ತಿರುವನಂತಪುರ: ಸೃಷ್ಟಿಯಲ್ಲಿನ ಕೆಲವು ವಿಚಿತ್ರಗಳು ಮನುಷ್ಯರನ್ನು ತಲ್ಲಣಗೊಳಿಸುತ್ತವೆ. ಒರೆಹಚ್ಚಿ ನೋಡಿದಾಗಷ್ಟೇ ಅವುಗಳ ಸತ್ಯಾಸತ್ಯತೆಯ ಅನಾವರಣವಾಗುತ್ತದೆ. ಅಂಥದ್ದೇ ವೈಚಿತ್ರ್ಯಕ್ಕೆ ಕೇರಳ ಸಾಕ್ಷಿಯಾಗಿದ್ದು, ಅಲ್ಲಿನ ಕುಗ್ರಾಮವೊಂದರಲ್ಲಿ ಭೂಮಿಯಾಳದಿಂದ ನಿಗೂಢ ಶಬ್ದವೊಂದು ಕೇಳಿಬರುತ್ತಿದೆ.
ಹೌದು ಕೊಟ್ಟಾಯಂ ಜಿಲ್ಲೆಯ ಚೆನ್ನಪ್ಪಾಡಿ ಗ್ರಾಮದಲ್ಲಿ ಶುಕ್ರವಾರ 2 ಬಾರಿ ವಿಚಿತ್ರ ಶಬ್ದವೊಂದು ಭೂಮಿಯ ಒಳಗಿಂದ ಕೇಳಿಬಂದಿದೆ. ಇದಕ್ಕೂ ಮುನ್ನ ಈ ವಾರದ ಆರಂಭದಲ್ಲೂ ಸುತ್ತಮುತ್ತಲಿನ ಪ್ರದೇಶದಲ್ಲಿ ಅದೇ ಧ್ವನಿ ಕೇಳಿಬಂದಿದೆ. ಆದರೆ ಪ್ರಕೃತಿಯಲ್ಲಿ ಯಾವುದೇ ಬದಲಾವಣೆಗಳೂ ಆಗಿಲ್ಲ. ಇದರಿಂದ ಜನರು ಭಯಭೀತರಾಗಿದ್ದು, ಪ್ರದೇಶವನ್ನು ಪರಿಶೀಲಿಸಲು ಭೂವಿಜ್ಞಾನಿಗಳನ್ನು ಕೋರಿದ್ದಾರೆ.
ಕೇರಳ ಗಣಿ ಹಾಗೂ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಈಗಾಗಲೇ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ದಾರೆ. ಆದಾಗ್ಯೂ ನಿಗೂಢ ಶಬ್ದ ಪುನರಾವರ್ತಿತ ಆಗುತ್ತಿರುವ ಹಿನ್ನೆಲೆ ವಿವರವಾದ ಪರಿಶೀಲನೆಗೆ ನಡೆಸಲು ಭೂವಿಜ್ಞಾನ ಕೇಂದ್ರ (ಸಿಇಎಸ್)ಕ್ಕೆ ಮನವಿ ಮಾಡಿದ್ದೇವೆ. ತಜ್ಞರ ತಂಡ ಶೀಘ್ರವೇ ಆಗಮಿಸಿ, ಪರಿಶೀಲನೆ ನಡೆಸಲಿದೆ ಎಂದು ಗ್ರಾಮದ ಮುಖ್ಯಸ್ಥರು ತಿಳಿಸಿದ್ದಾರೆ.