Advertisement

ರಾಜ್ಯದಲ್ಲಿ ಸುರಿದ ಭಾರೀ ಮಳೆ : ಸೋರುತಿಹುದು ಅರಮನೆ ಮಾಳಿಗಿ!

07:53 AM Nov 24, 2021 | Team Udayavani |

ಮೈಸೂರು: ಕೆಲವು ದಿನಗಳಿಂದ ಸತತವಾಗಿ ಬಿದ್ದ ಮಳೆಯಿಂದಾಗಿ ವಿಶ್ವವಿಖ್ಯಾತ ಮೈಸೂರಿನ ಅಂಬಾ ವಿಲಾಸ ಅರಮನೆ ಮೇಲ್ಚಾವಣಿ ಸೋರುತ್ತಿದ್ದು ಗೋಡೆಗಳು ತೇವಗೊಂಡಿವೆ. ಇದರಿಂದಾಗಿ ರಾಜ ವಂಶಸ್ಥರು ಆತಂಕದಿಂದಲೇ ನೆಲೆಸುವಂತಾಗಿದೆ.

Advertisement

ರಾಜವಂಶಸ್ಥರು ವಾಸಿಸುತ್ತಿರುವ ಅರಮನೆಯ ಭಾಗದ ಮೇಲ್ಚಾವಣಿಯಿಂದ ನೀರು ಹೆಚ್ಚಿನ ಪ್ರಮಾ ಣದಲ್ಲಿ ಸೋರುತ್ತಿದೆ. ಗೋಡೆಗಳು ನೀರಿನಿಂದ ತೇವಗೊಂಡಿವೆ. ಚಾವಣಿಯ ಪ್ಲಾಸ್ಟರಿಂಗ್‌ ಉದುರಿ ಬೀಳುತ್ತಿವೆ. ಆ ಸಮಯದಲ್ಲಿ ಅಲ್ಲಿ ಯಾರೂ ಇಲ್ಲದಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ.

ನೆಲಹಾಸಿನ ಟೈಲ್ಸ್‌ಗಳೂ ಕಿತ್ತು ಹೊರಬಂದಿವೆ ಎಂದು ಸ್ವತಃ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಅಳಲು ತೋಡಿಕೊಂಡಿದ್ದಾರೆ. ಅರಮನೆಯ ಕೆಲ ಭಾಗಗಳು ಈ ಹಿಂದೆಯೇ ದುರಸ್ತಿ ಕಂಡಿವೆ. ಆದರೆ, ಈ ಬಾರಿ ಸತತ ಮಳೆಯಿಂದ ಹೆಚ್ಚಿನ ಹಾನಿಗೊಳಗಾಗಿದೆ.

ಪ್ರಮೋದಾ ದೇವಿ ಒಡೆಯರ್‌ ಅವರು ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್‌ ಪ್ರತಿಷ್ಠಾನದಿಂದ ಹಾನಿಗೀಡಾದ ಕರಿಕಲ್ಲು ತೊಟ್ಟಿ ಭಾಗದ ಚಂದ್ರಕಲಾ ತೊಟ್ಟಿ ಮತ್ತಿ ತರ ಕಡೆ ತಜ್ಞರ ಮಾರ್ಗದರ್ಶನದಲ್ಲಿ ಕೈಗೊಂಡಿ ರುವ ದುರಸ್ತಿ ಕಾರ್ಯ ನಡೆಯುತ್ತಿರುವಾಗಲೇ ಇತರೆಡೆ ಹಾನಿ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ, ದುರಸ್ತಿ ಕಾರ್ಯ ಕೈಗೊಳ್ಳಲು ರಾಜ್ಯ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ

ನಮಗೆ ಸರ್ಕಾರ ಕೊಟ್ಟಷ್ಟು ತೊಂದ್ರೆ ಬೇರಾರಿಗೂ ಕೊಟ್ಟಿಲ್ಲ

Advertisement

ಇಡೀ ದೇಶದಲ್ಲಿ ಸ್ವಾತಂತ್ರ್ಯ ನಂತರ ಸರ್ಕಾರದಿಂದ ನಾವು ಪಟ್ಟಷ್ಟು ತೊಂದರೆಯನ್ನು ಬೇರೆ ಯಾವ ರಾಜಮನೆತನವೂ ಅನುಭವಿಸಿಲ್ಲ. ನಮ್ಮದೇನೂ ತಪ್ಪಿಲ್ಲ. ಆದರೂ, ನಾವು ನೋವು ಅನುಭವಿಸ ಬೇಕಿದೆ.

