ಯಾರಿಗೆ ತಾನೇ ವೀಳ್ಯದೆಲೆ ಗೊತ್ತಿಲ್ಲ ಹೇಳಿ? ಅದರಲ್ಲೂ ಭಾರತೀಯ ಸಂಪ್ರದಾಯದಲ್ಲಂತೂ ವೀಳ್ಯದೆಲೆಗೆ ಅದರದೇ ಅಗ್ರಸ್ಥಾನವಿದೆ. ಕರ್ನಾಟಕದಲ್ಲಿ ಎಲ್ಲಾ ಶುಭ ಸಮಾರಂಭಕ್ಕಂತೂ ಈ ಎಲೆ ಬೇಕೇ ಬೇಕು. ಇದೊಂದು ಪಾಚಿ ಹಸುರಿನ ತೆಳುವಾಗಿರುವ ಎಲೆ. ಏಳು ಬಗೆಯ ವೀಳ್ಯದೆಲೆ ಇವೆ ಎಂದು ಆಯುರ್ವೇದದಲ್ಲಿ ಬಣ್ಣಿಸಿದ್ದಾರೆ. ವೀಳ್ಯದೆಲೆ ಹಾಗೂ ಕಾಳು ಮೆಣಸಿನ ಎಲೆ ನೋಡಲು ಒಂದೇ ರೀತಿ ಇರುತ್ತದೆ.
ಹಳ್ಳಿಯ ಕಡೆ ನೋಡಿದರೆ ಮನೆಯಲ್ಲಿನ ಹಿರಿಯರು ಮಧ್ಯಾಹ್ನ ಅಥವಾ ರಾತ್ರಿ ಊಟ ಆದ ನಂತರ ಎಲೆ,ಅಡಿಕೆ ಹಾಕುವುದು ಸಾಮಾನ್ಯ.ತಿಂದ ಆಹಾರ ಜೀರ್ಣಗೊಳ್ಳಲು ಅಥವಾ ಬಾಯಿಯ ದುರ್ವಾಸನೆ ಹೋಗಲಾಡಿಸಲು ಇದು ಉತ್ತಮ. ಅಷ್ಟೇ ಅಲ್ಲದೆ ಇದು ಜ್ವರ, ಕೆಮ್ಮು, ಮಧುಮೇಹ ಹೀಗೆ ಹತ್ತು ಹಲವಾರು ಔಷಧ ಗುಣಗಳನ್ನು ಹೊಂದಿದೆ.
ಇನ್ನೂ ಕನ್ನಡಿಗರಿಗೆಲ್ಲರಿಗೂ ತಿಳಿದ ಒಂದು ಸಿನೆಮಾ ಹಾಡಿದೆ ಮಲ್ನಾಡ್ ಅಡಿಕೆ ಮೈಸೂರು ವೀಳ್ಯದೆಲೆ ಬೆರೆತರೆ ಕೆಂಪು ಎಂದು. ಅಷ್ಟಕ್ಕೂ ಮೈಸೂರು ವೀಳ್ಯದೆಲೆಯ ವಿಶೇಷತೆ ಏನು? ಹಾಗಾದರೆ ಬೇರೆಲ್ಲೂ ಈ ವೀಳ್ಯದೆಲೆ ಇಲ್ವಾ? ಮೈಸೂರಿನ ವೀಳ್ಯದೆಲೆಯು ಹೃದಯದ ಆಕಾರದಲ್ಲಿದೆ. ಇದು ನಯವಾದ ರಚನೆ ಹಾಗೂ ಬಿಸಿ ರುಚಿಯಿಂದ ಕೂಡಿರುತ್ತದೆ. ಆದ್ದರಿಂದ ಈ ಎಲೆಯು ಇತರೆ ಎಲೆಗಳಿಗಿಂತ ವಿಭಿನ್ನ ಎನ್ನುತ್ತಾರೆ.
ಮೈಸೂರು ಮಹಾರಾಜರ ತೋಟದಿಂದ ಶುರುವಾದ ವೀಳ್ಯದೆಲೆ ಕೃಷಿಯು ಕ್ರಮೇಣ ಹಳೆ ಅಗ್ರಹಾರ, ಮೈಸೂರು – ನಂಜನಗೂಡು ರಸ್ತೆ ಸಂಪರ್ಕಿಸುವ ವಿದ್ಯಾರಣ್ಯಪುರಂವರೆಗೂ ಎಕರೆಗಟ್ಟಲೆ ಹರಡಿತು. ಕ್ರಮೇಣ ಮೈಸೂರು ಸುತ್ತಮುತ್ತಲು ವೀಳ್ಯದೆಲೆ ಕೃಷಿ ಸಾಗಿತು. ಮೈಸೂರು ಜಿಲ್ಲೆಯ ಉದ್ಬೂರಿನ ಶ್ರೀಲಕ್ಷ್ಮೀನಾರಾಯಣ ಸಂತೆಯು ವೀಳ್ಯದೆಲೆ ವ್ಯಾಪಾರಕ್ಕೆ ಬಹಳ ಹೆಸರುವಾಸಿಯಾಗಿದೆ.
n ಸ್ನೇಹ ವರ್ಗೀಸ್
ಸಂತ ಫಿಲೋಮಿನಾ ಕಾಲೇಜು, ಮೈಸೂರು