ದೇಶದಲ್ಲೇ ಸ್ವತ್ಛತೆಗೆ ಹೆಸರಾಗಿರುವ ಮೈಸೂರು ನಗರ ಇದೀಗ ಮತ್ತೂಂದು ಕೀರ್ತಿಗೆ ಪಾತ್ರವಾಗಿದೆ. ಅದುವೇ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯಲ್ಲಿ ದೇಶದಲ್ಲೇ ಉತ್ಪಾದಕರ ವಿಸ್ತರಿತ ಹೊಣೆಗಾರಿಕೆ (ಇಪಿಆರ್) ಸರ್ಟಿಫಿಕೇಟ್ ಪಡೆದ ದ್ವಿತೀಯ ನಗರ ಎಂಬ ಶ್ರೇಯಸ್ಸನ್ನು ಪಡೆದುಕೊಂಡಿದೆ. ಮಧ್ಯಪ್ರದೇಶದ ಇಂದೋರ್ ಮೊದಲ ನಗರವಾಗಿದೆ. ಅದರಲ್ಲೂ ಪ್ಲಾಸ್ಟಿಕ್ ತ್ಯಾಜ್ಯದಲ್ಲಿ ಕೆಟಗರಿ 3ರಲ್ಲಿ ಇಪಿಆರ್ ಸರ್ಟಿಫಿಕೇಟ್ ಪಡೆದ ದೇಶದ ಮೊದಲ ಸ್ಥಳೀಯ ಸಂಸ್ಥೆ ಎಂಬ ಹಿರಿಮೆ ಮೈಸೂರು ಮಹಾನಗರ ಪಾಲಿಕೆಯದು.
ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯನ್ನು ಕಡಿಮೆ ಮಾಡುವುದು ಹಾಗೂ ಸಂಗ್ರಹವಾಗುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನಿಯಮಗಳ ಅನುಸಾರ ಸಂಸ್ಕರಣೆಗೆ ಕ್ರಮ ಕೈಗೊಳ್ಳುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ. ಸ್ವತ್ಛತಾ ನಗರಿ ಮೈಸೂರು ಪ್ಲಾಸ್ಟಿಕ್ ತ್ಯಾಜ್ಯ ವನ್ನು ಸಂಗ್ರಹಿಸಿ, ಸಂಸ್ಕರಿಸಿ ಮರು ಬಳಕೆ ಮಾಡಿಕೊಳ್ಳುವ ವಿಚಾರದಲ್ಲಿ ಈಗ ಅಗ್ರಸ್ಥಾನದಲ್ಲಿದೆ.
ಗ್ರಾಹಕರು ಕಂಪೆನಿಗಳ ಉತ್ಪನ್ನಗಳನ್ನು ಉಪಯೋಗಿಸಿದ ಅನಂತರ ಬರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಂಪೆನಿಯವರೇ ಮರು ಸಂಗ್ರಹಿಸಿ ಮರು ಬಳಕೆ ಅಥವಾ ವೈಜ್ಞಾನಿಕವಾಗಿ ಸಂಸ್ಕರಣೆ ಮಾಡುವ ಜವಾಬ್ದಾರಿಯನ್ನು ನೀಡಲಾಗಿದೆ. ಈ ಹೊಣೆಗಾರಿಕೆಯನ್ನು ಉತ್ಪಾದಕರ ವಿಸ್ತರಿತ ಹೊಣೆಗಾರಿಕೆ ಎಂದು ಕರೆಯಲಾಗುತ್ತದೆ.
ವಸ್ತುಗಳನ್ನು ಪ್ಲಾಸ್ಟಿಕ್ ಮೂಲಕ ಪ್ಯಾಕೇಜಿಂಗ್ ಮಾಡಿ ಮಾರುಕಟ್ಟೆಗೆ ಕಳುಹಿಸುವ ಕಂಪೆನಿಗಳಿಗೆ ಈ ನಿಯಮ ಅನ್ವಯವಾಗುತ್ತದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ಥಳೀಯ ಸಂಸ್ಥೆಗಳಿಂದಲೇ ಸಂಗ್ರಹಿಸಿ ನಿರ್ವಹಿಸುತ್ತಿರುವುದರಿಂದ ಇದರ ದಾಖಲೆಯನ್ನು ಪಿಐಬಿಒಗಳಿಗೆ (ಉತ್ಪಾದಕರು, ಆಮದುದಾರರು, ಬ್ರ್ಯಾಂಡ್ ಮಾಲಕರು) ಲಭ್ಯವಾಗುವಂತೆ ಮಾಡಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವೆಬ್‌ಸೈಟ್ ಅಭಿವೃದ್ಧಿಪಡಿಸಿದೆ. ಮೈಸೂರು ಮಹಾನಗರ ಪಾಲಿಕೆ ಈಗ ಮೈಸೂರು ನಗರದಲ್ಲಿ ಪ್ರತಿದಿನ ಸಂಗ್ರಹವಾಗುವ ಮೌಲ್ಯವಿಲ್ಯದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಣಾ ಘಟಕಕ್ಕೆ ಕಳುಹಿಸಿ (ಜಾಗೃತ್ ಟೆಕ್ ಪ್ರೈವೇಟ್ ಲಿಮಿಟೆಡ್) ಫುಟ್‌ಪಾತ್ ಇಂಟರ್ ಲಾಕ್ ಟೈಲ್ಸ್‌ಗಳನ್ನು ತಯಾರಿಸುತ್ತಿದೆ.
