Advertisement
ಮೈಸೂರು ರಾಜಮನೆತನಕ್ಕೆ ಶೃಂಗೇರಿ ಮಠದ ಮೇಲೆ ಮೊದಲಿನಿಂದಲೂ ಅತೀವ ಭಕ್ತಿ. ಒಂದು ಕಾಲದಲ್ಲಿ ವಿಜಯನಗರ ಅರಸರು ಶ್ರೀಮಠದ ಮೇಲೆ ತೋರಿದ ಭಕ್ತಿ- ಆದರಗಳನ್ನೇ, ಮೈಸೂರು ಅರಸರು ಮುಂದುವರಿಸಿದರು ಅಂತಲೇ ವ್ಯಾಖ್ಯಾನಿಸಬಹುದು. ಮಿಗಿಲಾಗಿ, ಮೈಸೂರಿನ ಅರಮನೆಯಲ್ಲಿ ದಸರಾ ಕಾರ್ಯಕ್ರಮಗಳು ಚಾಲುಗೊಳ್ಳುವುದೇ, ಶೃಂಗೇರಿಯ ಜಗದ್ಗುರುಗಳ ಆಶೀರ್ವಾದದೊಂದಿಗೆ.
Related Articles
Advertisement
ಲಾರ್ಡ್ ರಿಪ್ಪನ್ನರು ಭಾರತದ ವೈಸರಾಯ್ ಆಗಿದ್ದಾಗ, (ಕ್ರಿ.ಶ. 1880-84) ಮೈಸೂರಿನಲ್ಲಿ ಕಮೀಷನರ್ ಆಡಳಿತವು ಕ್ರಿ.ಶ.1881ರಲ್ಲಿ ಕೊನೆಗೊಂಡಿತು. ನಂತರ ಮುಮ್ಮಡಿ ಕೃಷ್ಣರಾಜ ಒಡೆಯರ ದತ್ತಕ ಪುತ್ರ ಚಾಮರಾಜ ಒಡೆಯರ್ ಪಟ್ಟವೇರಿದರು. ಕಮೀಷನರ್ ಆಡಳಿತ ಕಾಲದಿಂದಲೂ ಮುಮ್ಮಡಿ ಕೃಷ್ಣರಾಜ ಒಡೆಯರ್, ಶೃಂಗೇರಿಯೊಂದಿಗೆ ಆಪ್ತ ಬಂಧ ಇರಿಸಿಕೊಂಡಿದ್ದರು.
1931ರಲ್ಲಿ ಅಭಿನವ ವಿದ್ಯಾತೀರ್ಥ ಸ್ವಾಮಿಗಳು ಸನ್ಯಾಸ ಪಡೆದಂದಿನಿಂದ ಶೃಂಗೇರಿ ಮಠದೊಂದಿಗೆ, ಮೈಸೂರಿನ ಅರಸರ ಸಂಬಂಧವು ಅತ್ಯಂತ ಹತ್ತಿರವಾಯಿತು. ಜಯಚಾಮರಾಜ ಒಡೆಯರು ತಮ್ಮ ಆಯುಷ್ಯದ ಕೊನೆಯವರೆಗೂ ಶ್ರೀ ಅಭಿನವ ವಿದ್ಯಾತೀರ್ಥರ ಪಾದ ಸೇವಕರಾ ಗಿದ್ದರು. ಜಯಚಾಮರಾಜ ಒಡೆಯರವರು ತಮ್ಮ ಮರಣಕ್ಕೆ (ಸೆ.23, 1974) ಕೆಲವೇ ದಿನಗಳ ಮುಂಚೆ ಶೃಂಗೇರಿಗೆ ಬಂದು ಶ್ರೀ ಶಾರದಾಂಬೆ ಹಾಗೂ ಜಗದ್ಗುರುಗಳ ದರ್ಶನ ಪಡೆದಿದ್ದರು.
ಈಗಲೂ ಮಹಾರಾಜ ಯದುವೀರ, ರಾಜಮಾತೆ ಪ್ರಮೋದಾದೇವಿ ಅವರು ಶೃಂಗೇರಿ ಮಠಕ್ಕೆ ಭೇಟಿಕೊಡುತ್ತಲೇ ಇರುತ್ತಾರೆ. ಮೈಸೂರು ಅರಮನೆಯಲ್ಲಿ ಶೃಂಗೇರಿ ಕಿರೀಟವಿದ್ದು, ದಸರಾ ದರ್ಬಾರ್ ವೇಳೆ ಇದಕ್ಕೆ ಪೂಜೆಯೂ ಸಲ್ಲಿಕೆಯಾಗುತ್ತದೆ. ಶೃಂಗೇರಿಯ ದಸರಾ ಈಗಲೂ ಮಲೆನಾಡಿಗರ ಪಾಲಿಗೆ ಮೈಸೂರು ದಸರಾವಿದ್ದಂತೆ. ಶಾರದಾ ಮಾತೆಗೆ, ನಿತ್ಯವೂ ವಿವಿಧ ಅಲಂಕಾರದೊಂದಿಗೆ ಪೂಜೆ, ಮಹಾರಥೋತ್ಸವ, ಜಗದ್ಗುರುಗಳ ಕಿರೀಟಾಧಾರಣೆ ಇವೆಲ್ಲವೂ ಪರಮ ಶಾಸ್ತ್ರೋಕ್ತ, ವೈಭವಯುತವಾಗಿ ನಡೆಯುತ್ತದೆ.
* ರಮೇಶ್ ಕುರುವಾನೆ