ಮೈಸೂರು: ಮೈಸೂರು ಜಿಲ್ಲಾ ಪೊಲೀಸರು ಇಂದು ತ್ವರಿತ ಕಾರ್ಯಾಚರಣೆ ನಡೆಸಿ, ನಾಲ್ವರು ಅಂತರಾಜ್ಯ ಗಾಂಜಾ ಸಾಗಣೆದಾರರನ್ನು ಬಂಧಿಸಿದ್ದಾರೆ.
ಕೇರಳ ಮೂಲದ ಮಹಮ್ಮದ್ ಶಫಿ, ಸಲೀಂ, ಪಫೀ, ಇಬ್ರಾಹಿಂ ಕುಟ್ಟಿ ಬಂಧಿತ ಆರೋಪಿಗಳು ಎಂದು ಮಾಹಿತಿ ತಿಳಿದು ಬಂದಿದೆ. ಈ ಕುರಿತು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ ರಿಷ್ಯಂತ್ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.
ಆರೋಪಿಗಳು ಆಂಧ್ರಪ್ರದೇಶದಿಂದ ಕರ್ನಾಟಕದ ಮೂಲಕ ಗೂಡ್ಸ್ ಆಟೋದಲ್ಲಿ ಟೊಮೊಟೊ ಹಣ್ಣಿನ ಕ್ರೇಟ್ ಗಳ ನಡುವೆ ಗಾಂಜಾ ಇಟ್ಟು ಕೇರಳ ರಾಜ್ಯಕ್ಕೆ ಸಾಗಿಸುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಮೈಸೂರು ಜಿಲ್ಲಾ ಪೊಲೀಸರು ನಾಲ್ವರನ್ನು ಬಂಧಿಸಿ, 86 ಕೆಜಿ 300 ಗ್ರಾಂ ಗಾಂಜಾ ಹಾಗೂ ಗಾಂಜಾ ಸಾಗಿಸುತ್ತಿದ್ದ ವಾಹನ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಮೈಸೂರು: ಅಪರಿಚಿತ ವ್ಯಕ್ತಿಯ ಕೊಲೆ ಶಂಕೆ! ಸ್ಥಳದಲ್ಲಿತ್ತು 10ಕ್ಕೂ ಹೆಚ್ಚು ಗುರುತಿನ ಚೀಟಿಗಳು
ಮೈಸೂರು ನಂಜನಗೂಡು ಹೆದ್ದಾರಿಯಲ್ಲಿರುವ ಏರ್ ಪೋರ್ಟ್ ಬಳಿ ಪೋಲೀಸರು ಬೀಸಿದ ಬಲೆಗೆ ಆರೋಪಿಗಳು ಬಿದ್ದಿದ್ದಾರೆ. ಈ ಸಂಬಂಧ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.