Advertisement

ಎಲ್ಲಾ ರೈಲು ಸೇವೆ ಆರಂಭಿಸುವಂತೆ ಮನವಿ

05:53 PM Jul 01, 2022 | Team Udayavani |

ಮೈಸೂರು: ಕೊರೊನಾ ಪೂರ್ವದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಎಲ್ಲಾ ರೈಲು ಸೇವೆಗಳನ್ನು ಪುನರ್‌ ಆರಂಭಿಸುವಂತೆ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯರು ಸಲಹೆ ನೀಡಿದರು.

Advertisement

ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಗುರುವಾರ ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮೈಸೂರು ವಿಭಾಗದ ವ್ಯಾಪ್ತಿಯಲ್ಲಿ ಬರುವ ಪ್ರಯಾಣಿಕರ ಸೇವೆಗಳ ಸುಧಾರಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಯಿತು.

ನಾಲ್ಕು ದಿನಗಳಿಗೆ ವಿಸ್ತರಿಸಿ: ದಾವಣಗೆರೆ, ಹರಿಹರ ಮತ್ತು ಹಾವೇರಿ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಸೌಲಭ್ಯ ಹೆಚ್ಚಿಸುವುದು, ಮೈಸೂರಿನಿಂದ ದಾದರ್‌, ಅಜ್ಮಿರ್‌ ಮತ್ತು ನಿಜಾಮುದ್ದಿನ್‌ ನಿಲ್ದಾಣಗಳಿಗೆ ಈಗ ಇರುವ ಸಾಪ್ತಾಹಿಕ ಮತ್ತು ವಾರಕ್ಕೆ ಎರಡು ದಿನದ ಸೇವೆಯಿಂದ ವಾರಕ್ಕೆ ನಾಲ್ಕು ದಿನಗಳಿಗೆ ವಿಸ್ತರಿಸಲು ಸದಸ್ಯರು ಸಲಹೆ ನೀಡಿದರು.

ಮತ್ತಷ್ಟು ವೇಗಗೊಳಿಸಿ: ಮೈಸೂರು-ಬೆಂಗಳೂರು ಮಧ್ಯೆ ಓಡಾಡುವ ಎಲ್ಲಾ ಸೂಪರ್‌ ಫಾಸ್ಟ್‌ ರೈಲುಗಳನ್ನು ಮತ್ತಷ್ಟು ವೇಗಗೊಳಿಸುವುದು. ಮೈಸೂರು ಮತ್ತು ಬೆಂಗಳೂರು ನಡುವೆ ಓಡುವ ಮಾಲ್ಗುಡಿ ಎಕ್ಸ್‌ಪ್ರೆಸ್‌ ನಲ್ಲಿ ಹವಾ ನಿಯಂತ್ರಿತ ಬೋಗಿ ಹೆಚ್ಚಿಸುವುದು. ಮೈಸೂರಿನಿಂದ ಹಾಸನ ಮತ್ತು ಮಂಗಳೂರು ಮೂಲಕ ಕರ್ನಾಟಕದ ಕರಾವಳಿ ಪ್ರದೇಶದೊಂದಿಗೆ ಸಂಪರ್ಕಿಸುವ ಹೊಸ ರೈಲು ಸೇವೆಗಳು, ತಾಳಗುಪ್ಪ, ಶಿವಮೊಗ್ಗ ಟೌನ್‌ನಿಂದ ಚೆನ್ನೈ ಮತ್ತು ಮೈಸೂರು ಕಡೆಗೆ
ಸಂಚರಿಸಬೇಕು.

