Advertisement

ಮೈಸೂರು ಪೊಲೀಸ್‌ ಮಹಲ್‌ 

01:29 AM Mar 10, 2018 | |

ಮೈಸೂರು: ಅರಮನೆಗಳ ನಗರಿ ಮೈಸೂರಿನಲ್ಲಿ ಅರಮನೆ ಮಾದರಿಯ ಮತ್ತೂಂದು ಸರಕಾರಿ ಕಟ್ಟಡ ತಲೆ ಎತ್ತಿದ್ದು, ಶನಿವಾರ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ. ಸುಮಾರು 19 ಕೋಟಿ ರೂ. ವೆಚ್ಚದಲ್ಲಿ ನಗರದ ನಜರ್‌ಬಾದ್‌ನಲ್ಲಿ ನಗರ ಪೊಲೀಸ್‌ ಆಯುಕ್ತರ ಕಚೇರಿ ಕಟ್ಟಡವನ್ನು ನಿರ್ಮಿಸಲಾಗಿದೆ. ನಗರ ಪೊಲೀಸ್‌ ಆಯುಕ್ತರ ಕಚೇರಿಯ ನೂತನ ಕಟ್ಟಡ ನಿರ್ಮಾಣಕ್ಕೆ ಸರಕಾರ 2013ರ ಡಿಸೆಂಬರ್‌ನಲ್ಲಿ ಮಂಜೂರಾತಿ ನೀಡಿ, 16.76 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು. 2018ರ ಜನವರಿಯಲ್ಲಿ ಈ ಕಟ್ಟಡ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 2.60 ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿತ್ತು.

Advertisement

ನೂತನ ಕಟ್ಟಡದ ಕೆಳನೆಲಮಹಡಿಯಲ್ಲಿ ಡಿಸಿಪಿ ಕೇಂದ್ರ ಸ್ಥಾನ ಮತ್ತು ಅಪರಾಧ- ಅವರ ಕೊಠಡಿ, ನಗರ ಅಪರಾಧ ದಾಖಲಾತಿಗಳ ವಿಭಾಗ, ವಿದೇಶಿಯರ ಶಾಖೆ, ಪಾಸ್‌ಪೋರ್ಟ್‌, ಪೊಲೀಸ್‌ ವೆರಿಫಿಕೇಷನ್‌ ಒಳಗೊಂಡ ನಗರ ವಿಶೇಷ ವಿಭಾಗ ಇರಲಿವೆ. ಅಲ್ಲದೆ ಕಂಪ್ಯೂಟರ್‌ ಮತ್ತು ಫೋಟೋಗ್ರಫಿ ಶಾಖೆ, ರೆಕಾರ್ಡ್‌ ರೂಂ, ಕೆಫೆಟೆರಿಯಾಗಳೂ ಇಲ್ಲೇ ಇರಲಿವೆ.

ನೆಲ ಮಹಡಿಯಲ್ಲಿ ಪೊಲೀಸ್‌ ಆಯುಕ್ತರ ಕೊಠಡಿ, ಕಾನೂನು ಮತ್ತು ಸುವ್ಯವಸ್ಥೆ ವಿಭಾದ ಡಿಸಿಪಿ, ಕಾನೂನು ಮತ್ತು ಆದೇಶ ವಿಭಾಗ, ರಿಸೆಪ್ಷನ್‌ ಡೆಸ್ಕ್,  ಸುಸಜ್ಜಿತ ಸಭಾಂಗಣ ಇರಲಿವೆ. ಮೊದಲ ಮಹಡಿಯಲ್ಲಿ ವೈರ್‌ಲೆಸ್‌ ವಿಭಾಗ, ಡಯಲ್‌ 100, ಸುರಕ್ಷಾ ಆ್ಯಪ್‌, ಟ್ರಾಫಿಕ್‌ ಆಟೋಮೇಷನ್‌ ಕೇಂದ್ರ, ಸಿಸಿಟಿವಿ ವಿಭಾಗ, ಡಿಸಿಪಿ ಕೊಠಡಿ, ಗ್ರಂಥಾಲಯ ಹಾಗೂ ಬೆರಳು ಮುದ್ರೆ ಘಟಕಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.

ಅದ್ಭುತ ವಾಸ್ತುಶಿಲ್ಪ, ಸಕಲಸೌಲಭ್ಯ
ಗೌತಮ್‌ ಪೈ ಅವರ ಮಣಿಪಾಲ್‌ ಎನರ್ಜಿ ಮತ್ತು ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ ವತಿಯಿಂದ ನಗರ ಪೊಲೀಸ್‌ ಆಯುಕ್ತರ ನೂತನ ಕಟ್ಟಡ ನಿರ್ಮಾಣ ಯೋಜನೆಯನ್ನು ಪೂರ್ಣಗೊಳಿಸ ಲಾಗಿದೆ. 19ನೇ ಶತಮಾನದ ಪಾರಂಪರಿಕ ಶೈಲಿ ಕಲೋನಿಯಲ್‌ ಮತ್ತು ಇಂಡೋ ಸರ್ಸನಿಕ್‌ ಶೈಲಿಯಲ್ಲಿ ಪರಿಸರ ಸ್ನೇಹಿ ಕಟ್ಟಡ ನಿರ್ಮಿಸಲಾಗಿದೆ. ಒಟ್ಟು 45 ಸಾವಿರ ಚದರ ಅಡಿ ವಿಸ್ತೀರ್ಣದ ಕಟ್ಟಡ ವಿಶಾಲವಾದ ಆವರಣ ಹೊಂದಿದೆ. 150 ಆಸನಗಳ ಸಾಮರ್ಥ್ಯವಿರುವ ಸಭಾಂಗಣ, ಎರಡು ಮಹಡಿ, ಲಿಫ್ಟ್ಗಳನ್ನು ಹೊಂದಿದ್ದು, ಈ ಸುಂದರ ಕಟ್ಟಡದ ವಿನ್ಯಾಸ ವನ್ನು ಹೆಸರಾಂತ ವಾಸ್ತು ಶಿಲ್ಪ ಸಂಸ್ಥೆ ಸೈಮನ್‌ ಆ್ಯಂಡ್‌ ಅಸೋಸಿಯೇಟ್‌ ಮಾಡಿದೆ.

ಇಂದು ಉದ್ಘಾಟನೆ  
ನಗರ ಪೊಲೀಸ್‌ ಆಯುಕ್ತರ ಕಚೇರಿ ಕಟ್ಟಡವನ್ನು  ಸಿಎಂ ಸಿದ್ದರಾಮಯ್ಯ ಅವರು ಶನಿವಾರ ಸಂಜೆ 6ಗಂಟೆಗೆ ಉದ್ಘಾಟಿಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next