ನ್ಯಾಯಾಲಯಗಳು ನಮ್ಮ ಪರ ತೀರ್ಪು ನೀಡಿದರೂ ಸರ್ಕಾರ ಇದನ್ನು ಜಾರಿಗೆ ತರುತ್ತಿಲ್ಲ… ಮೈಸೂರಿನ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಅವರು ಮಂಗಳವಾರ “ಉದಯವಾಣಿ’ಯೊಂದಿಗೆ ಮಾತಾಡುತ್ತಾ ತಮ್ಮ ನೋವನ್ನು ತೋಡಿಕೊಂಡರು. ರಾಜ್ಯ ಸರ್ಕಾರದ ಬಗ್ಗೆ ಅಸಮಾಧಾನ ಹೊರಹಾಕಿ, ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್‌ ಪ್ರತಿಷ್ಠಾನದಿಂದ ಕಾರ್ಯಗಳನ್ನು ಕೈಗೆತ್ತಿ ಕೊಂಡಿದ್ದರೂ ರಾಜ್ಯ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆಯದಿರುವುದಕ್ಕೆ ಬೇಸರಪಟ್ಟರು.

ನಾನು ರಾಜ್ಯ ಸರ್ಕಾರದಿಂದ ಎಲ್ಲ ಅನುಮತಿಗಳನ್ನು ಪಡೆದು ಅರಮನೆಯ ಕೆಲವು ಭಾಗದಲ್ಲಿ ಪಾರಂಪರಿಕ ಕಟ್ಟಡದ ಸಂರಕ್ಷಣೆಗಾಗಿ ನನ್ನ ಕೈಯಿಂದ ಹಣ ವೆಚ್ಚ ಮಾಡಿ ದುರಸ್ತಿ ಕಾರ್ಯ ನಡೆಸುತ್ತಿದ್ದೇನೆ. ಆದರೆ, ಸರ್ಕಾರದಿಂದ ಈ ಹಣ ನಮಗೆ ಮರು ಪಾವತಿಯಾಗಿಲ್ಲ. ಸರ್ಕಾರಕ್ಕೆ ಪತ್ರ ಬರೆದರೂ ಪ್ರತಿಕ್ರಿಯೆ ಬರುತ್ತಿಲ್ಲ.

ಅರಮನೆಯ ನಮ್ಮ ಜಾಗದಲ್ಲಿ ವಾಸವಿದ್ದರೂ ರಾಜ್ಯ ಸರ್ಕಾರದ ಕೆಲವರು ನಾವೇನೋ ಅವರ ಜಾಗದಲ್ಲಿ ವಾಸಿಸುತ್ತಿದ್ದೇವೆ ಎಂಬ ಧೋರಣೆ ತಳೆದಿದ್ದಾರೆ. ಏಕೆ ಈ ಧೋರಣೆ ಅಂತ ಗೊತ್ತಾಗುತ್ತಿಲ್ಲ. ಮನಸ್ಸಿಗೆ ತುಂಬಾ ನೋವಾಗುತ್ತದೆ ಎಂದು ಪ್ರಮೋದಾದೇವಿ ಒಡೆಯರ್‌ ಗದ್ಗದಿತರಾದರು.

ಅರಮನೆ ಸ್ವಾಧೀನಪಡಿಸಿಕೊಳ್ಳುವ ರಾಜ್ಯ ಸರ್ಕಾರದ ಕಾಯ್ದೆ ವಿರುದ್ಧ ಕೋರ್ಟ್‌ನಲ್ಲಿ ದಾವೆ ಹೂಡಿದ್ದೇವೆ. ಈ ದಾವೆ ಇತ್ಯರ್ಥವಾಗುವವರೆಗೂ ಮೈಸೂರು ಅರಮನೆ ನಿರ್ವಹಣೆಯನ್ನು ರಾಜ್ಯ ಸರ್ಕಾರ ಮಾಡಬೇಕು. ಅರಮನೆ ವೀಕ್ಷಿಸಲು ಬರುವವರಿಂದ ಪ್ರವೇಶ ದರ ಪಡೆಯಲಾಗುತ್ತದೆ. ಈ ಹಣದಿಂದಲೇ ಅರಮನೆ ಕಟ್ಟಡದ ನಿರ್ವಹಣೆ ಮಾಡಬಹುದು. ಆದರೆ, ಸರ್ಕಾರ ಮಾಡುತ್ತಿಲ್ಲ ಎಂದರು.

-ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next