿಸುತ್ತಿದ್ದಾರೆ. ಸುಳ್ಳೇ ಬಿಜೆಪಿಯವರ ಮನೆ ದೇವರು ಎಂದು ಸಿದ್ದರಾಮಯ್ಯ ಟೀಕಿಸಿದರು.