ಹೀಗೆ ಪ್ರತಿದಿನ ಜಾಗೃತ್ ಟೆಕ್ ಪ್ರೈವೇಟ್ ಲಿಮಿಟೆಡ್‌ಗೆ ಕಳುಹಿಸುವ ಪ್ಲಾಸ್ಟಿಕ್ ಪ್ರಮಾಣವನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವೆಬ್‌ಸೈಟ್‌ನಲ್ಲಿ ಜಾಗೃತ್ ಟೆಕ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಅಪ್‌ಲೋಡ್ ಮಾಡಲಾಗುತ್ತಿದೆ. ಅನಂತರ ಜಾಗೃತ್ ಟೆಕ್ ಪ್ರೈವೇಟ್ ಲಿ.ಅವರು ವೆಬ್‌ಸೈಟ್‌ನಲ್ಲಿ ಇಪಿಆರ್ ಸರ್ಟಿಫಿಕೇಟ್ ಸಿದ್ಧಪಡಿಸಿ ಪಾಲಿಕೆಯ ಖಾತೆಗೆ ವರ್ಗಾಯಿಸುತ್ತಾರೆ. ಜಾಗೃತ್ ಟೆಕ್ ಪ್ರೈವೇಟ್ ಲಿಮಿಟೆಡ್‌ಗೆ ಮಾರ್ಚ್‌ನಲ್ಲಿ ಕಳುಹಿಸಲಾದ ಒಟ್ಟು 11 ಮೆಟ್ರಿಕ್ ಟನ್ ಪ್ಲಾಸ್ಟಿಕ್ ತ್ಯಾಜ್ಯದ ಇಪಿಆರ್ ಸರ್ಟಿಫಿಕೇಟ್ ಅನ್ನು ಜಾಗೃತ್ ಟೆಕ್ ಪ್ರೈವೇಟ್ ಲಿ. ಪಾಲಿಕೆಯ ಖಾತೆಗೆ ವರ್ಗಾಯಿಸಿದೆ. ಹೀಗಾಗಿ ಇಪಿಆರ್ ಪಡೆದ ದೇಶದ 2ನೇ ಸ್ಥಳೀಯ ಸಂಸ್ಥೆ ಎಂಬ ಶ್ರೇಯಸ್ಸಿಗೆ ಮೈಸೂರು ಮಹಾನಗರ ಪಾಲಿಕೆ ಪಾತ್ರವಾಗಿದೆ.
ಸ್ಥಳೀಯ ಸಂಸ್ಥೆಗಳು ಹೀಗೆ ಪಡೆದ ಇಪಿಆರ್ ಸರ್ಟಿಫಿಕೇಟ್‌ಗಳನ್ನು ಕಂಪೆನಿಯವರು ಸ್ಥಳೀಯ ಸಂಸ್ಥೆಗಳಿಗೆ ಹಣ ನೀಡಿ ಖರೀದಿಸುತ್ತದೆ. ಕಂಪೆನಿಗಳಿಗೆ ಇಪಿಆರ್‌ಗೆ ಇಂತಿಷ್ಟು ವೆಚ್ಚ ಮಾಡಬೇಕೆಂಬ ನಿಯಮ ಇದೆ. ಇದು ಉತ್ಪಾದಕರ ಹೊಣೆಗಾರಿಕೆಯಾಗಿದೆ ಎನ್ನುತ್ತಾರೆ ಮೈಸೂರು ಮಹಾನಗರ ಪಾ ಲಿಕೆ ಆರೋಗ್ಯಾಧಿಕಾರಿ ಡಾ| ಡಿ.ಜಿ. ನಾಗರಾಜು.
ಕೂಡ್ಲಿ ಗುರುರಾಜ್