ಕಾಮಗಾರಿ ಮುಗಿಸಿ: ಶಿವಮೊಗ್ಗ ನಿಲ್ದಾಣದಿಂದ ಸಿಕಂದರಾಬಾದ್‌ ಮತ್ತು ಭುವನೇಶ್ವರದಂತಹ ವಿವಿಧ ರಾಜ್ಯಗಳ ರಾಜಧಾನಿ ಸಂಪರ್ಕಿಸುವ ಹೊಸ ರೈಲು ಸೇವೆ ಪ್ರಾರಂಭಿಸುವುದು ಹಾಗೂ ಶಿವಮೊಗ್ಗ ಸಮೀಪದ ಕೋಟೆಗಂಗೂರಿನಲ್ಲಿ ಮಂಜೂರಾಗಿರುವ ಬೋಗಿ ಆರೈಕೆ ಕೇಂದ್ರದ ಕಾಮಗಾರಿ ವೇಗಗೊಳಿಸಲು ಸದಸ್ಯರು ವಿನಂತಿಸಿದರು. ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ರಾಹುಲ್‌ ಅಗರ್ವಾಲ್‌ ಅವರು, ಎಲ್ಲಾ ಸಲಹೆಗಳನ್ನು ಪರಿಗಣಿಸಲಾಗುವುದು ಮತ್ತು ಮುಂದಿನ ಸಮಯಾವಧಿಯಲ್ಲಿ ಸೂಕ್ತವಾಗಿ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

Advertisement

ಸಭೆಯಲ್ಲಿ ಸಮಿತಿ ಸದಸ್ಯರಾದ ಶಾಸಕ ಸಿ.ಎಸ್‌ .ನಿರಂಜನ್‌, ದಾವಣಗೆರೆ ಪ್ರಯಾಣಿಕರ ಸಮಿತಿಯ ಪ್ರಧಾನ ಕಾರ್ಯದರ್ಶಿ ರೋಹಿತ್‌ ಕುಮಾರ್‌ ಎಸ್‌.ಜೈನ್‌, ನಂಜನಗೂಡು ಕೈಗಾರಿಕಾ ಸಂಘದ ಕಾರ್ಯದರ್ಶಿ ಬಿ. ಎಸ್‌.ಚಂದ್ರಶೇಖರ, ಎಂಎಂಇಸಿ ಸೈಡಿಂಗ್‌ ಲಾಜಿಸ್ಟಿಕ್ಸ್‌ ಸಲಹೆಗಾರರಾದ ಶ್ರೀನಿವಾಸ್‌ ಮೂರ್ತಿ, ಮೈಸೂರು ವಾಣಿಜ್ಯ ಮಂಡಳಿ ಗೌರವ ಖಜಾಂಚಿ ಮಹಾವೀರ್‌ ಚಂದ್‌ ಬನ್ಸಾಲಿ, ಹಾಸನ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಅಧ್ಯಕ್ಷ ಎಂ.ಧನಪಾಲ್‌, ಶಿವಮೊಗ್ಗ ಜಿಲ್ಲಾ ಮಂಡಳಿ ಮತ್ತು ವಾಣಿಜ್ಯ ಕೈಗಾರಿಕಾ ನಿರ್ದೇಶಕ ಎಸ್‌.ಎಸ್‌.ಉದಯ್‌ ಕುಮಾರ್‌, ಲಕ್ಷ್ಮೀಸಾಗರ, ಚೆಲುವೇಗೌಡ, ಚಿನ್ನಯ್ಯ ಭಾಗವಹಿಸಿದ್ದರು.

2020-21 ಮತ್ತು 2021-22ರ ಆರ್ಥಿಕ ವರ್ಷಗಳಲ್ಲಿ ಮೈಸೂರು ವಿಭಾಗದ ಸಾಧನೆಗಳು ಗಮನಾರ್ಹ ವಾಗಿದೆ. ವಿಭಾಗದಾದ್ಯಂತ ವಿವಿಧ ನಿಲ್ದಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹಲವು ಉಪಕ್ರಮ ಕೈಗೊಳ್ಳಲಾಗಿದೆ. ರೈಲು ಬಳಕೆದಾರರಿಗೆ ಉತ್ತಮ ಸೌಲಭ್ಯ ಅಭಿವೃದ್ಧಿಪಡಿಸಲು, ಒದಗಿಸಲು ಬದ್ಧವಾಗಿದೆ.
●ರಾಹುಲ್‌ ಅಗರ್ವಾಲ್‌, ನೈರುತ್ಯ ರೈಲ್ವೆ
ವಿಭಾಗೀಯ ವ್ಯವಸ್ಥಾಪಕ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next