Advertisement

ಅಪಾರ್ಟ್‌ಮೆಂಟ್‌ನಿಂದ ಬಿದ್ದು ತಾಯಿ, ಮಗ ನಿಗೂಢ ಸಾವು

12:33 PM Mar 07, 2018 | Team Udayavani |

ಮಹದೇವಪುರ/ಬೆಂಗಳೂರು: ಕಾಡುಗೋಡಿಯ ಬೆಳತೂರಿನ ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಿಂದ ಬಿದ್ದು ಉತ್ತರ ಕರ್ನಾಟಕ ಮೂಲದ ತಾಯಿ ಮತ್ತು ಮಗ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ.

Advertisement

ಯಾದಗಿರಿಯ ಶಹಪುರ ತಾಲೂಕಿನ ಸುಂದರಮ್ಮ (60) ಮತ್ತು ಪುತ್ರ ಮೌನೇಶ್‌(36) ಮೃತರು. ಕೋಲಾರದ ಡಿಸಿಬಿ (ಜಿಲ್ಲಾ ಅಪರಾಧ ವಿಭಾಗ)ಯ ಇನ್‌ಸ್ಪೆಕ್ಟರ್‌ ಚಂದ್ರಪ್ಪ ಅವರ ಫ್ಲ್ಯಾಟ್‌ನಲ್ಲೇ ಘಟನೆ ನಡೆದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. 

ಯಾದಗಿರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿರ್ವಾಹಕನಾಗಿರುವ ಮೌನೇಶ್‌ ಮತ್ತು ಇನ್‌ಸ್ಪೆಕ್ಟರ್‌ ಚಂದ್ರಪ್ಪ ಸಹೋದರಿ ಮಂಜುಳ ಪರಸ್ಪರ ಪ್ರೀತಿಸುತ್ತಿದ್ದು, ಇದೇ ವಿಚಾರವಾಗಿ ಮಾತನಾಡಲು ಚಂದ್ರಪ್ಪ ಐದು ದಿನಗಳ ಹಿಂದೆ ತಾಯಿ, ಮಗನನ್ನು ತಮ್ಮ ಫ್ಲ್ಯಾಟ್‌ಗೆ ಕರೆಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಯಾದಗಿರಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಚಂದ್ರಪ್ಪ ಸಹೋದರಿ ಮಂಜುಳಾಗೂ ಮೌನೇಶ್‌ಗೂ ಪರಿಚಯವಿತ್ತು. ಬಳಿಕ ಬೆಂಗಳೂರಿಗೆ ಬಂದಿದ್ದ ಮಂಜುಳಾ, ಬಿಎಡ್‌ ಪರೀಕ್ಷೆ ನಿಮಿತ್ತ ಯಾದಗಿರಿಗೆ ಹೋದಾಗ ಮೌನೇಶ್‌ ಜತೆ ಪ್ರೇಮಾಂಕುರವಾಗಿದೆ. ಈ ವಿಚಾರ ತಿಳಿದ ಮಂಜುಳಾ ಪೋಷಕರು ಮೌನೇಶ್‌ಗೆ ಬುದ್ದಿವಾದ ಹೇಳಿದ್ದರು. ಆದರೂ ಇಬ್ಬರು ಒಮ್ಮೆ ಮನೆ ಬಿಟ್ಟು ಓಡಿ ಹೋಗಿದ್ದರು.

ಮೌನೇಶ್‌ ಅನ್ಯ ಜಾತಿಯವನಾಗಿದ್ದು, ಈಗಾಗಲೇ ಮದುವೆಯಾಗಿದೆ. ಹೀಗಾಗಿ ಇನ್‌ಸ್ಪೆಕ್ಟರ್‌ ಆಗಿದ್ದ ಚಂದ್ರಪ್ಪ ಮೌನೇಶ್‌ನನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಈ ಮಧ್ಯೆ 10 ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಂಜುಳಾ ಮೌನೇಶ್‌ ಜತೆ ವಿವಾಹವಾಗಿದ್ದರು ಎನ್ನಲಾಗಿದೆ. ಈ ಸಂಬಂಧ ಚಂದ್ರಪ್ಪ ಕಾಡುಗೋಡಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

Advertisement

ಐದು ದಿನಗಳ ಹಿಂದೆ ಕರೆಸಿಕೊಂಡಿದ್ದ ಚಂದ್ರಪ್ಪ: ಕೋಪಗೊಂಡಿದ್ದ ಚಂದ್ರಪ್ಪ, ಮೌನೇಶ್‌ ಮೇಲೆ ಅನುಮಾನಗೊಂಡು ತಾಯಿಯೊಂದಿಗೆ ಕೂಡಲೇ ಬರುವಂತೆ ಬೆಂಗಳೂರಿಗೆ ಕರೆಸಿಕೊಂಡಿದ್ದರು. ಯಾದಗಿರಿಯಿಂದ ಬಂದ ತಾಯಿ, ಮಗನಿಗೆ ತಮ್ಮ ಫ್ಲ್ಯಾಟ್‌ನಲ್ಲೇ ಇಟ್ಟುಕೊಂಡು ಸಹೋದರಿ ಬಗ್ಗೆ ವಿಚಾರಣೆ ನಡೆಸಿದ್ದಾರೆ.

ಮಂಗಳವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಇದಕ್ಕಿದ್ದಂತೆ ತಾಯಿ, ಮಗ ಮೇಲಿಂದ ಬಿದ್ದು ಸಾವಿಗೀಡಾಗಿದ್ದಾರೆ. ಭದ್ರತಾ ಸಿಬ್ಬಂದಿ, ಪೊಲೀಸರಿಗೂ ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್‌ ಸಿಂಗ್‌ ಮತ್ತು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಅಬ್ದುಲ್‌ ಅಹ್ಮದ್‌ ಹಾಗೂ ಕಾಡುಗೋಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ದೂರಿನ ಬಳಿಕ ತನಿಖೆ: ಘಟನೆ ಸಂಬಂಧ ಇದುವರೆಗೂ ಯಾವುದೇ ಸೆಕ್ಷನ್‌ ಅಡಿಯಲ್ಲಿ ಪ್ರಕರಣ ದಾಖಲಿಸಿಲ್ಲ. ಯಾದಗಿರಿಯಿಂದ ಮೌನೇಶ್‌ ಪತ್ನಿ ಬೆಂಗಳೂರಿಗೆ ಬಂದ ಬಳಿಕ ನೀಡುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ ಎಂದು ಡಿಸಿಪಿ ಅಬ್ದುಲ್‌ ಅಹ್ಮದ್‌ ತಿಳಿಸಿದ್ದಾರೆ.

ಕಲೆಗಳು ಪತ್ತೆ: ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌, ಮೃತ ದೇಹಗಳ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ. ಚಂದ್ರಪ್ಪ ಅಪಾರ್ಟ್‌ಮೆಂಟ್‌ನಲ್ಲಿ ಅಕ್ರಮವಾಗಿ ಬಂಧನದಲ್ಲಿ ಇಟ್ಟುಕೊಂಡಿದ್ದರಾ ಎಂಬ ಬಗ್ಗೆ ತನಿಖೆಗೆ ಸೂಚಿಸಿದ್ದೇನೆ. ಸದ್ಯ ಚಂದ್ರಪ್ಪನನ್ನು ವಿಚಾರಣೆ ನಡೆಸಲಾಗುತ್ತಿದೆ. ಮತ್ತೂಂದೆಡೆ ಘಟನೆ ಬಳಿಕ ಚಂದ್ರಪ್ಪ ಫ್ಲ್ಯಾಟ್‌ಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಇದು ಅನುಮಾನಕ್ಕೆ ಕಾರಣವಾಗಿದೆ ಎಂದರು.

ನನ್ನ ಕೈವಾಡವಿಲ್ಲ: ಸಹೋದರಿ ಮಂಜುಳಾ ನಾಪತ್ತೆಯಾಗಿದ್ದರಿಂದ ಆತಂಕಗೊಂಡು ಆಕೆಗೆ ಪರಿಚಯವಿದ್ದ ಮೌನೇಶ್‌ ಅನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದೆ. ನನ್ನ ಫ್ಲಾಟಿನಲ್ಲಿ ಉಳಿಸಿಕೊಂಡು ಆಕೆಯನ್ನು ಹುಡುಕಲು ಸಹಾಯ ಮಾಡುತ್ತಿದ್ದರು. ಮಂಗಳವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಫ್ಲಾಟಿನ ಐದನೇ ಮಹಡಿಯಿಂದ ಬಿದ್ದು ಸಾವಿಗೀಡಾಗಿದ್ದಾರೆ. ಏತಕ್ಕಾಗಿ ಹೀಗೆ ಮಾಡಿದ್ದಾರೆ ಎಂಬುದು ನನಗೂ ತಿಳಿದಿಲ್ಲ. ಇದರಲ್ಲ ನನ್ನ ಕೈವಾಡವೇನೂ ಇಲ್ಲ ಎಂದು ಇನ್‌ಸ್ಪೆಕ್ಟರ್‌  ಚಂದ್ರಪ್ಪ ವಿಚಾರಣೆ ವೇಳೆ ಹೇಳಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next