ಮೈಸೂರು: ಆಡಳಿತ ತರಬೇತಿ ಸಂಸ್ಥೆ (ಎಟಿಐ) ಅತಿಥಿ ಗೃಹದಲ್ಲಿ 2020 ರಲ್ಲಿ ವಾಸ್ತವ್ಯ ಹೂಡಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಅತಿಥಿ ಗೃಹದ 12 ಬಗೆಯ 20 ವಸ್ತುಗಳನ್ನು ಜಿಲ್ಲಾಧಿಕಾರಿಗಳ ನಿವಾಸಕ್ಕೆ ಕೊಂಡೊಯ್ದಿದ್ದು, ಅವುಗಳನ್ನು ವಾಪಸು ಕೊಡುವಂತೆ ಎಟಿಐ ಸಂಸ್ಥೆಯ ಅಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ಪತ್ರ ಬರೆದಿದ್ದಾರೆ.
ಸಂಸ್ಥೆಯ ಜಂಟಿ ನಿರ್ದೇಶಕರಾದ ಎಸ್.ಪೂವಿತಾ ಅವರು ನ.30ರಂದು ಪತ್ರ ಬರೆದಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ಪತ್ರ ಬರೆಯುತ್ತಿರುವುದು ನಾಲ್ಕನೇ ಬಾರಿ. 2020 ರ ಡಿ.16, 2021ರ ಜ.8 ಹಾಗೂ ಏಪ್ರಿಲ್ 21ರಲ್ಲೂ ಸಂಸ್ಥೆಯು ಪತ್ರ ಬರೆದಿದೆ.
2020 ರ ಅಕ್ಟೋಬರ್ 2 ರಿಂದ ನ.14 ರವರೆಗೆ ಆಗಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಎಟಿಐ ಸಂಸ್ಥೆಯ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದರು. ಜಿಲ್ಲಾಧಿಕಾರಿ ನಿವಾಸಕ್ಕೆ ವಸ್ತುಗಳನ್ನು ಸ್ಥಳಾಂತರಿಸುವಾಗ ಅತಿಥಿಗೃಹದ 2 ಟೆಲಿಫೋನ್ ಟೇಬಲ್‌ಗಳು, 2 ಬಟ್ಟೆ ಹ್ಯಾಂಗರ್, 2 ಬೆತ್ತದ ಕುರ್ಚಿಗಳು, 2 ಟೆಲಿಫೋನ್ ಸ್ಟೂಲ್, 2 ಟೀಪಾಯಿಗಳು, ಒಂದು ಮೈಕ್ರೋವೇವ್ ಒವನ್, ರಿಸೆಪ್ಶನ್ ಟೆಲಿಫೋನ್ ಸ್ಟೂಲ್, ಮಂಚ, ಹಾಸಿಗೆ, 2 ಪ್ಲಾಸ್ಟಿಕ್ ಕುರ್ಚಿ, 2 ಯೋಗಾ ಮ್ಯಾಟ್, 2 ಸ್ಟೀಲ್ ಜಗ್ ಕೊಂಡೊಯ್ದಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ರೋಹಿಣಿ ಸಿಂಧೂರಿ ಅವರು ಜಿಲ್ಲಾಧಿಕಾರಿ ಆಗಿದ್ದಾಗಲೂ ಪತ್ರ ಬರೆದಿದ್ದರೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಜಿಲ್ಲಾಧಿಕಾರಿ ನಿವಾಸದಲ್ಲಿ ಪರಿಕರಗಳು ಇದ್ದಲ್ಲಿ, ವಾಪಸ್ ನೀಡುವಂತೆ ಕೋರಲಾಗಿದೆ.
ಪತಿ ವಿರುದ್ಧ ಭೂ ಅತಿಕ್ರಮಣ ದೂರು
ಹಾಸ್ಯ ನಟ ಮೊಹಮ್ಮದ್ ಅಲಿ ಪುತ್ರ, ಗಾಯಕ ಲಕ್ಕಿ ಅಲಿ ಅವರಿಗೆ ಸೇರಿದ ಫಾರಂ ಹೌಸ್‌ಗೆ ಅತಿಕ್ರಮ ಪ್ರವೇಶಗೈದು, ಆಸ್ತಿ ಕಬಳಿಸಲು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಪತಿ ಸುಧೀರ್ ರೆಡ್ಡಿ ಯತ್ನಿಸಿದ್ದಾರೆ ಎಂದು ದೂರು ದಾಖಲಾಗಿದೆ.
ಈ ಕುರಿತು ಲಕ್ಕಿ ಅಲಿ ಫೇಸ್‌ಬುಕ್‌ನಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದಾರೆ. ಯಲಹಂಕದ ಕೆಂಚೆನಹಳ್ಳಿಯಲ್ಲಿ ತಮ್ಮ ಟ್ರಸ್ಟ್‌ಗೆ ಸೇರಿದ ಫಾರಂ ಹೌಸ್‌ಗೆ ಸುಧೀರ್ ರೆಡ್ಡಿ ಹಾಗೂ ಆತನ ಸಂಬಂಧಿ ಮಧು ರೆಡ್ಡಿ ನುಗ್ಗಿದ್ದಾರೆ. ಇದಕ್ಕೆ ರೋಹಿಣಿ ನೆರವು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಲಕ್ಕಿ ವಿರುದ್ಧ ಲಕ್ಷ್ಮೀನಾರಾಯಣ ಎಂಬವರೂ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.